ಬಹಿರಂಗ ಪ್ರಚಾರಕ್ಕೆ ಅದ್ಧೂರಿ ತೆರೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮೇ 3
ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೇ 3ರ ಸಂಜೆ 5ಕ್ಕೆ ತೆರೆ ಬಿದ್ದಿದೆ. ಜಿಲ್ಲೆಯ 9 ವಿಧಾನಸಬಾ ಕ್ಷೇತ್ರಗಳಲ್ಲಿ ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಎಲ್ಲ 131 ಉಮೇದುವಾರರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಪ್ರಮುಖ ಪಟ್ಟಣ, ಬಡಾವಣೆಗಳಲ್ಲಿ ರೋಡ್ ಶೋ, ಪಾದಯಾತ್ರೆ, ಮನೆ ಮನೆ ತೆರಳುವ ಮೂಲಕ ಮತಯಾಚಿಸಿದ್ದಾರೆ.
ಜೇವರ್ಗಿಯಲ್ಲಿ ಕಾಂಗ್ರೆಸ್ ಹುರಿಯಾಳು ಡಾ. ಅಜಯ್ಸಿಂಗ್, ಅವರ ತಾಯಿ ಪ್ರಭಾವತಿ ಧರ್ಮಸಿಂಗ್ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಇಲ್ಲೇ ಬಿಜೆಪಿ ಉಮೇದುವಾರ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಕೇದಾರಲಿಂಗಯ್ಯ ಅವರೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಪ್ರಮುಖರನ್ನು ಕಂಡರೆ, ಜೇವರ್ಗಿಯಲ್ಲೇ ಪಾದಯಾತ್ರೆ ಮಾಡಿ, ರೋಡ್ ಶೋ ಮೂಲಕ ಮತಯಾಚಿಸಿದರು.
ಅಫಜಲ್ಪುರದಲ್ಲಿ ಕೆಜೆಪಿಯ ಎಂ.ವೈ. ಪಾಟೀಲ್, ಕಾಂಗ್ರೆಸ್ನ ಮಾಲೀಕಯ್ಯಾ ಗುತ್ತೇದಾರ್, ಸೇಡಂನಲ್ಲಿ ಕೆಜೆಪಿಯ ವೈಜನಾಥ ಪಾಟೀಲ್, ಕಾಂಗ್ರೆಸ್ಸಿನ ಡಾ. ಶರಣಪ್ರಕಾಶ ಪಾಟೀಲ್, ಬಿಜೆಪಿಯ ತೇಲ್ಕೂರ್ ರಾಜಕುಮಾರ್, ಜೆಡಿಎಸ್ನ ಮುಕ್ರಂಖಾನ್ ಜನರನ್ನು ಕಂಡು ಮತ ಕೇಳಿದರು.
ಇದೇ ರೀತಿ ಚಿಂಚೋಳಿ, ಚಿತ್ತಾಪುರ, ಗುಲ್ಬರ್ಗ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ, ಚಿಂಚೋಳಿ ಸೇರಿದಂತೆ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ತರಹೇವಾರಿ ಪ್ರಚಾರ ನಡೆಸುವ ಮೂಲಕ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಮುನ್ನವೇ ಹೆಚ್ಚಿನ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ.
ಕಾಂತಾ ಬಿರುಸಿನ ಪ್ರಚಾರ: ಗುಲ್ಬರ್ಗ(ದ) ಕೆಜೆಪಿ ಅಭ್ಯರ್ಥಿ ಎಸ್.ಕೆ. ಕಾಂತಾ ಉದನೂರ್, ನಂದಿಕೂರ, ರಹೇಮತ ನಗರ, ಬುದ್ದನಗರ ಸೇರಿದಂತೆ ಹಲವು ಬಡಾವಣೆ, ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಗುಲ್ಬರ್ಗ ನಗರಕ್ಕೆ ಭೀಮಾ ನದಿಯಿಂದ, ಭೋಸ್ಗಾ ಕೆರೆಯಿಂದ ನೀರು ಪೂರೈಸುವ ಯೋಜನೆಗಳನ್ನು ಸರ್ಕಾರ ರೂಪಿಸುವಲ್ಲಿ ಕಾಂತಾ ಅವರ ಶ್ರಮ ಬಹಳಷ್ಟಿದೆ ಎಂಬ ಮಾತುಗಳು ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಕೇಳಿ ಬಂದವು.
ಪೌರ ಕಾಮಿಂಕರ ಸಮಸ್ಯೆಗಳು, ನಗರದ ಮೂಲ ಸೌಕರ್ಯ, ಭೂಗಳ್ಳರ ಹಾವಳಿಯಂತಹ ಪಿಡುಗುಗಳನ್ನು ಹತ್ತಿಕ್ಕಲು ಕಾಂತಾ ಅನೇಕ ಹೋರಾಟಗಳನ್ನು ಕೈಗೊಂಡು ಜೈಲು ಸೇರಿದ್ದಾರೆ. ಇಂತಹ ಹೋರಾಟಗಾರನಿಗೆ ಬೆಂಬಲಿಸಿ ಎಂದು ಕೆಜೆಪಿ ಯುವ ಘಟಕದ ಸಚಿನ ನಿಗ್ಗುಡಗಿ ಕೋರಿದರು. ರಾಜು ನವಲ್ದಿ, ದೀಪಕ ಗಾಲಾ, ಭವಾನಿ ವಳಕೇರಿ, ವಿಜಯಕುಮಾರ್ ಪಟ್ಟಣಕರ್, ಬಾಬು ಪಾಟೀಲ್, ಶಾಂತಕುಮಾರ್ ಬಿರಾದಾರ್, ಶ್ರೀಮಂತ ಉದನೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂದೂರದಲ್ಲಿ ಮಾಮಾ ಪ್ರಚಾರ: ಬಹಿರಂಗ ಪ್ರಚಾರದ ಕೊನೆಯ ದಿನ ಸಿಪಿಎಂ ಗುಲ್ಬರ್ಗ ಗ್ರಾಮೀಣ ಹುರಿಯಾಳು ಮಾರುತಿ ಮಾನ್ಪಡೆ ನಂದೂರ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿದರು.
ಕೃಷಿಯನ್ನೇ ಅವಲಂಬಿಸಿರುವ ದೇಶದ ರೈತರು ಇಂದು ಹೊಲ ಮನೆ ಮಾರಿಕೊಂಡು ಪರ ಗ್ರಾಮಗಳಿಗೆ ಹೋಗಿ ಜೀವನ ಸಾಗಿಸುವ ಪರಸ್ಥಿತಿ ಎದುರಾಗಿದೆ. ಈ ರೈತರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರು ಯಾರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ದೇಶವನ್ನು ಹಾಳು ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಈಡೀ ಕರ್ನಾಟಕ ರಾಜ್ಯವನ್ನೇ ಹಾಳು ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂದೂರ ಕೆ. ಗ್ರಾಮದಲ್ಲಿ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಎದ್ದು ಕಾಣುತ್ತಿದ್ದು ನೀವು ನನಗೆ ಮುಂಬರುವ ಚುನಾವಣೆಯಲ್ಲಿ ಆಶೀರ್ವದಿಸಿದರೆ ನಾನು ಸದಾ ನಿಮ್ಮ ಸಮಸ್ಯೆಗೆ ಸ್ಪಂದಿಸಿ ಕಷ್ಟ ಕಾರ್ಪಣ್ಯಗಳಲ್ಲಿ ಭಾಗಿಯಾಗುತ್ತೇನೆ ಎಂದು ಗ್ರಾಮಸ್ಥರಿಗೆ ಮಾನ್ಪಡೆ ಭರವಸೆ ಕೊಟ್ಟರು. ದೊಡ್ಡಪ್ಪ ಕಣದಾಳ, ಚನ್ನಪ್ಪ ಕಲ್ಲ ನಂದೂರ ಮತ್ತು ಗ್ರಾಮದ ರೈತರು ಭಾಗವಹಿಸಿದ್ದರು.
ಬೀದಿ ವರ್ತಕರ ಸಂಘ ಬೆಂಬಲ: ಸಾರ್ವಜನಿಕರ ಪರವಾಗಿ ಹೋರಾಟಗಳನ್ನು ಮಾಡುತ್ತ ಜಿದ್ದಿಗೆ ಬಿದ್ದು ಜನತೆಗೆ ನೆರವು ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವುದರಿಂದ ತಾವು ಕೆಜೆಪಿ ದಕ್ಷಿಣ ಗುಲ್ಬರ್ಗ ಅಭ್ಯರ್ಥಿ ಕಾಂತಾರಿಗೆ ಬೆಂಬಲಿಸುವುದಾಗಿ ಬೀದಿ ಬದಿಯ ವರ್ತಕರ ಸಂಘ ನಿರ್ಧರಿಸಿದೆ. ಸಭೆಯಲ್ಲಿ ಈ ಕುರಿತಂತೆ ನಿರ್ಣಯ ಕೈಗೊಳ್ಳಲಾಗಿದ್ದು ವರ್ತಕರೆಲ್ಲ ಕಾಂತಾರ ಸರಳತೆ ಮೆಚ್ಚಿದ್ದಾರೆಂದು ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಹೇಳಿದ್ದಾರೆ.
ಬೀದಿ ವರ್ತಕರ ಸಂಘದ ಸಭೆಯಲ್ಲಿ ಕಾರ್ಯದರ್ಶಿ ಮಸ್ತಾನ್ ಪಟೇಲ್, ವಿಭಾಗೀಯ ಅಧ್ಯಕ್ಷ ಅಮೃತ ಪಾಟೀಲ್, ನಗರಾಧ್ಯಕ್ಷ ಸುನೀಲ್, ವಿಶಾಲದೇವ, ಶಿವಪುತ್ರ ಮೊದಲಾದವರು ಭಾಗವಹಿಸಿದ್ದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ನಾಳೆ ಮತದಾನ: ಮೇ 5ರ ಭಾನುವಾರ ಬೆ.7ರಿಂದ ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಅಭ್ಯರ್ಥಿಗಳು ಶನಿವಾರ ಮನೆ ಮನೆ ತೆರಳಿ ಮತಯಾಚಿಸಲಿದ್ದಾರೆ. ಜಿಲ್ಲಾಡಳಿತ ಮುಕ್ತ- ನ್ಯಾಯಸಮ್ಮತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.