ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮತದಾರರಿಗೆ ಬಸ್ ವ್ಯವಸ್ಥೆ: ಡಿಸಿ

Srinivasa Murthy VN
Updated On : 4 May 2013, 10:49 am

ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 3
ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತಗಟ್ಟೆ ದೂರವಿರುವ ಕಡೆಗಳಲ್ಲಿ ಮತದಾನ ಮಾಡಲು ಮತದಾರರಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಮತಗಟ್ಟೆಗಳು ದೂರ ಇವೆ. ಅಲ್ಲಿಗೆ ಬರಲು ಮತದಾರರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇದು ಉಚಿತವಲ್ಲದಿದ್ದರೂ ಮತದಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಸೌಲಭ್ಯ ಮಾಡಲಾಗುತ್ತಿದೆ. ಹಿಂದಿನ ಚುನಾವಣೆಗಳಲ್ಲಿ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಕರೆತರುತ್ತಿದ್ದರು. ಇದನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದ್ದು, ಇದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಸಾಮಾನ್ಯ ದರವನ್ನು ಪಡೆದು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಮತದಾನ ಹೆಚ್ಚಳಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮತಗಟ್ಟೆಗಳಲ್ಲಿ ಮೂಲ ಸೌಕರ್ಯ: ಮತಗಟ್ಟೆಗಳಲ್ಲಿ ಕುಡಿವ ನೀರು, ನೆರಳು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮತದಾನ ಕೇಂದ್ರಗಳಲ್ಲಿ ಫ್ಯಾನ್‌ಗೆ ನಿರ್ಬಂಧವಿಲ್ಲ. ಮತಗಟ್ಟೆಗಳಲ್ಲಿ ಯಾವುದಾದರೂ ಪಕ್ಷದ ಚಿಹ್ನೆ ಇರುವ ಚಿತ್ರಗಳು ಇದ್ದಲ್ಲಿ ಅವುಗಳನ್ನು ತೆರವು ಮಾಡಲಾಗುವುದು. ಚುನಾವಣೆ ಪ್ರಕ್ರಿಯೆಗೆ ನಿಯೋಜಿಸಿರುವ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹೊರತುಪಡಿಸಿ ಮತಗಟ್ಟೆಯಿಂದ 200 ಮೀ. ಪ್ರದೇಶದಲ್ಲಿ ಪ್ರವೇಶಿ ನಿಷೇಧಿಸಲಾಗಿದೆ. ಮತ ಚಲಾಯಿಸುವವರಿಗೆ ಮಾತ್ರ ಬರಲು ಅವಕಾಶವಿದೆ ಎಂದು ತಿಳಿಸಿದರು.
ಶೇ.75 ಮತದಾನ ನಿರೀಕ್ಷೆ: ಪ್ರತಿ ಅಭ್ಯರ್ಥಿಗೆ ಮೂರು ವಾಹನಗಳ ಪರವಾನಗಿ ನೀಡಲಾಗಿದ್ದು, ಅದರಲ್ಲಿ ವಾಹನ ಚಾಲಕ ಸೇರಿ 5 ಜನರಿಗಿಂತ ಹೆಚ್ಚಾಗಿದ್ದರೆ ಅಂಥವರ ಮೇಲೆ ಕ್ರಮ ಜರಗಿಸಲಾಗುವುದು. ಕಳೆದ ಚುನಾವಣೆಯಲ್ಲಿ ಶೇ. 52ರಷ್ಟು ಮತದಾನವಾಗಿತ್ತು. ಈ ಸಲ ಮತದಾರರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರಿಂದ ಶೇ. 75ರಷ್ಟು ಮತ ಚಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
172 ಮತಗಟ್ಟೆ: ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಲ್ಲಿ 955 ಮಟಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ 172 ಅತಿಸೂಕ್ಷ್ಮ ಮತ್ತು 190 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಉಳಿದ 553 ಸಾಮಾನ್ಯ ಮತಗಟ್ಟೆಗಳಾಗಿವೆ.  ಈ ಎಲ್ಲ ಕೇಂದ್ರಗಳಲ್ಲಿ ಕೇಂದ್ರ ಮೀಸಲು ಪಡೆ ಸಿಬ್ಬಂದಿ, ಸ್ಥಳೀಯ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
34 ಪ್ರಕರಣ ದಾಖಲು: ಈ ಬಾರಿ ಜಿಲ್ಲೆಯಲ್ಲಿ 8,01,900  ಜನರು ಮತದಾನದ ಹಕ್ಕು ಪಡೆದಿದ್ದಾರೆ. 4,03,198 ಪುರುಷರು, 3,98,66 ಮಹಿಳಾ ಹಾಗೂ ಇತರೆ 36 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಉಪ ಮುಖ್ಯಮಂತ್ರಿ ಈಶ್ವರಪ್ಪ ಸೇರಿದಂತೆ ಒಟ್ಟು 34 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 33.60 ಲಕ್ಷ ನಗದು, 1,110 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಬಹಿರಂಗ ಪ್ರಚಾರ ಶುಕ್ರವಾರ ಸಂಜೆ 5ಕ್ಕೆ ಮುಕ್ತಾಯವಾಗಿದ್ದು, ಶನಿವಾರ ಯಾವ ಅಭ್ಯರ್ಥಿಯೂ ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಮನೆಮನೆ ಭೇಟಿಗೆ ಅವಕಾಶವಿದ್ದು, 5 ಜನರಿಗಿಂತ ಹೆಚ್ಚು ಜನರು ಹೋಗುವಂತಿಲ್ಲ. ಮತದಾನದ ಹಿಂದಿನ ದಿನ ಹೆಚ್ಚು ಅಕ್ರಮ ನಡೆಯುವ ಸಾಧ್ಯತೆ ಇರುವುದರಿಂದ ಸೂಕ್ತ ನಿಗಾ ವಹಿಸಲಾಗಿದೆ. ಕಟ್ಟುನಿಟ್ಟಿನ ಭದ್ರತಾ ಕ್ರಮ ಜರುಗಿಸಲಾಗುತ್ತಿದೆ. ಮತದಾನ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ರಾಜೇಂದ್ರ ಚೋಳನ್ ತಿಳಿಸಿದರು.
ಸಕಲ ಸಿದ್ಧತೆ: ಮತಯಂತ್ರಗಳೊಂದಿಗೆ ಮತಗಟ್ಟೆಗೆ ತೆರಳುವ ಚುನಾವಣಾ ಸಿಬ್ಬಂದಿಗಾಗಿ ಸಾರಿಗೆ ಸಂಸ್ಥೆಯ 138 ಬಸ್ಸುಗಳು, 118 ಜೀಪಿನ ವ್ಯವಸ್ಥೆ ಮಾಡಲಾಗಿದೆ. 955 ಎಲೆಕ್ಟ್ರಾನಿಕ್ ಮತಯಂತ್ರಗಳು ಹಾಗೂ ಹೆಚ್ಚುವರಿಯಾಗಿ 500ರಷ್ಟು ಮತಯಂತ್ರಗಳನ್ನು ಸಿದ್ಧವಾಗಿಡಲಾಗಿದೆ. ಮತಯಂತ್ರದಲ್ಲಿ ತಾಂತ್ರಿಕ ತೊಂದರೆಯಾದಲ್ಲಿ ತಕ್ಷಣ ಬದಲಿಸಲಾಗುವುದು. ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ ಎಂದರು.
ಯಾದಗಿರಿ ಮತ್ತ ಗುರುಮಠಕಲ್ ಕ್ಷೇತ್ರಗಳಿಗೆ ಯಾದಗಿರಿಯ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಮಸ್ಟರಿಂಗ್ ಕೇಂದ್ರ ತೆರೆಯಲಾಗಿದೆ. ಶಹಾಪುರದಲ್ಲಿ ಮೊರಾರ್ಜಿ ದೇಸಾಯಿ, ಸುರಪುರದಲ್ಲಿ ಪ್ರಭು ಕಾಲೇಜಿನಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಎಲ್ಲಾ ಕ್ಷೇತ್ರಗಳ ಮತ ಎಣಿಕೆಯು ಯಾದಗಿರಿಯ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಕಟ್ಟಡದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಮತಗಟ್ಟೆ ಸಿಬ್ಬಂದಿಗೆ ಬಸ್ ಸೌಕರ್ಯ: ರಾಜೇಂದ್ರ ಚೋಳನ್
ಕನ್ನಡಪ್ರಭ ವಾರ್ತೆ ಯಾದಗಿರಿ  ಮೇ 3
ಚುನಾವಣೆ ಅಂಗವಾಗಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಸಿಬ್ಬಂದಿಯನ್ನು ಜಿಲ್ಲಾ ವ್ಯಾಪ್ತಿಯಲ್ಲಿಯೇ ಬೇರೆ ಕ್ಷೇತ್ರಗಳಲ್ಲಿ ನೇಮಕ ಮಾಡಲಾಗಿದ್ದು, ಈ ಸಿಬ್ಬಂದಿ ಮಸ್ಟರಿಂಗ್ ದಿನವಾದ ಮೇ 4ರಂದು ಬೆಳಗ್ಗೆ ಮಸ್ಟರಿಂಗ್ ಕೇಂದ್ರಕ್ಕೆ ಹಾಜರಾಗಲು ಹಾಗೂ ಡಿ-ಮಸ್ಟರಿಂಗ್ ಮುಗಿದ ಬಳಿಕ ತಮ್ಮ ತಾಲೂಕು ಕೇಂದ್ರ ಸ್ಥಾನಕ್ಕೆ ಹೋಗಲು ಸಾರಿಗೆ ಸಂಸ್ಥೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಮೇ 4ರಂದು ಬೆ.6.30ಕ್ಕೆ ಸುರಪುರ ಪ್ರಭು ಕಾಲೇಜಿನಿಂದ 10 ಬಸ್‌ಗಳನ್ನು ಬಿಡುತ್ತಿದ್ದು, ಅವು ಶಹಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬೇವಿನಹಳ್ಳಿಗೆ ತಲುಪಲಿವೆ. ಯಾದಗಿರಿಯ ಡಾನ್ ಬಾಸ್ಕೋ ಸ್ಕೂಲ್‌ನಿಂದ 12 ಮತ್ತು 8 ಬಸ್‌ಗಳು ಗುರುಮಠಕಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಡಾನ್ ಬಾಸ್ಕೋ ಸ್ಕೂಲ್ ಯಾದಗಿರಿಗೆ ತಲುಪಲಿವೆ.
ಅದರಂತೆ ಡಿ-ಮಸ್ಟರಿಂಗ್ ಮುಗಿದ ಬಳಿಕ ಶಹಾಪುರ, ಯಾದಗಿರಿ, ಗುರುಮಠಕಲ್ ಕ್ಷೇತ್ರಗಳಲ್ಲಿ ಚುನಾವಣೆ ಕಾರ್ಯ ನಿರ್ವಹಿಸಿದ ಸಿಬ್ಬಂದಿಯನ್ನು ವಾಪಸ್ ಸುರಪುರಕ್ಕೆ ಈ 30 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೇ ಶಹಾಪುರ ಹಳೆ ಬಸ್ ನಿಲ್ದಾಣದಿಂದ ಬಸ್‌ಗಳನ್ನು ಬಿಡಲಾಗುತ್ತಿದ್ದು, 10 ಬಸ್‌ಗಳನ್ನು ಸುರಪುರದ ಪ್ರಭು ಕಾಲೇಜು, ಸುರಪುರ ಮತ್ತು ಯಾದಗಿರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 9 ಬಸ್‌ಗಳನ್ನು ಯಾದಗಿರಿಯ ಡಾನ್ ಬಾಸ್ಕೋ ಸ್ಕೂಲ್ ಮತ್ತು 10 ಬಸ್‌ಗಳನ್ನು ಗುರುಮಠಕಲ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಡಾನ್ ಬಾಸ್ಕೋ ಸ್ಕೂಲ್‌ನಿಂದ ಬಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವಾಪಸ್ ಕರೆತರಲು..: ಡಿ-ಮಸ್ಟರಿಂಗ್ ಮುಗಿದ ಬಳಿಕ ಸುರಪುರ, ಯಾದಗಿರಿ, ಗುರುಮಠಕಲ್ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದ ಸಿಬ್ಬಂದಿಯನ್ನು ವಾಪಸ್ ಶಹಾಪುರಕ್ಕೆ ಕಳುಹಿಸಲು 29 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಯಾದಗಿರಿ ಬಸ್ ನಿಲ್ದಾಣದಿಂದ ಸುರಪುರದ ಪ್ರಭು ಮಹಾವಿದ್ಯಾಲಯಕ್ಕೆ 12 ಬಸ್‌ಗಳನ್ನು ಬಿಡಲಾಗುತ್ತಿದೆ. ಶಹಾಪುರ ಕ್ಷೇತ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇಲ್ಲಿಂದ 9 ಬಸ್‌ಗಳನ್ನು ಬಿಡಲಾಗುತ್ತಿದೆ.
ಡಿ ಮಸ್ಟರಿಂಗ್ ಮುಗಿದ ಬಳಿಕ ಸುರಪುರ, ಶಹಾಪುರ ಕ್ಷೇತ್ರಗಳಲ್ಲಿ ಚುನಾವಣೆ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ವಾಪಸ್ ಯಾದಗಿರಿ ಕರೆತರಲು 21 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ವಿವಿಧ ಕ್ಷೇತ್ರಗಳಿಗೆ ತೆರಳಲಿರುವ ಮತಗಟ್ಟೆ ಸಿಬ್ಬಂದಿಯನ್ನು ಬಸ್‌ಗಳ ಮೂಲಕ ಕಳುಹಿಸುವ ವ್ಯವಸ್ಥೆಗಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿದ್ದು, ಮೇ 5ರಂದು ಡಿ-ಮಸ್ಟರಿಂಗ್ ಕಾರ್ಯ ಮುಗಿದ ಬಳಿಕ ಈ ಕೇಂದ್ರಗಳಿಂದ ಮತಗಟ್ಟೆ ಸಿಬ್ಬಂದಿಯನ್ನು ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಿದ್ದು, ಸಂಬಂಧಿಸಿದ ಸಿಬ್ಬಂದಿ ಇದನ್ನು ಗಮನಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement