ವೋಟರ್ ಎಕ್ಸ್ಪ್ರೆಸ್ ಬಸ್ ಸೌಲಭ್ಯ: ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್
ಯಾದಗಿರಿ: ಮೇ 5ರಂದು ನಡೆಯಲಿರುವ ಚುನಾವಣೆ ಪ್ರಯುಕ್ತ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮತದಾನ ಮಾಡಲು ಹೋಗಿ ಬರುವ ಸಾರ್ವಜನಿಕರಿಗೆ ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವೋಟರ್ ಎಕ್ಸ್ಪ್ರೆಸ್ ಎಂಬ ನಗರ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. 3ರಿಂದ 5 ರುಪಾಯಿ ರಿಯಾಯಿತಿ ದರದಲ್ಲಿ ಬಸ್ಗಳು ಕಾರ್ಯಾಚರಣೆ ಮಾಡಲಿವೆ ಎಂದು ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ತಿಳಿಸಿದ್ದಾರೆ.
ಕಾರ್ಯಾಚರಣೆಗೊಳ್ಳುವ ಬಸ್ ಮಾರ್ಗಗಳ ವಿವರ: ಕೇಂದ್ರ ಬಸ್ ನಿಲ್ದಾಣದಿಂದ ಗಾಂಧಿ ಚೌಕ್ವರೆಗೆ ಬಸ್ ಕಾರ್ಯಾಚರಣೆಗೊಳ್ಳಲಿದ್ದು, ವಾಯಾ ಸುಭಾಷ ಚೌಕ, ಶಾಸ್ತ್ರಿ ಚೌಕ, ಜಿಲ್ಲಾಧಿಕಾರಿ ಕಚೇರಿ, ಚರ್ಚ್, ಅಂಬೇಡ್ಕರ್ ಚೌಕ, ಕನಕ ವೃತ್ತ, ಹಳೆ ದವಾಖಾನೆ, ದರ್ಗಾ, ಹತ್ತಿಕುಣಿ ಕ್ರಾಸ್ ಮತ್ತು ಮಾರ್ಕೆಟ್ ಮೂಲಕ ಸಂಚರಿಸಲಿದೆ.
ಮಾರ್ಗ ಸಂಖ್ಯೆ 2: ಬಸ್ ರೈಲ್ವೆ ನಿಲ್ದಾಣದಿಂದ ಗಾಂಧಿ ಚೌಕವರೆಗೆ ಸಂಚರಿಸಲಿದ್ದು, ವಾಯಾ ವಿದ್ಯಾಮಂಗಲ ಕಾರ್ಯಾಲಯ, ಶಾಸ್ತ್ರಿ ಚೌಕ್, ಜಿಲ್ಲಾಧಿಕಾರಿ ಕಚೇರಿ, ಹತ್ತಿಕುಣಿ ಕ್ರಾಸ್, ಮಾರ್ಕೆಟ್ ಮೂಲಕ ಸಂಚರಿಸಲಿದೆ.
ಮಾರ್ಗ ಸಂಖ್ಯೆ 3: ಬಸ್ಗಳು ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದ್ದು, ಮೈಲಾಪುರ ಅಗಸಿವರೆಗೆ ಸಂಚರಿಸಲಿದೆ. ಈ ಬಸ್ಗಳು ವಾಯಾ ಸುಭಾಷ ಚೌಕ್, ಶಾಸ್ತ್ರಿ ಚೌಕ್, ಎಲ್ಐಸಿ ಕಚೇರಿ, ಬಸ್ ಘಟಕ, ಹೊಸಳ್ಳಿ ಕ್ರಾಸ್, ರಾಜೀವ್ಗಾಂಧಿ ನಗರ, ದರ್ಗಾ ಕ್ರಾಸ್, ಎಪಿಎಂಸಿ, ಗಂಜ್ ಸರ್ಕಲ್, ಮೈಲಾರಲಿಂಗೇಶ್ವರ ಗುಡಿ ಮೂಲಕ ಸಂಚರಿಸಲಿದೆ.
ಮಾರ್ಗ ಸಂಖ್ಯೆ 4: ಬಸ್ಗಳು ಕೇಂದ್ರ ಬಸ್ ನಿಲ್ದಾಣದಿಂದ ಗಾಂಧಿ ಚೌಕವರೆಗೆ ಸಂಚರಿಸಲಿದೆ.
ಮಾರ್ಗ ಸಂಖ್ಯೆ 5: ಬಸ್ಗಳು ರೈಲ್ವೆ ನಿಲ್ದಾಣದಿಂದ ಮೈಲಾಪುರ ಅಗಸಿವರೆಗೆ ಸಂಚರಿಸಲಿದೆ.
ಮಾರ್ಗ ಸಂಖ್ಯೆ 6: ಬಸ್ಗಳು ಕೇಂದ್ರ ಬಸ್ ನಿಲ್ದಾಣದಿಂದ ಗಾಂಧಿ ಚೌಕ್ವರೆಗೆ ಸಂಚರಿಸಲಿದೆ.
ಈ ಎಲ್ಲ ಮಾರ್ಗಗಳಲ್ಲಿ ಮೊದಲನೇ ಹಂತಕ್ಕೆ 3 ರುಪಾಯಿ ಹಾಗೂ 2ನೇ ಹಂತಕ್ಕೆ 5 ರುಪಾಯಿ ರಿಯಾಯಿತಿ ದರದಲ್ಲಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ನಗರ ಸಾರಿಗೆಗಳ ಸದುಪಯೋಗ ಪಡೆದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಕೆಜೆಪಿ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಪರ ತಾಯಿ ರೋಡ್ ಶೋ
ಶಹಾಪುರ: ಕ್ಷೇತ್ರದ ಮತದಾರರು ಪ್ರಜ್ಞಾವಂತರಿದ್ದು, ಪ್ರಸಕ್ತ ವಿಧಾನಸಭೆಗೆ ಬದಲಾವಣೆ ಬಯಸಿದ್ದಾರೆ. ಯುವಕರಿಗೆ ಆದ್ಯತೆ ನೀಡುವತ್ತ ನಿರ್ಣಯ ಕೈಗೊಂಡು ಕೆಜೆಪಿ ಅಭ್ಯರ್ಥಿ ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು ಮತದಾರರ ವಿಶ್ವಾಸ ಹಾಗೂ ಅಭಿಮಾನಕ್ಕೆ ಋಣಿಯಾಗಿದ್ದೇನೆಂದು ಗುರು ಪಾಟೀಲ ಶಿರವಾಳ ಹೇಳಿದರು.
ಪಟ್ಟಣದಲ್ಲಿ ನಡೆಸಿದ ರೋಡ್ ಶೋ ಪ್ರತಿಕ್ರಿಯೆ ಕಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ಹೊಸ ಭರವಸೆಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ. ಚುನಾವಣೆಯಲ್ಲಿ ಯಶಸ್ಸಿನ ನಿರೀಕ್ಷೆಯಿದ್ದು ಅಭಿವೃದ್ಧಿ, ಸಾಮಾಜಿಕ ನ್ಯಾಯ, ದ್ವೇಷರಹಿತ ರಾಜಕಾರಣ ನನ್ನ ಆದ್ಯತೆಯಾಗಲಿದೆ ಎಂದರು.
ಪಾಟೀಲರ ತಾಯಿ ಬಸಮ್ಮ ಗೌಡತಿ ರೋಡ್ ಶೋದಲ್ಲಿ ಪಾಲ್ಗೊಂಡು ಮಗನನ್ನು ಆಶೀರ್ವದಿಸುವಂತೆ ಮನವಿ ಮಾಡಿದರು. ಈ ವೇಳೆ ಹಿರಿಯ ಮುಖಂಡ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಭೀಮಯ್ಯಗೌಡ ಕಟ್ಟಿಮನಿ, ರುದ್ರಪ್ಪ ಜೌಳಿ, ಲಾಲಅಹ್ಮದ ಖುರೇಶಿ, ಅಥಿಕ್ ಸಿದ್ದಿಕಿ, ಇಬ್ರಾಹಿಂ ಶಿರವಾಳ, ಚೆನ್ನಪ್ಪಗೌಡ ಶಿರವಾಳ, ಮಾನಪ್ಪ ಹೂಗಾರ, ಸುಧೀರ ಚಿಂಚೋಳಿ, ಅಡಿವೆಪ್ಪ ಜಾಕಾ, ಸಂಗಣ್ಣ ಮೋಟಗಿ, ದೇವಿಂದ್ರ ತೋಟಿಗೇರ, ಸೂಗುರಪ್ಪ ಬಿರಾಳ, ಮಲ್ಲಕಾರ್ಜುನ ಚೌದ್ರಿ, ನುಮಾನಬಾಬಾ, ದಿನೇಶ ಜೈನ್, ಬಸವರಾಜ ಆನೇಗುಂದಿ, ಅಮರೇಶ ವಿಭೂತಿಹಳ್ಳಿ, ಮುರುಳಿಧರ ಕುಲ್ಕರ್ಣಿ, ಗಿರೀಶ ಜಾಕಾ, ವಾಸುದೇವ ಕಟ್ಟಿಮನಿ, ಮನೋಹರ ಅಲಬನೂರ, ಚಂದು ಸಿರನೂರ, ದೊಡ್ಡಮಾನಯ್ಯ, ವಸಂತ ಸುರಪುರ, ಅನಂತರಾವ ದೇಶಪಾಂಡೆ, ಮೌನಪ್ಪ ಹೊಸ್ಮನಿ, ರವಿ ಆನೇಗುಂದಿ, ಕಲ್ಲಪ್ಪ ಮ್ಯಾಳಗಿ, ಅಮರೇಶಸ್ವಾಮಿ ಇತರರು ಇದ್ದರು.