ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆಳಂದದಲ್ಲಿ ಸೆರೆಮುಕ್ಕೂ ನೀರಿಲ್ಲ...

Srinivasa Murthy VN
Updated On : 13 May 2013, 12:20 pm

ಕನ್ನಡಪ್ರಭ ವಾರ್ತೆ, ಆಳಂದ, ಮೇ 12
ಬೇಸಿಗೆ ಬಿಸಿಲು ಆಳಂದ ಪಟ್ಟಣ ಹಾಗೂ ಹಳ್ಳಿಗರ ಬದುಕಿಗೇ ಗರ ಬಡಿಯುವಂತೆ ಮಾಡಿದೆ. ಏಕೆಂದರೆ ಕಳೆದ ಎರಡು ತಿಂಗಳಾಯ್ತು, ಈ ತಾಲೂಕಿನ ಸಾವಿರಾರು ಜನತೆ- ಜಾನುವಾರುಗಳಿಗೆ ಕುಡಿಯಲು ಸೆರೆಮುಕ್ಕ ನೀರಿಲ್ಲ.
ಬಿಸಿಲು ಹೆಚ್ಚುತ್ತಿದ್ದಂತೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿ ಜನ, ಜಾನುವಾರು ಪರದಾಟ ಸಾಗಿದೆ. ಹಲವಡೆ ಕೊರೆದ ಬೋರ್‌ವೆಲ್ ನೀರು ಬತ್ತಿ ಬಾಯಾರಿದರೆ, ಇನ್ನೂ ಕೆಲವೆಡೆ ಬಾವಿ, ಕೆರೆಗಳ ನೀರು ಬತ್ತಿ ನೀರೇ ಇಲ್ಲ. ಈ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಸಹಾಯಕತೆಯಿಂದ ಹೇಳುತ್ತಿದ್ದಾರೆ.
ಈಗಾಗಲೇ ಸರಸಂಬಾ, ಸಾವಳೇಶ್ವರ, ಹೋದಲೂರ ಮತ್ತು ಹೊದಲೂರ ತಾಂಡಾ, ಆಳಂಗಾ, ಖಜೂರಿ ಸೇರಿ 23 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ ಎಂದು ತಾಪಂ ಇಒ ಅಬ್ದುಲ್ ಸಲಾಂ ಅವರು ಹೇಳುತ್ತಾರೆ. ಬೇಸಿಗೆ ಆರಂಭದಲ್ಲೇ ಈ ಗ್ರಾಮಗಳಿಗೆ ಟ್ಯಾಂಕರ್ ಗತಿಯಾಗಿದೆ. ವೈಶಾಖದ ಈ ತಿಂಗಳು ಇಲ್ಲಿನ ನೋಟ ಬಲುಘೋರವಾಗಲಿದೆ.
ಟ್ಯಾಂಕರ್ ನೀರು ಸಾಲುತ್ತಿಲ್ಲ: ಟ್ಯಾಂಕರ್ ನೀರು ಹಳ್ಳಿಗರಿಗೆ ಸಾಕಾಗುತ್ತಿಲ್ಲ. ನೀರು ಜನರಿಗೆ ಸಾಕಾಗುತ್ತಿಲ್ಲ. ಬೋಳಣಿ, ನರೋಣಾ, ಖಜೂರಿ, ಹಿರೋಳಿ, ಜವಳಗಾ (ಜೆ), ಮತ್ತಿತರ ಕಡೆ  ಗ್ರಾಮದ ಒಂದೆರಡು ಕಿಮೀ ದೂರದಿಂದ ಹೊಲಗದ್ದೆಗಳಿಂದ ಮಹಿಳೆಯರು, ಮಕ್ಕಳು ಧಗೆ ಬಿಸಿಲು ಲೆಕ್ಕಿಸಿದೆ ಕೊಡ ಹೊತ್ತು ನೀರು ತರುವುದು ಈ ಬಿರು ಬೇಸಿಗೆಯ ದುರಂತದ ನೋಟಗಳಾಗಿ ದಾಖಲಾಗುತ್ತಿವೆ. ಆಳಂದದ ಜನರ ನೀರಿಗಾಗಿನ ಪರದಾಟ ನೋಡುವವರಿಗೂ ಮರುಕ ಹುಟ್ಟುವಂತೆ ಮಾಡುತ್ತಿದೆ.
ನೀರಿದ್ದ ಊರಲ್ಲಿ ನಲ್ಲಿಗಳಿಗೆ ನೀರೊದಗಿಸಲು ವಿದ್ಯುತ್ ಕೈಕೊಡುತ್ತಿದೆ. ಕೆಲವಡೆ ನೀರಿನ ಅಭಾವವಿದೆ. ನಲ್ಲಿಗಳ ಮುಂದೆ ದಿನವಿಡೀ ಕೊಡಗಳ ಸಾಲು ಸಾಮಾನ್ಯವಾಗಿ ಕಂಡಬರುತ್ತಿದೆ.
ಹಿರೋಳಿ ಗಡಿಯಲ್ಲಿ ಹಾಹಾಕಾರ: ತಾಲೂಕಿನ ಮಾದನಹಿಪ್ಪರಗಾ ವಲಯದ ಹಿರೋಳಿ ಗಡಿಭಾಗದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ ಜಾನುವಾರು ತೀವ್ರ ಪರದಾಟ ನಡೆದಿದೆ. ನಿತ್ಯ ಬೇಸಿಗೆ ಬಿಸಿಲು ಹೆಚ್ಚಾಗತೊಡಗಿದ್ದು, ನೀರಿನ ಮೂಲವಾದ ಬಾವಿ, ಬೋರ್‌ವೆಲ್‌ಗಳ ಈ ಭಾಗದಲ್ಲಿ ಬತ್ತಿ ಅಂತರ್ಜಲ ಕುಸಿದು ನೀರಿನ ಹಾಹಾಕಾರ ಉಂಟಾಗಿದೆ.
ಇದಕ್ಕೆ ಖಜೂರಿ ಗಡಿಭಾಗದ ಹಳ್ಳಿಗಳ ಪರಸ್ಥಿತಿಯೂ ಹೊರತಾಗಿಲ್ಲ. ಗ್ರಾಪಂ ಕೇಂದ್ರ ಹಿರೋಳಿ ಗ್ರಾಮದಲ್ಲಿ ಬಸ್ ನಿಲ್ದಾಣ, ದಲಿತ ಬಡಾವಣೆ ಮತ್ತಿತರ ಕಡೆಯ ಸಾರ್ವಜನಿಕ ನಲ್ಲಿಯ ಮುಂದೆ ಕೊಡಗಳ ಉದ್ದನೆಯ ಸಾಲು ಕಂಡುಬರುತ್ತಿದೆ. ನೀರಿಗಾಗಿ ಹಗಲೂ ರಾತ್ರಿ ಕೊಡಗಳ ಸಾಲು ಇದ್ದುದ್ದೆ ಎನ್ನುತ್ತಾರೆ ಹಿರೋಳಿ ಗ್ರಾಮಸ್ಥರು.
  ನಿಂಗದಳ್ಳಿ ಗ್ರಾಮದಲ್ಲಿ ಸಾರ್ವಜನಿಕವಾಗಿ ನೀರಿನ ಮೂಲವೇ ಬತ್ತಿಹೋಗಿದ್ದು, ಜನರಿಗೆ ನಿತ್ಯ ಹೊಲಗದ್ದೆಗಳಿಗೆ ಹೋಗಿ ನೀರು ತರುವುದೇ ದೊಡ್ಡ ತಲೆನೋವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ದರ್ಗಾಶಿರೂರ, ಮೋಘಾ(ಬಿ), ಕಾಮನಳ್ಳಿಯಲ್ಲೂ..: ಗ್ರಾಮೀಣ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೆ ಪಂಪ್‌ಸೆಟ್‌ಗಳಿಂದ ನೀರೆತ್ತಲು ತೊಂದರೆಯಾಗಿದೆ. ವಿದ್ಯುತ್ ಪೂರೈಕೆಯಲ್ಲೂ ಪದೇ ಪದೇ ಕಡಿತಗೊಳ್ಳುವುದು ಹಾಗೂ ಗುಣಮಟ್ಟದ ವಿದ್ಯುತ್ ಕೊರತೆಯಿಂದಾಗಿ ಅಲ್ಪಸ್ವಲ್ಪ ನೀರಿದ್ದ ಗ್ರಾಮದಲ್ಲೂ ಪೂರೈಕೆಗೆ ತೊಂದರೆಯಾಗಿದೆ. ಕಿಣ್ಣಿಸುಲ್ತಾನ ಗ್ರಾಮದಲ್ಲಿ ನೀರಿನ ಸಮಸ್ಯೆಯಾಗಿದೆ ಸ್ಪಂದಿಸಬೇಕಾದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಫಲಗೊಂಡ ಆಡಳಿತ: ಸಮಸ್ಯಾತ್ಮಕ ನೀರಿನ ಗ್ರಾಮಗಳಿಗೆ ಮುಂಜಾಗ್ರತವಾಗಿ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ ವಿಫಲವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಎಂದಿನಂತೆ ಯಾವ ಕಚೇರಿಯಲ್ಲೂ ಅಧಿಕಾರಿಗಳು ಕುಳಿತು ಕಾರ್ಯನಿರ್ವಹಿಸುತ್ತಿಲ್ಲ. ಗ್ರಾಮ ಪಂಚಾಯಿತಿಯ ಯಾವ ಅಧಿಕಾರಿಯೂ ಕೇಂದ್ರಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುತ್ತಿಲ್ಲ.
  ಮೇಲಾಧಿಕಾರಿಗಳು ತಮ್ಮ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದು, ಸಭೆ ಸಮಾರಂಭದಲ್ಲೇ ಕಾಲ ಕಳೆಯುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಶಾಪ ಹಾಕುತ್ತಿದ್ದಾರೆ. ನೀರಿಗಾಗಿ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೂ ಅಧಿಕಾರಿಗಳು ಕೇಂದ್ರಸ್ಥಾನಕ್ಕೆ ಬಂದು ಸಮಸ್ಯೆ ನಿವಾರಿಸುತ್ತಿಲ್ಲ.
  ಈ ಕುರಿತು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ತಾಲೂಕು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿ ನೀರಿನ ಸಮಸ್ಯೆ ನಿವಾರಿಸಲು ಪ್ರಯತ್ನಿಸಬೇಕೆಂದು ನಿಂಗದಳ್ಳಿ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಳಂದದಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ: ಆಳಂದ ಸುಮಾರು 42 ಸಾವಿರ ಜನಸಂಖ್ಯೆಯುಳ್ಳ ತಾಲೂಕು ಕೇಂದ್ರ. ಇಲ್ಲಿ ನಾಲ್ಕರಿಂದ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ.
 ಪಟ್ಟಣಕ್ಕೆ ನೀರಿನ ಮೂಲವಾಗಿರುವ ಅಮರ್ಜಾ ಅಣೆಕಟ್ಟೆಯಲ್ಲಿ ಅಗತ್ಯ ನೀರಿದ್ದರೂ ಅಧಿಕಾರಿಗಳು ಕುರುಡ ನೆಪವೊಡ್ಡಿ ನಾಲ್ಕು ದಿನಕ್ಕೊಮ್ಮೆ ನಲಿಗಳಿಗೆ ನೀರು ಒದಗಿಸುತ್ತಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
  ಪುರಸಭೆ ನೀರಿನ ಕೃತಕ ಅಭಾವ ಸೃಷ್ಟಿಸಿರುವುದು ಆಳಂದದ ಜನತೆಯ ಪಾಲಿಗೆ ಭಾರಿ ತೊಂದರೆಯನ್ನುಂಟು ಮಾಡಿದೆ.

ನಿರೀಕ್ಷೆಗೆ ತಕ್ಕಂತೆ ಹೊಸ ಶಾಸಕರು ಸ್ಪಂದಿಸುವರೇ?
ಕಳೆದ ಒಂಂದೂವರೆ ತಿಂಗಳಿಂದ ಆಳಂದದಲ್ಲಿ ಚುನಾವಣೆ ಜ್ವರ. ಹೀಗಾಗಿ ಜನನಾಯಕರು, ಜಿಪಂ ಸದಸ್ಯರು, ತಾಪಂ, ಪಂಚಾಯ್ತಿ ಮಂದಿ ಯಾರೂ ನೀರೆಲ್ಲಿದೆ, ಎಲ್ಲಿಲ್ಲ ಎಂದು ಕಾಳಜಿ ಮಾಡಿದವರೇ ಅಲ್ಲ. ಅಧಿಕಾರಿಗಳೂ ಸಹ ಆ ಸ್ವ್ಕಾಡ್, ಈ ತಂಡ ಎಂದು ಅತ್ತಿತ್ತ ಚದುರಿದಂತೆ ಓಡಾಡಿ ಚುನಾವಣೆಯಲ್ಲಿಯೇ ಮಗ್ನರಾಗಿದ್ದರಿಂದ ನೀರಿನ ಸಮಸ್ಯೆಯ ಬಗ್ಗೆ ಯಾರೂ ಗಮನವನ್ನೇ ಹರಿಸಿಲ್ಲ. ಇದರಿಂದಾಗಿ ಈ ಬೇಸಿಗೆ ಆಳಂದದಲ್ಲಿ ಜನ- ಜಾನುವಾರು ಪಾಲಿಗೆ ಹೆಚ್ಚಿನ ಬಿಸಿ ಅನುಭವ ನೀಡಿದ್ದು ಕಟು ವಾಸ್ತವ.
ಈಗಂತೂ ವೈಶಾಖದ ಆರಂಭದಲ್ಲಿ ಚುನಾವಣೆ ಗದ್ದಲ ಮುಗಿದಿದೆ. ಇಲ್ಲಿಂದ ನೂತನವಾಗಿ ಸದನ ಪ್ರವೇಶ ಮಾಡಿರುವ ಬಿ.ಆರ್. ಪಾಟೀಲ್ ಅವರು ತಕ್ಷಣ ತಮ್ಮ ಕ್ಷೇತ್ರದ ಜನತೆ ಎದುರಿಸುತ್ತಿರುವ ನೀರಿನ ಬವಣೆಗೆ ಸ್ಪಂದಿಸಲೇಬೇಕಾಗಿದೆ.
ಬೇಸಿಗೆಯ ಶಾಖ- ಬೆವರಿನ ದಿನಗಳ ಪರಾಕಾಷ್ಠೆ ಹಂತ ಮೇ ತಂಗಳು. ಈ ತಿಂಗಳು ನೀರಿಗಾಗಿ ಬವಣೆ ಮುಂದುವರಿದಲ್ಲಿ ಆಳಂದದ ಜನರ ದೌರ್ಭಾಗ್ಯಕ್ಕೆ ಯಾರೂ ಮದ್ದರೆಯಲು ಸಾಧ್ಯವಿಲ್ಲದಂತಾಗುವುದು ನಿಶ್ಚಿತ.
ಅದಕ್ಕೇ ಶಾಸಕ ಬಿ.ಆರ್. ಪಾಟೀಲರು ತಕ್ಷಣ ಅಧಿಕಾರಿಗಳ ಸಭೆ ಕರೆದು ತುರ್ತು ಕ್ರಮಕ್ಕೆ ಮುಂದಾಗಬೇಕಾಗಿದೆ. ಈ ನಿಟ್ಟನಿಲ್ಲಿ ಶಾಸಕರು ಮುಂದಾಗುವರೇ ಎಂದು ಜನತೆ ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement