ಬಸವಯುಗ ಸುವರ್ಣಯುಗವಿದ್ದಂತೆ
ಕನ್ನಡಪ್ರಭ ವಾರ್ತೆ ಶಹಾಪುರ ಮೇ 13
ಸತ್ಯ ಶುದ್ಧ ಕಾಯಕವೇ ಪವಿತ್ರವಾದದ್ದು. ಎಲ್ಲ ಜನರು, ಜನನಾಯಕರು ಒಂದಿಲ್ಲೊಂದು ಕಾಯಕವನ್ನು ಮಾಡಲೇಬೇಕು. ಅನ್ಯರ ಸಂಪಾದನೆಯಿಂದ ಬದುಕುವ ಲಾಲಸೆ ಬೇಡ ಎಂದು ಕ್ರಾಂತಿ ಪುರುಷ ಬಸವಣ್ಣನವರು ಸಂದೇಶ ನೀಡಿದ್ದು ಭಾರತದ ಇತಿಹಾಸದಲ್ಲಿ ಆ ಯುಗವು ಸುವರ್ಣ ಯುಗವಿದ್ದಂತೆ ಎಂದು ನೂತನ ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ತಾಲೂಕಾ ಆಡಳಿತದಿಂದ ಪುರಸಭೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಜಯಂತ್ಸುತ್ಸವ ಸರ್ವವ್ಯಾಪಿಯಾಗಲಿ: ಸರಳ ಭಾಷೆಯ ಮೂಲಕ ವಚನ ಸಾಹಿತ್ಯವನ್ನು ಉಣಬಡಿಸಿ ಜನಸಾಮಾನ್ಯರ ವಾಣಿಯನ್ನೇ ದೇವವಾಣಿಯ ಎತ್ತರಕ್ಕೆ ಎತ್ತಿದ ಬಸವಣ್ಣನವರು ನಾಡಿಗೆ ಮೇಲ್ಪಂಕ್ತಿಯಾಗಿದ್ದಾರೆ. ಜಯಂತ್ಯುತ್ಸವ ಆಚರಣೆ ಸರ್ವ ವ್ಯಾಪ್ತಿಯಾಗಬೇಕು ಎಂದರು.
ನೀಚೋಚ್ಚ ಭಾವ ಕಿತ್ತೊಗೆದವರು..: ಸಾನ್ನಿಧ್ಯ ವಹಿಸಿದ್ದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಜನ್ಮ, ವರ್ಣ, ವಂಶ, ಲಿಂಗ, ಉದ್ಯೋಗ, ಅಧಿಕಾರ, ಐಶ್ವರ್ಯ ಇತ್ಯಾದಿಗಳನ್ನು ಅವಲಂಬಿಸಿ ಬೃಹದಾಕಾರವಾಗಿ ಬೆಳೆದಿದ್ದ ನೀಚೋಚ್ಚ ಭಾವಗಳನ್ನು ಬೇರು ಸಹಿತ ಕಿತ್ತೊಗೆದು ಧರ್ಮದ ದ್ವಾರವನ್ನು ಸರ್ವರಿಗೂ ತೆರೆದಿಟ್ಟು ಸಾಮಾನ್ಯ ಜನರನ್ನೇ ಸಾಧಕರನ್ನಾಗಿ, ಶರಣರನ್ನಾಗಿ ಮಾಡಿದ ಬಸವಣ್ಣನವರು ಕಾಯಕ ಯೋಗಿಯಾಗಿ ಮೆರೆದರು. ಅಂತರಂಗ ಬಹಿರಂಗ ಶುದ್ಧಿ, ಸತ್ಯ ನುಡಿವುದೇ ದೇವಲೋಕ ಎಂಬ ನೀತಿಯ ನೆಲೆಗಟ್ಟಿನ ಮೇಲೆ ಸುಂದರ ಸಮಾಜ ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸ್ಥಳೀಯ ಆಡಳಿತದ ನಿರ್ಲಕ್ಷ್ಯ: ವೀರಶೈವ ಸಮಾಜದ ಅಧ್ಯಕ್ಷ ಬಸವರಾಜೇಂದ್ರ ದೇಶಮುಖ ಮಾತನಾಡಿ, ದೇಶ ವಿದೇಶಗಳಲ್ಲಿ ಮಹಾತ್ಮ ಬಸವೇಶ್ವರರ ತತ್ವಾದರ್ಶಗಳನ್ನು ಕೊಂಡಾಡುತ್ತಾ ಅವರ ಜಯಂತ್ಯುತ್ಸವವನ್ನು ಅದ್ಧೂಯಿಂದ ಆಚರಿಸಲಾಗುತ್ತಿದೆ. ಅವರು ಜನಿಸಿದ ನೆಲದಲ್ಲಿ ಬಸವ ಜಯಂತಿ ಅರ್ಥ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಇದು ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ಮುಖಂಡರಾದ ಮಲ್ಲಣ್ಣ ಮಡ್ಡಿ, ನರಸಿಂಗರಾವ ಮುತಾಲಿಕ, ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ, ಪುರಸಭೆ ಮುಖ್ಯಾಧಿಕಾರಿ ಸರೋಜಾ ಪಾಟೀಲ, ಸಿಡಿಪಿಒ ನದಾಫ್, ಪ್ರಮುಖರಾದ ಶರಣು ಗದ್ದುಗೆ, ಸುಧೀರ ಚಿಂಚೋಳಿ, ಗುರುಕಾಮಾ, ಗುರು ಮುದ್ದಿನ್, ಅಡಿವೆಪ್ಪ ಜಾಕಾ, ಸಂಗಣ್ಣ ಮೋಟಗಿ, ಮಹಾಂತಗೌಡ ಮಡ್ನಾಳ, ಶಿವಪ್ಪ ಹಳ್ಳಿಕಟ್ಟಿ, ಗೌಡಪ್ಪಗೌಡ, ಡಾ. ಚಂದ್ರಶೇಖರ ಕೊಲ್ಲೂರು, ಸೋಮಶೇಖರ ಗುತ್ತಿಪೇಟೆ, ವೆಂಕಟೇಶ ಆಲೂರ, ಜಟ್ಟೆಪ್ಪ ಕೆಂಭಾವಿ, ವಸಂತ ಸುರಪುರ, ಹಿರಗಪ್ಪ ಹೋತಪೇಟೆ, ಮಲ್ಲಿಕಾರ್ಜುನ ಕನ್ಯಕೋಳೂರು, ಬಸವರಾಜ ಶಿರ್ಣಿ, ನಾಗಭೂಷಣ ವಾರದ, ಅಶೋಕ ಪಾಟೀಲ ಇದ್ದರು.
ಪ್ರತಿಭಟನೆಯ ಬಿಸಿ..
ತಾಲೂಕಾಡಳಿತ ಬಸವೇಶ್ವರ ಜಯಂತಿಯನ್ನು ಕಾಟಾಚಾರಕ್ಕೆ ಮಾಡುತ್ತಿರುವುದು ಬೇಸರ ತಂದಿದೆ ಎಂದು ಯುವಕರು ಪ್ರತಿಭಟನೆ ನಡೆಸಿದರು. ಕಾರ್ಯಕ್ರಮಕ್ಕೆ ಯಾರನ್ನೂ ಆಹ್ವಾನಿಸಿಲ್ಲ. ಬಸವೇಶ್ವರರ ಭಾವಚಿತ್ರಕ್ಕೆ ಅಲಂಕಾರವಿಲ್ಲ. ಬಾಜಾ ಭಜಂತ್ರಿ ಸದ್ದಿಲ್ಲ ಮತ್ತು ಬಹುತೇಕ ಅಧಿಕಾರಿಗಳ ಗೈರುಹಾಜರಿ ಇಷ್ಟೆಲ್ಲ ಅವ್ಯವಸ್ಥೆ ಇಟ್ಟುಕೊಂಡು ಯಾಕೆ ಕಾರ್ಯಕ್ರಮ ಮಾಡಬೇಕು ಎಂದು ಮೆರವಣಿಗೆ ಸಮಯದಲ್ಲಿ ಅನೇಕರು ಧರಣಿ ನಡೆಸಿದರು. ನಂತರ ಅಧಿಕಾರಿಗಳು ಕ್ಷಮೆ ಕೇಳಿ ಮುಂದೆ ಹೀಗಾಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದರು.
ಹುಣಸಗಿ: ಅದ್ಧೂರಿ ಬಸವ ಜಯಂತ್ಯುತ್ಸವ
ಹುಣಸಗಿ: ಬಸವಣ್ಣನನ್ನು ಮಹಾ ಮಾನವತಾವಾದಿ ಎಂದು ಕರೆಯಲಾಗುತ್ತದೆ. ವಿಶ್ವ ಮಾನವ ಕಲ್ಪನೆಯನ್ನು ಮಹಾತ್ಮ ಬಸವೇಶ್ವರರು ನಮಗೆ ನೀಡಿದ್ದಾರೆ ಎಂದು ಹುಣಸಗಿ ಪಿಯುಸಿ ಕಾಲೇಜು ಪ್ರಾಚಾರ್ಯ ಆರ್.ಎಲ್. ಸುಣಗಾರ ಅಭಿಪ್ರಾಯಪಟ್ಟರು.
ಸ್ಥಳೀಯ ಗ್ರಾಪಂ ಕಾರ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿ ವ್ಯವಸ್ಥೆಯನ್ನು ವಿರೋಧಿಸಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಅನೇಕರು ತಮ್ಮ ಜೀವನ ಸಾರ್ಥಕ ಮಾಡಿಕೊಂಡಿದ್ದಾರೆ. ಪ್ರಸ್ತುತ ನಾವು ಕೂಡ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದು ಎಂದರು.
ನಾಗಪ್ಪ ಹಡಿಕ್ಯಾಳ, ಶಿವಕುಮಾರ ಬಂಡೋಳಿ ಮಾತನಾಡಿ, ವಚನಗಳು ನಮ್ಮ ಜೀವನದ ನಿತ್ಯ ಸಂಜೀವಿನಿಯಾಗಿವೆ ಎಂದು ಹೇಳಿದರು. ಮಹಾದೇವಪ್ಪಾ ಸಾಹು ಬಳಿ, ಬಸಲಿಂಗಯ್ಯಾ ಹಿರೇಮಠ, ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಬಳಿ, ನಾನಾಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ತಿಪ್ಪಣ್ಣ ಚಂದಾ, ರಾಚಯ್ಯ ಮಠ, ಬಸ್ಸಣ್ಣ ದೊರೆ, ನಾಗರಾಜ ಚಂದಾ, ಆದಯ್ಯ ಮಠ, ಮಹಾಂತೇಶ ಮಲಗಲದಿನ್ನಿ, ಬಸವರಾಜ ವೈಲಿ, ಬಸವರಾಜ ಮೇಲಿನಮನಿ, ಮಡಿವಾಳಪ್ಪ ಕಟ್ಟಿಮನಿ, ಬಸವರಾಜ ಸಜ್ಜನ, ಮಲ್ಲ ಹೆಬ್ಬಾಳ, ರವಿ ಪುರಾಣಮಠ, ಬಸವರಾಜ ಸಜ್ಜನ, ನಂದಣ್ಣ ಪೀರಾಪುರ, ರಮಜಾನ ಖುರೇಷಿ, ಚೌದರಿ ಬಾಬು ಇತರರು ಇದ್ದರು. ಪಿಡಿಒ ಬನ್ನಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜಕುಮಾರ ವಂದಿಸಿದರು.
ಬಸವಣ್ಣ ಮನುಕುಲದ ಉದ್ಧಾರಕ: ಡಾ. ಕೌಲಗಿ
ಯಾದಗಿರಿ: ಬಸವೇಶ್ವರರು ಈ ದೇಶ ಕಂಡ ಮಹಾನ್ ಕ್ರಾಂತಿ ಪುರುಷರಾಗಿದ್ದಾರೆ. ಅಂದಿನ ಸಮಾಜದಲ್ಲಿ ತಾಂಡವಾಡುತ್ತಿದ್ದ ಜಾತಿಯ ವಿಷ ಬೀಜವನ್ನು ಕಿತ್ತೊಗೆಯಲು ಶ್ರಮಿಸಿದ ಅವರು, ತಮ್ಮ ವಚನಗಳ ಮೂಲಕ ಮಾನವ ಕುಲವನ್ನು ಉದ್ದರಿಸಿದ ಮಹಾ ಪುರುಷರಾಗಿದ್ದಾರೆ ಎಂದು ಇಲ್ಲಿಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬಸವೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ವಚನ ಪರಂಪರೆಯಲ್ಲಿ ದ್ರುವತಾರೆಯಂತೆ ಮೆರೆದ ಬಸವೇಶ್ವರರು ಜಗಜ್ಯೋತಿ ಎಂಬ ಹೆಸರು ಪಡೆದುಕೊಂಡಿದ್ದಾರೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ಸರ್ವರಿಗೂ ಸಮಾನತೆಯ ಮಂತ್ರವನ್ನು ಬೋಧಿಸಿದ್ದ ಅವರ ವಿಚಾರ ಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಾಯಕ ನಿಷ್ಠೆಗೆ ಒತ್ತು: ಜಗಜ್ಯೋತಿ ಬಸವೇಶ್ವರರು ಸದಾ ಕಾಯಕ ನಿಷ್ಠೆಗೆ ಒತ್ತು ನೀಡಿದ್ದರು. ಕಲಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ. ಇದಿರ ಹಳಿಯಲು ಬೇಡ ತನ್ನ ಬಣ್ಣಿಸಬೇಡ ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗದ ಶುದ್ಧಿ. ಇದೇ ನಮ್ಮ ಕೂಡಲ ಸಂಗನ ಒಲಿಸುವ ಪರಿ ಎಂದು ಸಾರುವ ಮೂಲಕ ಇಡೀ ಮಾನವ ಕುಲಕ್ಕೆ ಕಾಯಕದ ಮಹತ್ವನ್ನು ತಿಳಿಸಿದ್ದಾರೆ. ಬಸವೇಶ್ವರರ ವಚನಗಳಲ್ಲಿನ ಸಾರವನ್ನು ನಾವಿಂದು ಅರಿತು ಮುನ್ನಡೆಯಬೇಕಿದೆ. ಕೇವಲ ಜಯಂತಿ ಆಚರಣೆಯಿಂದ ಸಮಾಜ ಪರಿವರ್ತನೆ ಅಸಾಧ್ಯ. ಬಸವೇಶ್ವರರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆದಾಗ ಮಾತ್ರ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮರೆಮ್ಮ ಶ್ಯಾಣೆನೋರ್, ವೀರಶೈವ ಸಮಾಜದ ನಗರ ಘಟಕ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ಡಿವೈಎಸ್ಪಿ ಎಸ್.ಡಿ. ಕಟ್ಟಿಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಾಂಜೇಯ ಇತರರು ಇದ್ದರು.
ಪೌರಾಯುಕ್ತ ಮಹ್ಮದ ಮುನೀರ್ ಸ್ವಾಗತಿಸಿದರು. ಶಿವಶರಣಪ್ಪ ಶಿರೂರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ವಂದಿಸಿದರು.