ವರುಣ ಶಾಪ, ಸೂರ್ಯ ಪ್ರತಾಪ; ಜನತೆ ಪಶ್ಚಾತ್ತಾಪ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 13
ಬಿಸಿಲಿನ ತಾಪ- ಪ್ರತಾಪ ಒಂದೆಡೆಯಾದರೆ, ಅಂತರ್ಜಲ ಬತ್ತಿ ಹೋಗಿ ಸಮಸ್ಯೆ ಇನ್ನೊಂದೆಡೆ. ಇವೆರಡರ ನಡುವೆಯೇ ವಿದ್ಯುತ್ ಕೈಕೊಟ್ಟು ಕಾಡುತ್ತಿರುವ ನೀರಿನ ಸಮಸ್ಯೆ. ಹೀಗೆ ಮೂರು ಹಂತದಲ್ಲಿ ನೀರಿನ ಸಮಸ್ಯೆಯಿಂದ ನರಳುತ್ತಿದೆ ಚಿಂಚೋಳಿ ತಾಲೂಕು.
ತಾಲೂಕಿನಲ್ಲಿ ಬಿಸಿಲಿನ ತಾಪ ಏರುತ್ತಿದ್ದಂತೆಯೇ ಇತ್ತ ವಿದ್ಯುತ್ ಸಮಸ್ಯೆಯಿಂದಾಗಿ ಅನೇಕ ಗ್ರಾಮ ಮತ್ತು ತಾಂಡಾಗಳಲ್ಲಿನ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿದೆ.
ತಾಲೂಕಿನ ಸುಲೇಪೇಟ್, ನಿಡಗುಂದಾ, ಚಿಮ್ಮನಚೋಡ, ರಟಕಲ್, ಮಿರಿಯಾಣ, ಕುಂಚಾವರಂ ಗ್ರಾಮಗಳಲ್ಲಿ 33 ಕೆವಿ ವಿದ್ಯುತ್ ಉಪಕೇಂದ್ರಗಳಿವೆ ಮತ್ತು ಚಿಂಚೋಳಿ ಪಟ್ಟಣದಲ್ಲಿ 110 ಕೆವಿ ವಿದ್ಯುತ್ ಸ್ಥಾವರ ಹೊಂದಿದೆ. ಆದರು ಸಹ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಮತ್ತು ಅನಾವಶ್ಯಕ ವಿದ್ಯುತ್ ಕಡಿತ. ಇಂತಹ ಅಡಚಣೆಯಿಂದಾಗಿ ವಿದ್ಯುತ್ ಕಡಿತ ಇಲ್ಲಿ ಕಾಡುತ್ತಿದೆ. ಈ ಬೇಸಿಗೆ ದಿನಗಳಲ್ಲಿ ಜನರು ಕುಡಿಯುವ ನೀರಿಗಾಗಿ ತೊಂದರೆ ಹೆಚ್ಚುತ್ತಲೇ ಸಾಗಿದೆ.
ಇಲ್ಲೆಲ್ಲಾ ಸಮಸ್ಯೆ ಉಲ್ಬಣ: ತಾಲೂಕಿನ ಐನಾಪುರ ಮತ್ತು ಚಿಮ್ಮನಚೋಡ, ಸುಲೇಪೇಟ್ ವಲಯಗಳಲ್ಲಿ ಬರುವ ಖಾನಾಪುರ, ಭೂಯ್ಯಾರ(ಕೆ) ಮತ್ತು ಭುಯಾರ(ಬಿ) ಸಜ್ಜನಕೊಳ್ಳ ತಾಂಡಾ, ನೆಲಗಂಗಿ ತಾಂಡಾ, ಚಂದನಕೇರಾ, ರುದನೂರ, ಗಡಿಕೇಶ್ವರ, ರಾಯಕೋಡ, ಚಿಂತಪಳ್ಳಿ, ಭೂತಪುರ, ಅಣದುನಾಯಕ ತಾಂಡಾ, ಚೇಂಗಟಾ ಮಳ್ಳಿಕೊಳ್ಳ ತಾಂಡಾ, ಗಡಿಲಿಂಗದಳ್ಳಿ, ಹೇಮಲಾ ನಾಯಕ ತಾಂಡಾ, ಚೆನ್ನೂರ ತಾಂಡಾ, ರಾಣಾಪುರ, ಸಾಸರಗಾಂವ ಮೋಘಾ, ರುಮ್ಮನಗೂಡ, ಧುತ್ತರಗಾ, ಪಸ್ತಪುರ ಮತ್ತು ತಾಂಡಾಗಳಲ್ಲಿ ಸದ್ಯದ ಮಟ್ಟಿಗೆ ಕುಡಿಯುವ ನೀರಿನ ವ್ಯವಸ್ಥೆಗಳಿದ್ದರು ಸಹ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ಲೊಡಶೆಡ್ಡಿಂಗ್ನಿಂದಾಗಿ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಯೋಜನೆಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ತೊಂದರೆ ಹೆಚ್ಚಿದೆ.
ಅಸಮರ್ಪಕ ವಿದ್ಯುತ್ ಸರಬರಾಜು: ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಸಮಸ್ಯೆ ಬಗ್ಗೆ ತಾಲೂಕು ಜೆಸ್ಕಾ ಎಇಇ ಪರಮೇಶ್ವರ ಬಿರಾದಾರ ಅವರನ್ನು “OÚ«ÚsÚ®Úúڒ ಸಂಪರ್ಕಿಸಿದಾಗ, ತಾಲೂಕಿನಲ್ಲಿ ಬೇಸಿಗೆ ದಿನಗಳಲ್ಲಿ ಜನರಿಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿರುತ್ತದೆ ಹಾಗೂ ಕೆಲವೊಂದು ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವುದರಿಂದ ಜನರ ಬೇಡಿಕೆಯಂತೆ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಆದರೂ ಗ್ರಾಮೀಣ ಪ್ರದೇಶದಲ್ಲಿ 1,100 ವಿದ್ಯುತ್ ಪರಿವರ್ತಕಗಳಿವೆ. ಎಲ್ಲವೂ ಕಾರ್ಯನಿರ್ವಹಿಸುತ್ತಿದ್ದು ರಾತ್ರಿ 4 ಗಂಟೆ ಮತ್ತು ಹಗಲಿನಲ್ಲಿ 4 ಗಂಟೆ 3 ಫೇಸ್ ಮತ್ತು ರಾತ್ರಿ 8 ಗಂಟೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಜನರು ಅನಾವಶ್ಯಕವಾಗಿ ಫ್ರೀಜ್, ಏರ್ಕೂಲರ್ ಬಳಸಬಾರದೆಂದು ಹೇಳಿದರು.
ತರಕಾರಿ ಬೆಳೆಗೆ ನೀರಿಲ್ಲ: ತಾಲೂಕಿನಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಉಳ್ಳಾಗಡಿ, ಅರಶಿಣ, ತರಕಾರಿ ಬೆಳೆಗಳಿಗೆ ಹಸಿ ಮೇವು ಇತರೆ ಸೊಪ್ಪುಗಳನ್ನು ಬೆಳೆಸುವುದಕ್ಕೆ ನೀರಿಲ್ಲದಂತಾಗಿದೆ. ಒಟ್ಟಾರೆ ಜಿಲ್ಲೆಯ ಹಿಂದುಳಿದ ಪ್ರದೇಶದ ಚಿಂಚೋಳಿ ತಾಲೂಕಿನ ಜನತೆ ಬೇಸಿಗೆ ಬಂದರೆ ಸಾಕು ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಎದುರಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಅಗತ್ಯವಾಗಿದೆ ಎಂಬುದು ಹಳ್ಳಿಯ ಜನರ ಬೇಡಿಕೆ.
ಮದ್ದು ನೀಡುವರೇ ಶಾಸಕ ಡಾ. ಜಾಧವ?: ಚಿಂಚೋಳಿ ನೂತನ ಶಾಸಕ ಡಾ. ಉಮೇಶ ಜಾಧವ ತಾಲೂಕು ಕಾಡುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ನೀಡುವರೇ?
ಬತ್ತದ ನಾಲವಾರ ನೀಲಗಾರ ಬಾವಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ/ಶಹಾಬಾದ್, ಮೇ 13
ಸುಮಾರು 45 ಡಿಗ್ರಿ ಸೆ. ಕಡುಬಿಸಿಲು, ಕಡಿಮೆ ಮಳೆಯಿಂದ ಇಂದು ಎಲ್ಲ ನದಿ, ಕೆರೆಗಳು ಬತ್ತಿ ಹೋಗುತ್ತಿದ್ದರೆ, ಅತ್ಯಧಿಕ ಕೊಳವೆ ಬಾವಿಗಳಿಂದ, ಹಳೆ ಕಾಲದ ಬಾವಿಗಳು ಸಹ ಬತ್ತಿ ಹೋಗುತ್ತಿವೆ, ಇದಕ್ಕೆ ಅಪವಾದ ಎನ್ನುವಂತೆ ನಾಲವಾರ ಗ್ರಾಮದ ನೀಲಗಾರ ಮನೆಯ ಬಾವಿ ಇಂಥ ಬೇಸಿಗೆಯಲ್ಲು ಗ್ರಾಮಕ್ಕೆ ಸಿಹಿ ನೀರನ್ನು ನೀಡುತ್ತಿದೆ.
ಇಡೀ ಗ್ರಾಮದಲ್ಲಿ ಸುಮಾರು 35 ರಿಂದ 40 ಹಳೆ ಕಾಲದ ಬಾವಿಗಳಿವೆ. ಅವುಗಳಲ್ಲಿ ಬಹುತೇಕ ಬಾವಿಗಳು ಬತ್ತಿ ಹೋದರೆ, ಕೆಲವು ಬಾವಿಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಲಭ್ಯವಾಗುತ್ತದೆ. ವಾರ್ಡ್ ಒಂದರಲ್ಲಿಯ ಎಲ್ಲ ಬಾವಿಗಳು ಬತ್ತಿ ಹೋಗಿದ್ದರಿಂದ ಗ್ರಾಮಸ್ಥರು ನೀರಿಗೆ ಪರದಾಡುವಂತಾಗುತ್ತಿದೆ. ಅನಿಯಮಿತಿ ವಿದ್ಯುತ್ ಸರಬರಾಜು, ಗ್ರಾಮ ಪಂಚಾಯತಿಯಿಂದ ಸಮಯಕ್ಕೆ ಸರಿಯಾಗಿ ಸರಬರಾಜು ಮಾಡದ ನೀರು, ಇಂಥ ಪರಿಸ್ಥಿತಿಯಲ್ಲಿ ಗ್ರಾಮಸ್ಥರು ವಾರ್ಡ್ 2ರಲ್ಲಿರುವ ನೀಲಗಾರ ಬಾವಿಯ ಮೇಲೆ ಅವಲಂಬಿತರಾಗುತ್ತಾರೆ. ನೀಲಗಾರರವರ ಮನೆಯ ಅಂಗಳದಲ್ಲಿ ನೆಲದಿಂದ ಎರಡು ಅಡಿ ಕಟ್ಟೆಯ ಮೇಲೆ ಇರುವ ಈ ತೆರೆದ ಬಾವಿಯಿಂದ ಜನರು ಹಗ್ಗಕ್ಕೆ ಕೊಡ ಕಟ್ಟಿ ಸುಲಭವಾಗಿ ನೀರನ್ನು ಮೇಲಕ್ಕೆ ಎತ್ತಬಹುದಾಗಿದೆ. 1972ರಲ್ಲಿ ಈ ಭಾಗದಲ್ಲಿ ತಲೆದೋರಿದ ಭೀಕರ ಬರಗಾಲ ಪರಿಸ್ಥಿತಿಯಲ್ಲೂ ಸಹ ಈ ಬಾವಿ ಬತ್ತದೆ ಗ್ರಾಮಸ್ಥರಿಗೆ ನೀರು ನೀಡಿದ ಹೆಗ್ಗಳಿಕೆ ಈ ಬಾವಿಯದಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಕುಡಿವ ನೀರಿಗೆ ಪರದಾಟ: ಮಮಶೆಟ್ಟಿ
ಚಿಂಚೋಳಿ: ತಾಲೂಕಿನ ರಟಕಲ್ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮದ ಜನರು ನೀರಿಗಾಗಿ ಪರದಾಡುವಂತಾಗಿದೆ ಎಂದು ತಾಪಂ ಮಾಜಿ ಸದಸ್ಯ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.
ರಟಕಲ್ ಗ್ರಾಮಕ್ಕೆ ಕುಡಿಯುವ ನೀರು ವ್ಯವಸ್ಥೆಗಾಗಿ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಕಂಚನಾಳ ಗ್ರಾಮದ ಹಳ್ಳದಲ್ಲಿ ಬಾವಿ ತೋಡಿಸಲಾಗಿದೆ. ಬಾವಿಯ ಕಾಮಗಾರಿ ಕಳಪೆಮಟ್ಟದಿಂದ ಕೂಡಿರುವುದರಿಂದ ಬಾವಿಯಲ್ಲಿನ ನೀರು ಬತ್ತಿ ಹೋಗಿದೆ. ಇದರಿಂದ ಗ್ರಾಮಕ್ಕೆ ಕಳೆದ ಒಂದು ವಾರದಿಂದ ನೀರಿಗಾಗಿ ಪರದಾಡುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
2 ಲಕ್ಷ ಅನುದಾನ: ಗ್ರಾಮದ ಬಸ್ ನಿಲ್ದಾಣ ಹತ್ತಿರ ಒಂದು ಬೋರವೇಲ್ ಇದ್ದು ಇಡೀ ಗ್ರಾಮವೇ ಅದರ ಮೇಲೆ ಅವಲಂಬನೆಯಾಗಿದೆ. ಹರಿಜನವಾಡದಲ್ಲಿ 2 ಬೋರವೆಲ್ ಇದ್ದು, ಒಂದು ಕೆಟ್ಟು ಹೋಗಿದೆ ಇನ್ನೊಂದು ಬೋರವೆಲ್ನಲ್ಲಿ ಸವಳು ನೀರು ಮತ್ತು ಉಪ್ಪು ನೀರಿನಿಂದ ಕೂಡಿರುವುದರಿಂದ ಜನರು ನೀರು ಸೇವನೆ ಮಾಡದಂತಾಗಿದೆ.
ರಟಕಲ್ ಗ್ರಾಮದಲ್ಲಿನ ಹಳೆ ಬಾವಿಯಲ್ಲಿನ ಹೂಳು ತೆಗೆಯುವುದಕ್ಕಾಗಿ ಗ್ರಾಮ ಪಂಚಾಯತಿ ಅನುದಾನದಲ್ಲಿ 2 ಲಕ್ಷ ಅನುದಾನ ನೀಡಲಾಗಿದೆ. ಆದರೆ ಬಾವಿಯಲ್ಲಿನ ಹೂಳು ಇನ್ನುವರೆಗೆ ತೆಗೆದಿರುವುದಿಲ್ಲ, ಹೀಗಾಗಿ ಜನರು ನೀರಿಗಾಗಿ ತೊಂದರೆ ಪಡುತ್ತಿದ್ದರು ಸಹ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಗೊಂಡಿರುವ ಬಗ್ಗೆ ತಾಪಂ ಅಧಿಕಾರಿಗಳಿಗೆ ಮತ್ತು ಜಿಪಂ, ತಾಪಂ ಸದಸ್ಯರಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಮೇಲಾಧಿಕಾರಿಗಳು ಗಮನ ಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಿರ್ಲಕ್ಷ್ಯತನ ತೋರಿಸಿದಲ್ಲಿ ರಟಕಲ್ ಗ್ರಾಮದಲ್ಲಿ ಮೇ 17 ರಂದು ರಸ್ತೆತಡೆ ಚಳವಳಿ ನಡೆಸಲಾಗುವುದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಜಿಪಂ ಸಿಇಒ ಆದೇಶ ಪಾಲಿಸದ ಅಧಿಕಾರಿಗಳು
ಕ.ಪ್ರ. ವಾರ್ತೆ, ಗುಲ್ಬರ್ಗ/ಶಹಾಬಾದ್, ಮೇ 13
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ನೀರಿನ ಅರವಟ್ಟಿಗೆ, ದನಕರುಗಳ ನೀರಿಗಾಗಿ ನೀರಿನ ತೊಟ್ಟಿ ನಿರ್ಮಿಸಲು ಜಿಲ್ಲಾ ಪಂಚಾಯಿತಿ ಆದೇಶಿಸಿದ್ದರೂ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಈ ಬಗ್ಗೆ ಜಿಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಕಡು ಬಿಸಿಲಿನಲ್ಲಿ ಸಾರ್ವಜನಿಕರ ನೀರಿನ ದಾಹ ತೀರಿಸುವ ಉದ್ದೇಶದಿಂದ ಎಲ್ಲ ಗ್ರಾಪಂಗಳಿಗೆ ಲಿಖಿತ ಆದೇಶ ನೀಡಿದ್ದಲ್ಲದೆ, ಪತ್ರಿಕಾ ಪ್ರಕಟಣೆ ಮೂಲಕವೂ ತಿಳಿಸಲಾಗಿತ್ತು. ಆದರೆ ಗ್ರಾಪಂ ಅಧ್ಯಕ್ಷರಾಗಲೀ, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಜಿಪಂ ಮುಖ್ಯ ಅಧಿಕಾರಿಗಳ ಆದೇಶಕ್ಕೆ ಸೊಪ್ಪು ಹಾಕಿಲ್ಲ. ಇಂಥ ಕಡು ಬಿಸಿಲಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮದ ಯಾವುದೇ ಭಾಗದಲ್ಲಿ ಅರವಟ್ಟಿಗೆ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಜಾನುವಾರು ರೋದನೆ ಕೇಳೋರ್ಯಾರು?: ಇದರಿಂದಾಗಿ ಸಾರ್ವಜನಿಕರು, ವ್ಯಾಪಾರ, ವಹಿವಾಟಿಗೆ ಸುತ್ತಲಿನ ಗ್ರಾಮ, ತಾಂಡಾಗಳಿಂದ ಬರುವ ಜನ ದುಡ್ಡು ತೆತ್ತು ನೀರು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯರು ಹಣ ನೀಡಿ ನೀರು ಖರೀದಿಸಿಬಹುದು. ಆದರೆ, ಗ್ರಾಮದ ಜಾನುವಾರಗಳು ಮೇಯಲು ಹೋಗಿ, ನೀರು ಬೇಕಾದಾಗ ಮೇಯುವುದನ್ನು ಬಿಟ್ಟು ನೀರಿಗಾಗಿ ಮನೆಗೆ ಹಿಂತಿರುಗಬೇಕಾಗಿದೆ.
ಸರ್ಕಾರದ ಆದೇಶದಂತೆ ಜಾನುವಾರುಗಳಿಗಾಗಿ ನೀರಿನ ತೊಟ್ಟಿ ನಿರ್ಮಿಸಲು ಆದೇಶಿಸಿದರು ಸಹ ಅವುಗಳ ಬಗ್ಗೆಯು ಗ್ರಾಪಂ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಗ್ರಾಮದ ಜಾನುವಾರುಗಳು ಅಲ್ಲಲ್ಲಿ ನಿಂತ ಕೊಳಚೆ ನೀರು, ಕೋರಿಸಿದ್ದೇಶ್ವರ ಮಠದ ಹಿಂದೆ ಇರುವ ನೀರಿನ ಟ್ಯಾಂಕ್ ಅಡಿಯಲ್ಲಿ ನಿಂತ ನೀರಿನ ಮೇಲೆ ಅವಲಂಬಿತರಾಗಿವೆ.
ಈ ಬಗ್ಗೆ ಜಿಪಂ ಮುಖ್ಯ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ದಿಕ್ಕರಿಸಿರುವ ಗ್ರಾಪಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಕೂಡಲೇ ಸರ್ಕಾರದ ಆದೇಶ ಪಾಲಿಸಲು ನಿರ್ದೇಶಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.