ತಪ್ಪಿದ ಬಾಲ್ಯವಿವಾಹ
ಗುಲ್ಬರ್ಗ: ಇಲ್ಲಿನ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ, ಡಾನ್ಬಾಸ್ಕೋ ಕಾರ್ಯಕರ್ತರುಗಳು ಕೂಡಿಕಂಡು ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಸೋಮವಾರ ಇಲ್ಲಿಂದ 15 ಕಿಮೀ ದೂರದಲ್ಲಿರುವ ಹತಗುಂದಾ ಗ್ರಾಮದಲ್ಲಿ ನಡೆಯಬೇಕಿದ್ದ ಬಾಲ್ಯವಿವಾಹ ತಪ್ಪಿದೆ.
ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿ: ಗುಲ್ಬರ್ಗ ಅಡತ್ನಲ್ಲಿ ಕೆಲಸದಲ್ಲಿರುವ 28 ವರ್ಷದ ಯುವಕ ಹತಗುಂದಾದಲ್ಲಿ 15 ವರ್ಷ ವಯಸ್ಸಿನ ಬಾಲಕಿಯೊಂದಿಗೆ ವಿವಾಹ ನಡೆಯುವುದರಲ್ಲಿತ್ತು. ವಿವಾಹ ದಿನವಾದ ಸೋಮವಾರ ಬೆಳಗ್ಗೆ ತಮಗೆ ದೊರಕಿದ ಖಚಿತ ಮಾಹಿತಿಯನ್ನಾಧರಿಸಿ ಜಿಲ್ಲಾ ಮಕ್ಕಳ ಘಟಕದ ಕಾರ್ಯಕರ್ತರು ಹತಗುಂದಾಕ್ಕೆ ಹೋಗಿ ಬಾಲ್ಯವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರತ್ನಾ ಕಲಂದಾನಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಾರಾಯಣಸ್ವಾಮಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಕಾನೂನು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ, ರಕ್ಷಣಾಧಿಕಾರಿ ಸಂತೋಷ ಕುಲ್ಕರ್ಣಿ, ಮಂಜುಳಾದೇವಿ ರೆಡ್ಡಿ, ಸಾವಿತ್ರಿದೇವಿ, ಡಾನ್ಬಾಸ್ಕೋ ಕಾರ್ಯಕರ್ತರಾದ ಫಾದರ್ ಪ್ರಸಾದ್, ವಿಜಯಲಕ್ಷ್ಮೀ, ಗ್ರಾಮೀಣ ಠಾಣೆ ಪಿಎಸ್ಐ ಆನಂದರಾವ್, ಎಎಸ್ಐ ಅಣ್ಣಾರಾವ, ಪೇದೆ ಶಿವಾನಂದ ಇವರನ್ನೊಳಗೊಂಡ ತಂಡ ಹಂತಗುಂದಾಕ್ಕೆ ತೆರಳಿ ಅಲ್ಲಿನ ವಿವಾಹಕ್ಕೆ ಸಜ್ಜಾಗಿದ್ದ ಮಂಟಪಕ್ಕೆ ಹೋಗಿ ಬಾಲ್ಯವಿವಾಹ, ಕಾನೂನು, ಹೆಣ್ಣುಮಗುವಿನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿತು.
ಮುಚ್ಚಳಿಕೆ ಪತ್ರ ಬರೆದು ಕೊಟ್ಟರು: ಬಾಲಕಿಯ ಪೋಷಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿದ ಸಮಿತಿಯ ಕಾರ್ಯಕರ್ತರು ಬಾಲ್ಯ ವಿವಾಹದ ದುಷ್ಪರಿಣಾಮ ಹಾಗೂ ಕಾನೂನು ತೊಡಕುಗಳ ಸಮಗ್ರ ಚಿತ್ರಣ ನೀಡಿದಾಗ ಪೋಷಕರೇ ಖುದ್ದು ಬಾಲ್ಯ ವಿವಾಹ ಮಾಡುವುದಿಲ್ಲ, ತಮ್ಮ ಹುಡುಗಿಗೆ 18 ತುಂಬಿದ ಮೇಲೆಯೇ ವಿವಾಹ ಮುಹೂರ್ತ ನಿಗದಿಪಡಿಸುತ್ತೇವೆ ಎಂದು ಮುಚ್ಚಳಿಕೆ ಪತ್ರ ಬರೆದು ಕೊಟ್ಟು ವಿವಾಹ ಕೈಬಿಟ್ಟರು ಎಂದು ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಸ್ಥಳೀಯ ಜನತೆ, ಗ್ರಾಮದ ಹಿರಿಯರು, ಎಲ್ಲ ಸಮುದಾಯಗಳ ಮುಖಂಡರುಗಳು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪೊಲೀಸ್ ಜೊತೆ ಚರ್ಚಿಸಿತಲ್ಲದೆ ತಮ್ಮೂರಲ್ಲಿ ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗೆ ವಿದಾಯ ಹೇಳುವುದಾಗಿಯೂ ಮಾತು ಕೊಟ್ಟಿದ್ದಾರೆ ಎಂದು ಭರತೇಶ ಹೇಳಿದ್ದಾರೆ.
ಬಾಲ್ಯ ವಿವಾಹ ಅರಿವಿಲ್ಲ: ವಿವಾಹ ಬಂಧನಕ್ಕೊಳಗಾಗಲಿದ್ದ ಬಾಲಕಿಯ ಪಾಲಕರು ಕೃಷಿ ಕೂಲಿಗಳು. ಇವರೊಂದಿಗಿನ ಮಾತುಕತೆ ಸಂದರ್ಭದಲ್ಲಿ ಅವರಿಗೆ ಬಾಲ್ಯ ವಿವಾಹ, ಅದರ ಪರಿಕಲ್ಪನೆ, ಅದರಿಂದ ಆರೋಗ್ಯದ ಮೇಲಾಗುವ ಕೆಟ್ಟ ಪರಿಣಾಮಗಳು, ಕಾನೂನು ವಿಚಾರಗಳಾವುದೂ ಗೊತ್ತಿರಲಿಲ್ಲ. ಪಾಲಕರೇ ಖುದ್ದು ತಮಗೇನು ಅರಿವಿಲ್ಲ ಎಂಬುದನ್ನು ಮಾತುಕತೆಯಲ್ಲೇ ಹೇಳುವ ಮೂಲಕ ಮುಗ್ಧತೆ ಪ್ರದರ್ಶಿಸಿದ್ದರಿಂದ ಮಕ್ಕಳ ರಕ್ಷಣಾ ಸಮಿತಿಯವರೂ ಸಹ ಈ ಪ್ರಕರಣದಲ್ಲಿ ಹತಗುಂದಾದಲ್ಲಿ ಅರಿವಿನ ಕಾರ್ಯಕ್ರಮ ನಡೆಸಿದ್ದಲ್ಲದೆ ಸದರಿ ವಿವಾಹ ನಡೆಯದಂತೆ ನೋಡಿಕೊಂಡಿದ್ದಾರೆ ಎಂದು ಭರತೇಶ ಹೇಳಿದ್ದಾರೆ.