ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಏರ್‌ಪೋರ್ಟ್ ಕಾಮಗಾರಿ ಮುಕ್ತಿ ಸಿಕ್ಕೀತೆ?

Srinivasa Murthy VN
Updated On : 8 Nov 2013, 11:05 am

- ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.7
ದೇಶದ ಪ್ರಾದೇಶಿಕ ವಿಮಾನ ನಿಲ್ದಾಣ ಜಾಲಕ್ಕೆ ಮುನ್ನುಡಿ ಬರೆಯಬೇಕಿದ್ದ ಗುಲ್ಬರ್ಗ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗಳಿಗೆ ಗುತ್ತಿಗೆದಾರ ಸಂಸ್ಥೆಗಳ ಒಳ ಜಗಳದಿಂದ ಅರ್ಧಕ್ಕೇ ಕಾಮಗಾರಿ ಸ್ಥಗಿತಗೊಂಡು ಗ್ರಹಣ ಅಮರಿಕೊಂಡಿದೆ.
ಇದರಿಂದ ಈ ಹಣಕಾಸು ವರ್ಷಾಂತ್ಯಕ್ಕೆ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ನೀಡಿರುವ ಹೇಳಿಕೆಯೂ ಹುಸಿಯಾಗಲಿದೆ. ಏಕೆಂದರೆ ಶೇ.50ರಷ್ಟು ಪೂರ್ಣಗೊಳ್ಳದ ಉಭಯ ಯೋಜನೆಗಳು ಕಳೆದೊಂದು ವರ್ಷದಿಂದ ಹೆಚ್ಚು ಕಡಿಮೆ ಸ್ಥಗಿತಗೊಂಡಿದೆ.
ರಾಹಿ ಏವಿಯೇಷನ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ (ಆರ್‌ಎಎಚ್) ಮತ್ತು ಐಎಲ್ ಆ್ಯಂಡ್ ಎಫ್‌ಎಸ್ ಟ್ರಾನ್ಸ್‌ಪೋರ್ಟೇಷನ್ ಲಿಮಿಟೆಡ್ (ಐಟಿಎನ್‌ಎಲ್) ಸಹಭಾಗಿತ್ವದಡಿಯಲ್ಲಿ ಗುಲ್ಬರ್ಗ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಸರ್ಕಾರಿ-ಖಾಸಗಿ ಸಹಭಾಗಿತ್ವ: ಆಂಧ್ರಪ್ರದೇಶದ ಸತ್ಯಂ ಸಂಸ್ಥೆ ಪತನಾನಂತರ ಕರ್ನಾಟಕ ಸರ್ಕಾರ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಗಳಿಗೆ ಚಾಲನೆ ನೀಡಿತ್ತು. 2010ರ ಫೆ.18ರಂದು ಈ ಯೋಜನೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿ ವಿಮಾನ ನಿಲ್ದಾಣ ಅಭಿವೃದ್ಧಿ, ಹಣಕಾಸು ಮತ್ತು ನಿರ್ಮಾಣದ ಮುಂದಾಳತ್ವವನ್ನು ರಾಹಿಗೆ ವಹಿಸಿತ್ತು.
ಗುಲ್ಬರ್ಗ ಯೋಜನೆಯ ಮೂರನೇ ಎರಡರಷ್ಟು ಹಾಗೂ ಶಿವಮೊಗ್ಗ ಯೋಜನೆಯ ಬಹುತೇಕ ಮೂರರಷ್ಟು ಕೆಲಸವನ್ನು ಪೂರ್ಣಗೊಳಿಸಲು ರಾಹಿ 2011ರ ಡಿಸೆಂಬರ್‌ರವರೆಗೂ ಸತತ ಕಾರ್ಯನಿರ್ವಹಿಸಿದೆ. ಆದರೆ ಆ ಬಳಿಕ ರಾಹಿಯ ಎರಡು ಪ್ರವರ್ತಕ ಸಂಸ್ಥೆಗಳ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ತಲೆದೋರಿ ಯೋಜನೆಗಳು ಸ್ಥಗಿತಗೊಂಡಿವೆ.
ರನ್‌ವೇನಲ್ಲೇ ನಿಂತ ಕಾಮಗಾರಿ: ಒಪ್ಪಂದದ ಪ್ರಕಾರ 2012ರ ಮೇ 22 ರಂದೇ ಉಭಯ ಯೋಜನೆಗಳು ಪೂರ್ಣಗೊಳ್ಳಬೇಕಿತ್ತು, ರಾಹಿ ಮನವಿಯಂತೆ ಸರ್ಕಾರ 2012ರ ಡಿಸೆಂಬರ್‌ವರೆಗೂ ಡೆಡ್‌ಲೈನ್ ವಿಸ್ತರಣೆಗೂ ಒಪ್ಪಿಗೆ ನೀಡಿ ಆದೇಶಿಸಿತ್ತು.
ಗುಲ್ಬರ್ಗದಲ್ಲಿ 2.5 ಕಿ.ಮೀ. ಉದ್ದದ ರನ್‌ವೇ ಪೈಕಿ 2 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ, ಶಿವಮೊಗ್ಗದಲ್ಲೂ ಹೆಚ್ಚೂ ಕಡಿಮೆ ಕಾಮಗಾರಿ ಇದೇ ಹಂತದಲ್ಲಿದೆ. 1ನೇ ಹಂತದ ಯೋಜನೆಯಲ್ಲಿ ಏಟಿಸಿ (ಏರ್ ಟರ್ಮಿನಲ್ ಸೆಂಟರ್), ಮುಖ್ಯ ಪ್ರಾಂಗಣ, ವಿಮಾನಗಳ ನಿಲುಗಡೆ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಜಗಳದಿಂದ ರನ್ ವೇ, ಏಪ್ರಾನ್, ಟ್ಯಾಕ್ಸಿ ವೇ, ಟರ್ಮಿನಲ್ ಬಿಲ್ಡಿಂಗ್ ಸೇರಿದಂತೆ ಯಾವ ಕಟ್ಟಡ ಕಾಮಗಾರಿಗಳೂ ಪೂರ್ಣವಾಗಿಲ್ಲ.
ಏನಾದರೂ ಮಾಡಿ ವಿಮಾನ ನಿಲ್ದಾಣ ಕಾಮಗಾರಿ ಮುಗಿಯುವಂತೆ ಮಾಡೋಣವೆಂದು ಸಿದ್ದರಾಮಯ್ಯ ಹೇಳಿದ್ದಾರಾದರೂ ಅದ್ಯಾವ ಕ್ರಮ ಸರ್ಕಾರದಿಂದ ಕೈಗೊಳ್ಳಲಾಗುವುದೋ ಕಾದು ನೋಡಬೇಕು.

ಗುಲ್ಬರ್ಗ-ಶಿವಮೊಗ್ಗ  ವಿಮಾನ ನಿಲ್ದಾಣ ಸುತ್ತಮುತ್ತ
-ಗುಲ್ಬರ್ಗ ವಿಮಾನ ನಿಲ್ದಾಣಕ್ಕೆಂದು ಶ್ರೀನಿವಾಸ ಸರಡಗಿ ಹತ್ತಿರ ಸರ್ಕಾರ ವಶಪಡಿಸಿಕೊಂಡಿರುವ 692 ಎಕರೆ ಭೂಮಿಯನ್ನು ರಾಹಿಗೆ ವಹಿಸಿಕೊಡಲಾಗಿದೆ. ಇದರಲ್ಲಿ ಕೇವಲ 350 ಎಕರೆಯಲ್ಲೇ ವಿಮಾನ ನಿಲ್ದಾಣ ಕಾಮಗಾರಿಗಳು ನಡೆಸಲಾಗುತ್ತಿದೆ. ಉಳಿದಂತೆ 348 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
- ಗುಲ್ಬರ್ಗ ಯೋಜನೆಯಲ್ಲಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. 186.33 ಕೋಟಿ ವೆಚ್ಚದ ಯೋಜನೆಯಲ್ಲಿ ಇದುವರೆಗೂ 120 ಕೋಟಿ ವೆಚ್ಚವಾಗಿದೆ.
-ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಯ ಕಾಮಗಾರಿಯಲ್ಲಿ ಶೇ.40ರಷ್ಟು ಪೂರ್ಣಗೊಂಡಿದೆ. 194.04 ಕೋಟಿ ಯೋಜನೆಯಲ್ಲಿ 36 48 ಕೋಟಿ ವ್ಯಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement