ವಿದ್ಯುತ್ ಪ್ರತಿನಿಧಿಗಳ ಬೇಡಿಕೆ ಈಡೇರಿಸಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.7
ಗುಲ್ಬರ್ಗ ವಿಭಾಗದ ಜೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರು, ಬಳ್ಳಾರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ವಿದ್ಯುತ್ ಪ್ರತಿನಿಧಿಗಳು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗುಲ್ಬರ್ಗದ ಜೆಸ್ಕಾಂ ಕಚೇರಿ ಎದುರು ನಡೆಸುತ್ತಿರುವ ಹೋರಾಟ 2ನೇ ದಿನಕ್ಕೆ ಮುಂದುವರೆದಿದೆ.
ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ನಗರದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜೆಸ್ಕಾಂ ಕಚೇರಿ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮುಂದುವರಿಸಲಾಗಿದೆ.
ಸ್ಥಳಕ್ಕೆ ಬಿಜೆಪಿ ಮುಖಂಡ, ಮಾಜಿ ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ನ್ಯಾಯಯುತವಾದ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮ ವಿದ್ಯುತ್ ಪ್ರತಿನಿಧಿಗಳು ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನ ಕೂಡ ಇಲ್ಲದೆ ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರಿಗೆ ಕನಿಷ್ಠ ವೇತನ ನೀಡುವುದರ ಜತೆಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗುಲ್ಬರ್ಗ ಜಿಪಂ ವ್ಯಾಪ್ತಿಯಲ್ಲಿ ಕಳೆದ ವರ್ಷ ನಡೆದ 81 ಗ್ರಾಪಂ ಕಾರ್ಯದರ್ಶಿ ನೇಮಕಾತಿಯಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಕೂಡಲೇ ಉನ್ನತ ಅಧಿಕಾರಿಗಳ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಶ್ರಮ ಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬಿಲ್ ಕಲೆಕ್ಟರ್ರಾಗಿ ನೇಮಕಗೊಂಡವರಿಗೆ ಇತ್ತೀಚೆಗೆ ಬಡ್ತಿ ನೀಡಲಾಗಿದೆ. ಇದರಲ್ಲಿ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸರ್ಕಾರದ ನಿಯಮದಂತೆ ಹರಿಜನ- ಗಿರಿಜನ, ಹಿಂದುಳಿದ ವರ್ಗ, ಮಹಿಳಾ ಅಭ್ಯರ್ಥಿ, ಮಾಜಿ ಸೈನಿಕರು, ಅಂಗವಿಕಲ ಅಭ್ಯರ್ಥಿ, ಯೋಜನಾ ನಿರಾಶ್ರಿತ ಅಭ್ಯರ್ಥಿಗಳು ಹಾಗೂ ಗ್ರಾಮೀಣ, ಕನ್ನಡ ಮಾಧ್ಯಮ ಅಭ್ಯರ್ಥಿಗಳು ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿಯಮಗಳನ್ನು ಉಲ್ಲಂಘಿಸಿ ಗುಲ್ಬರ್ಗ ಜಿಪಂ ಆದೇಶ ಹೊರಡಿಸಿದೆ ಎಂದು ದೂರಿದರು.
ನೇಮಕಾತಿಯ ವಿವರಗಳನ್ನು ಅಧಿಕೃತವಾಗಿ ಇದುವರೆಗೂ ಪ್ರಕಟಿಸಿಲ್ಲ ಎಂದು ಆರೋಪಿಸಿರುವ ಹಿರೇಮಠ ಅವರು, ಈ ಬಗ್ಗೆ ತಾವು ಅನೇಕ ಸಲ ವಿವರಗಳನ್ನು ಒದಗಿಸುವಂತೆ ಕೇಳಿದಾಗ ವಿವರ ನೀಡಿರಲಿಲ್ಲ ಎಂದು ದೂರಿದರು.
ತಾವು ಮಾಹಿತಿ ಹಕ್ಕು ಕಾಯ್ದೆಯಡಿ 16.9.2013ರಂದು ಜಿಪಂ ಮುಖ್ಯ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಿದಾಗ ಅವರು, ಈ ಬಗ್ಗೆ ಮಾಹಿತಿ ನೀಡುವಂತೆ ಉಪ ಕಾರ್ಯದರ್ಶಿಗಳಿಗೆ ಸೂಚಿಸಿದರು. ಉಪ ಕಾರ್ಯದರ್ಶಿಗಳು ಪುನಹ ವಿವರಗಳನ್ನು ಜಿಪಂ ಯೋಜನಾಧಿಕಾರಿಗಳಿಂದ ಪಡೆಯುವಂತೆ ಸೂಚಿಸಿದರು. ಯೋಜನಾಧಿಕಾರಿಗಳು ಉಪ ಕಾರ್ಯದರ್ಶಿಯಿಂದ ಪಡೆಯುವಂತೆ ಮತ್ತು ಪತ್ರ ಬರೆದು ಮರಳಿ ಕಳುಹಿಸಿದ್ದಾರೆ. ಈ ಇಬ್ಬರು ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಲೇ ಅಲೆದಾಡಿಸುತ್ತಿದ್ದಾರೆ. ಇದರಿಂದ ನೇಮಕಾತಿಯಲ್ಲಿ ಲೋಪ ಆಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದರು.
ಇಂದಿನ ಪಾರದರ್ಶಕ ಆಡಳಿತ ಯುಗದಲ್ಲಿ ಈ ರೀತಿ ಮಾಹಿತಿ ಒಗದಿಸದೇ ನೇಮಕಾತಿ ಮಾಡಿಕೊಳ್ಳುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಕೂಡಲೇ ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಗ್ರಾಪಂಗಳಲ್ಲಿ ಕರ ವಸೂಲಿಕಾರರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೆ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಮಾಡುವಂತೆ ಅನೇಕ ವರ್ಷಗಳಿಂದ ಒತ್ತಡವಿತ್ತು. ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರು ಆದೇಶ ಹೊರಡಿಸಿ ಕರ ವಸೂಲಿಗಾರರಿಗೆ ಶೇ.70ರಷ್ಟು ಮೀಸಲಾತಿ ಕಲ್ಪಿಸಿ ಇದರಲ್ಲಿ ಸರ್ಕಾರದ ನಿಯಮದಂತೆ ರೋಸ್ಟರ್ ರಿಜರ್ವೇಶನ್ ಅಳವಡಿಸಲು ಸೂಚಿಸಲಾಗಿತ್ತು. ಇದೇ ಸುತ್ತೋಲೆಯಲ್ಲಿ ಪಂಪ ಆಪರೇಟರ್ ಇತರ ಸಿಬ್ಬಂದಿಗೆ ಬಡ್ತಿಯ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಗುಲ್ಬರ್ಗ ಜಿಪಂ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಬರುವ ದಿನಗಳಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಕಟ್ಟುನಿಟ್ಟಾಗಿ ಸರ್ಕಾರದ ಆದೇಶ ಪಾಲಿಸಬೇಕು. ಜೇಷ್ಠತಾ ಪಟ್ಟಿ ಪ್ರಕಟಿಸಿ ಎಲ್ಲ ಸಿಬ್ಬಂದಿ ವರ್ಗದವರಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ನಾಗರಾಜ ಹರಸೂರ್, ಸಂಗಮೇಶ, ಪ್ರಭುದೇವ, ರೇವಣಸಿದ್ದಯ್ಯ, ಮಲ್ಲಿಕಾರ್ಜುನ ಸಿಂಧನೂರ, ಹಣಮಂತ, ಖಂಡಪ್ಪ, ಕಾಮರಾಜ, ಈರಣ್ಣ, ಬಸವರೆಡ್ಡಿ, ಶಂಕರ, ಶಿವಕುಮಾರ್, ಪ್ರಹ್ಲಾದ, ಈರಣ್ಣ, ರಾಚಪ್ಪ, ನೂರಾರು ಪ್ರತಿನಿಧಿಗಳು ಇದ್ದರು.