ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಾಲಾ ಆವರಣದತ್ತ ಬಚ್ಚಲು ನೀರು: ಸೂಕ್ತ ಕ್ರಮಕ್ಕೆ ಆಗ್ರಹ

Srinivasa Murthy VN
Updated On : 8 Nov 2013, 11:06 am

ಕನ್ನಡಪ್ರಭ ವಾರ್ತೆ ಚಿತ್ತಾಪುರ ನ.7
ಇಲ್ಲಿನ ಪುರಾತನ ಶಾಲೆಗಳಲ್ಲಿ ಒಂದಾದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅವರಣ ಗೋಡೆ ಶಿಥಿಲಾವಸ್ಥೆ ತಲುಪುತ್ತಿದೆ. ಗೋಡೆಯ ಸಮೀಪದಲ್ಲೇ ಇರುವ ಮನೆಗಳ ಬಚ್ಚಲಿನ ಕೊಳಕು ನೀರು, ಹೊಲಸು ಆವರಣವನ್ನು ಆವರಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪಾಠ-ಪ್ರವಚನಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಶಾಲೆಯಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಸರಿಯಾದ ಆವರಣ ವ್ಯವಸ್ಥೆ ಇಲ್ಲದೇ ಕ್ರೀಡಾ ಚಟುವಟಿಕೆಗೆ ತೊಂದರೆಯಾಗುತ್ತಿದೆ. ವಾಲಿಬಾಲ್ ನೆಟ್ ಇರುವ ಸ್ಥಳದ ಮಗ್ಗುಲಲ್ಲೇ ಹೊಲಸು ನೀರು ಹರಿದು ಬರುತ್ತಿರುವುದು ವಿದ್ಯಾರ್ಥಿಗಳಿಗೆ ತುಂಬಾ ಕಿರಿಕಿರಿಯಾಗುತ್ತಿದೆ.
ಕೊಳಕು ನೀರಿನಿಂದಾಗಿ ಬೆಳೆದಿರುವ ಗಿಡ, ಪೊದೆಗಳನ್ನು ತೆರವುಗೊಳಿಸಿ, ನಿರ್ಮಲ ವಾತಾವರಣ ಸೃಷ್ಟಿಸಿ ಕಲಿಕೆಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಿದೆ. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಇಲಾಖೆ ಅಧಿಕಾರಿಗಳು, ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ಸೈಯದ್ ಮನ್ಸೂರ್ ಎಚ್ಚರಿಸಿದ್ದಾರೆ.

ವ್ಯಕ್ತಿ ಸಾವು, ಮೂವರಿಗೆ ಗಾಯ
ಗುಲ್ಬರ್ಗ: ನಗರದ ಹೊರವಲಯದ ಆಳಂದ ರಸ್ತೆಯಲ್ಲಿರುವ ಪಟ್ಟಣ ಕ್ರಾಸ್‌ಬಳಿ ಲಾರಿ ಮತ್ತು ಟವೇರಾ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸ್ಥಳದಲ್ಲಿಯೇ ಒಬ್ಬ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ದುರ್ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಆಳಂದದಿಂದ ಗುಲ್ಬರ್ಗ ಕಡೆ ಹೊರಟಿದ್ದ ಲಾರಿ ಮತ್ತು ಗುಲ್ಬರ್ಗದಿಂದ ಆಳಂದಕ್ಕೆ ಹೊರಟಿದ್ದ ಟವೇರಾ ನಡುವೆ ಇಲ್ಲಿನ ಪಟ್ಟಣ ಕ್ರಾಸ್ ಬಳಿ ಸಂಭವಿಸಿದ ಡಿಕ್ಕಿಯಲ್ಲಿ ದಾವಣಗೆರೆ ಮೂಲದ ಶಂಭುಲಿಂಗ (48) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರಾಮು, ಶಿವು ಮತ್ತು ಶಿವಪುತ್ರ ಎಂಬುವರು ತೀವ್ರ ಗಾಯಗೊಂಡಿದ್ದು, ಅವರನ್ನು ಗುಲ್ಬರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ದಾವಣಗೆರೆಯ ಎಲ್ಕೆಟ್ರಿಕಲ್ ಎಂಜಿನಿಯರ್ ಆಗಿರುವ ಶಂಭುಲಿಂಗ ಮೂರು ಜನರನ್ನು ಕರೆದುಕೊಂಡು ಗುಲ್ಬರ್ಗದ ಹೊರ ವಲಯದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯ ಕಟ್ಟಡದ ವೈರಿಂಗ್ ಮಾಡಲು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಟವೇರಾ ವಾಹನ ಸಂಪೂರ್ಣ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆಯ ಸಿಪಿಐ ರಾಜಣ್ಣ, ಪಿಎಸ್‌ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಾರಿ ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement