ಸತ್ಯಪ್ರಮೋದತೀರ್ಥರ ಆರಾಧನಾ ಮಹೋತ್ಸವ
ಗುಲ್ಬರ್ಗ: ನಗರದ ಬ್ರಹ್ಮಪುರ ರಾಘವೇಂದ್ರ ಮಠದಲ್ಲಿ ಉತ್ತರಾದಿ ಮಠದ ಪರಂಪರೆಯಲ್ಲಿ ಮೇರುವಾಗಿ ಗುರುತಿಸಿಕೊಂಡಿದ್ದ ಸತ್ಯಪ್ರಮೋದ ತೀರ್ಧ ಶ್ರೀಪಾದಂಗಳವರ 16ನೇ ಆರಾಧನಾ ಮಹೋತ್ಸವ ಬಲು ವಿಜೃಂಭಣೆಯಿಂದ ನಡೆಯಿತು.
ಆರಾಧನೆ ಅಂಗವಾಗಿ ಪಂಡಿತರುಗಳಿಂದ ಸತ್ಯಪ್ರಮೋದರ ಜೀವನ, ಅವರು 4 ದಶಕಗಳ ಕಾಲ ಹಂಸನಾಮಕ ಪರಮಾತ್ಮಮನ ಪರಂಪರೆಯ ಪೀಠವನ್ನು ಏರಿ ಮೂಲರಾಮದೇವರ ಪೂಜೆ ಸಲ್ಲಿಸಿದ ಪರಿಯನ್ನು ಬಣ್ಣಿಸುವ, ಹೆಚ್ಚಿನ ವಿಚಾರಗಳನ್ನು ಭಕ್ತರಿಗೆ ತಿಳಿಸಲು ಉಪನ್ಯಾಸಗಳು ನಡೆದವು.
ಆರಾಧನೆ ನಿಮಿತ್ತ ಸತ್ಯಪ್ರಮೋದ ತೀರ್ಥರ ಭಾವಚಿತ್ರದ ಮೆರವಣಿಗೆ, ಅಲಂಕೃತ ಗಜವಾಹನದೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಭಜನೆಗಳು ನಡೆದವು. ಸುಮಂಗಳಿರಯ ಪೂರ್ಣಕುಂಭ ಮೆರವಣಿಗೆ ಗಮನ ಸೆಳೆದಿತ್ತು.
ಬೆಂಗಳೂರು ಜಯತೀರ್ಥ ವಿದ್ಯಾಪೀಠ, ಮುಂಬಯಿನ ಸತ್ಯಧ್ಯಾನ ವಿದ್ಯಾಪೀಠದ ವಿದ್ಯಾರ್ಥಿಗಳು ಸ್ತೋತ್ರ, ಸುಮಧ್ವ ವಿಜಯ, ವ್ಯಾಕರಣ, ವಾದಾವುಲಿ, ರಮಾಣ ಪದ್ಧತಿ ಮೊದಲಾದ ಗ್ರಂಥಗಳ ಪರೀಕ್ಷೆ ಹಾಗೂ ಅನುವಾದಗಳು ನಡೆಸಿಕೊಟ್ಟರು. ಗಿರೀಶಾಚಾರ್ಯ ಅವಧಾನಿ, ಗೋಪಾಲಾಚಾರ್ಯ ಅಕಮಂಚಿ, ಹಣಮಂತಾಚಾರ್ಯ ಸರಡಗಿ, ಪ್ರಸನ್ನಾಚಾರ್ಯ ಜೋಶಿ, ವಿನೋದಚಾರ್ಯ ಜೋಶಿ, ಶ್ರೀನಿವಾಸಾಚಾರ್ಯ ಪದಕಿ, ವರದಾಚಾರ್ಯ ಚಿಟಗುಪ್ಪ, ರುಚಿರಾಚಾರ್ಯ ಟೆಂಗಳಿ, ವಿಷ್ಣುದಾಸಾಚಾರ್ಯ ಅಹಂಕಾರಿ ಅವರುಗಳಿಂದ ಸತ್ಯಪ್ರಮೋದತೀರ್ಥರು ಮನುಕುಲ ಉದ್ಧಾರಕ್ಕಾಗಿ ಭಕ್ತರನ್ನು ಉದ್ಧರಿಸಿದ ಮಹಾಮಹಿಮರಾಗಿದ್ದರೆಂದು ಉಪನ್ಯಾಸಗಳಲ್ಲಿ ವಿಷಯಗಳನ್ನು ಪ್ರಸ್ತಾಪಿಸಿ ಗುಣಗಾನ ಮಾಡಿದರು. ರಜತ ರಥೋತ್ಸವ ಜರುಗಿತು. ರಾಘವೇಂದ್ರ ಸ್ವಾಮಿಗಳು ಹಾಗೂ ಸತ್ಯಾಧ್ಯಾನತೀರ್ಥರ ವೃಂದಾವನಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು.
ಪ್ರಖ್ಯಾತ ಗಾಯಕ ಅನಂತ್ ಕುಲಕರ್ಣಿ ಬಾಗಲಕೋಟ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು ಎಂದು ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ತಿಳಿಸಿದ್ದಾರೆ.