ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ಕಳವು
ಗುಲ್ಬರ್ಗ: ಐವರು ಮುಸುಕುದಾರಿಗಳು ನಗರದ ಹುಮನಾಬಾದ್ ಬೇಸ್ ಹತ್ತಿರದ ಲೋಹರಗಲ್ಲಿಯಲ್ಲಿರುವ ಮುತ್ತೂಟ್ ಫಿನ್ ಕಾರ್ಪ್‌ನ ಕಾವಲುಗಾರ ಮತ್ತು ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 1 ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಮುತ್ತೂಟ್ ಫಿನ್ ಕಾರ್ಪ್ ಸಿಬ್ಬಂದಿ ಶನಿವಾರ ಬೆಳಗ್ಗೆ 9ಕ್ಕೆ ಕಚೇರಿ ತೆರೆದಿದ್ದು, 9.20ರ ಸುಮಾರಿಗೆ ಗ್ರಾಹಕರಂತೆ ಬಂದವರೊಬ್ಬರು ತಮ್ಮ ಬಳಿ ಇರುವ ಎರಡು ಬಂಗಾರದ ಚೈನ್‌ಗಳ ಬೆಲೆಯನ್ನು ವಿಚಾರಿಸಿದ್ದರು. ಅವರು ಹೊರ ಹೋಗುತ್ತಿದ್ದಂತೆ ಮಾರಕಾಸ್ತ್ರ ಹಾಗೂ ಪಿಸ್ತೂಲ್ ಹೊಂದಿದ ಸುಮಾರು 35-40 ವರ್ಷದ ಐವರು ಮುಸುಕುಧಾರಿಗಳು ಒಳಗೆ ಪ್ರವೇಶಿಸಿ ಕಾವಲುಗಾರ ರುದ್ರಗೌಡರ ಮೇಲೆ ರಾಡಿನಿಂದ ಹಲ್ಲೆ ನಡೆಸಿ ಒಳ ನುಗ್ಗಿದ್ದಾರೆ. ಅವರು ಸಿಬ್ಬಂದಿ ಬಳಿಯಿದ್ದ ಮೂರು ಮೊಬೈಲ್ ಕಿತ್ತುಕೊಂಡು, ಲಾಕರ್ ಬೀಗ ಪಡೆದು ಸುಮಾರು 2 ಲಕ್ಷ ನಗದು ಮತ್ತು ಚಿನ್ನ ಸೇರಿ ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ನಗ-ನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಸುದ್ದಿ ತಿಳಿದು ಐಜಿಪಿ ಮಹ್ಮದ್ ವಜೀರ್ ಅಹ್ಮದ್, ಎಸ್ಪಿ ಅಮೀತ್‌ಸಿಂಗ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.