ದುಡಿಯಲು ಹೋಗಿ ಮಡಿದರು
ಶೇಷಮೂರ್ತಿ ಅವಧಾನಿ
ಕ.ಪ್ರ.ವಾರ್ತೆ ಗುಲ್ಬರ್ಗ ನ. 16
ನೋಟ- 1
ಉಪ್ಪಲದಿನ್ನಿ ತಾಂಡಾದಲ್ಲಿರೋದೇ 27 ಮನೆಗಳು. ಬೆಳಗಾವಿಯಲ್ಲಿ ಮೃತಪಟ್ಟಿರುವವರ ಪೈಕಿ 16 ಮಂದಿ ಇದೇ ತಾಂಡಾವಾಸಿಗಳು. ಪ್ರತಿ ಮನೆಯಲ್ಲಿಯೂ ಸಾವಿನ ಅಟ್ಟಹಾಸ. ಕರುಳ ಕುಡಿಗಳೊಂದಿಗೆ ಯುವಕರೆಲ್ಲರೂ ಕೆಲಸ ಅರಸಿ ಗುಳೆ ಹೋಗಿದ್ದೇ ಇವರಿಗೆ ಮುಳುವಾಯ್ತು.
ನೋಟ- 2
ಮಾವಿನಕೇರಿ ತಾಂಡಾದಲ್ಲೂ ಗೋಳು. ದುರಂತದಲ್ಲಿ ಮಡಿದವರ ಪೈಕಿ ಇಲ್ಲಿನವರು ಇಬ್ಬರು. ತಾಂಡಾದ ಮಂದಿ ಎಲ್ಲ ಕೆಲಸಕ್ಕೆಂದು ಗುಳೆ ಹೋಗುವಾಗಲೇ ಯಮರಾಯ ಬೇಟೆ ಆಡಿದ್ದು ತಾಂಡಾ ಜನರೇ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ್ ಹೋಬಳಿ ಸುತ್ತಮುತ್ತಲಿನ ಗುಡ್ಡದಲ್ಲಿರುವ ಉಪ್ಪಲದಿನ್ನಿ, ಮಾವಿನಕೇರಿ, ಯರಕೀಹಾಳ್, ದುಮಾಲಪೂರ ತಾಂಡಾಗಳಲ್ಲಿ ಶನಿವಾರದ ಬೆಳಗು ಸಾವಿನ ಸುದ್ದಿಯೊಂದಿಗೆ ತಳಕು ಹಾಕಿಕೊಂಡಿತ್ತು.
ಮಹಾರಾಷ್ಟ್ರದ ಸಾವಂತವಾಡಿಯಲ್ಲಿರುವ ಕಲ್ಲು ಗಣಿಗಾರಿಕೆಗೆ ಗುತ್ತಿಗೆದಾರನ ಅಣತಿಯಂತೆ ಶುಕ್ರವಾರವೇ ಹೊರಟಿದ್ದರು. ರಾತ್ರಿ ಊಟ ಪೂರೈಸಿ ಬರೋಬ್ಬರಿ 9 ಕ್ಕೆ ಕ್ಯಾಂಟರ್ ವಾಹನ (ಸರಕು ಸಾಗಣೆ ವಾಹನ) ಹತ್ತಿ ಕೈತುಂಬಾ ಕೆಲಸದ ಕನಸು ಕಂಡು ನಸು ನಿದ್ರಿಗೆ ಜಾರಿದವರು ಶನಿವಾರದ ಸೂರ್ಯೋದವನ್ನೇ ನೋಡಲಿಲ್ಲ.
ತಾಂಡಾದಲ್ಲಿ ಸ್ಮಶಾನ ಮೌನ: ಉಪ್ಪಲದಿನ್ನಿ ತಾಂಡಾದಲ್ಲಂತೂ ಸ್ಮಶಾನ ಮೌನ. ಇಲ್ಲಿರುವ 27 ಮನೆಗಳಲ್ಲಿ 7 ಕುಟುಂಬದವರು ಮೃತಪಟ್ಟಿದ್ದಾರೆ. ಕೆಲಸಕ್ಕೆಂದು ಹೋದವರು ಹೆಣವಾಗಿರುವ ಸುದ್ದಿ ನಸುಕಿನಲ್ಲೇ ತಾಂಡಾ ತಲುಪುತ್ತಿದ್ದಂತೆಯೇ ಮತ್ತೆ ನಾಲ್ಕಾರು ವಾಹನಗಳಲ್ಲಿ ಬಂಧುಗಳು ಬೆಳಗಾವಿ ಸೇರಿದ್ದಾರೆ. ಹೀಗಾಗಿ ತಾಂಡಾ ಪೂರ್ತಿ ಖಾಲಿ.
ಇಲ್ಲಿರುವ ಇಬ್ಬರು ಶಾಲಾ ಶಿಕ್ಷಕರು, ಗ್ರಾಮ ಲೆಕ್ಕಿಗ ಹೊರತುಪಡಿಸಿದರೆ ಊರಲ್ಲಿ ಶನಿವಾರ ಯಾರೂ ಇರಲಿಲ್ಲ. ಕೆಲವು ಮನೆಗಳಲ್ಲಿ ವೃದ್ಧರು, ಮಾನಸಿಕ ಅಸ್ವಸ್ಥರು ಮಾತ್ರ ಉಳಿದುಕೊಂಡಿದ್ದಾರೆ.
ದುಃಖ ಕೋಡಿಯಾಗಿತ್ತು: ಉಪ್ಪಲದಿನ್ನಿಯ ಭಾಗಪ್ಪ ರಾಠೋಡ (ಒಂದೇ ಕುಟುಂಬದ ನಾಲ್ವರ ಸಾವು) ಹಾಗೂ ಗೋಪಿಲಾಲ್ ಚವ್ಹಾಣ್ (ಒಂದು ಕುಟುಂಬದ ಮೂವರ ಸಾವು) ಮನೆಯಲ್ಲಿಯೇ ಹೆಚ್ಚಿನ ಸಾವುನೋವು ಸಂಭವಿಸಿದ್ದರಿಂದ ಈ ಮನೆಗಳಲ್ಲಿ ದುಃಖ ಮಡುವುಗಟ್ಟಿದೆ. ರಾಮಪ್ಪ ಚವ್ಹಾಣ್ ಮನೆಯಲ್ಲಂತೂ ತಂದೆ ತಾಯಿ ಇಬ್ಬರು ಕೆಲಸಕ್ಕೆಂದು ಹೋಗಿ ಹೆಣವಾಗಿದ್ದಾರೆ. ಪಾಲಕರ ನಿರೀಕ್ಷೆಯಲ್ಲಿರುವ 4 ವರ್ಷದ ಶಿಲ್ಪಾ ಪಾಲಕರ ನೋಟ ಹೃದಯವಿದ್ರಾಕವಾಗಿ ಕಂಡಿತು. ಅಂಬರೀಷ್ ಹಾಗೂ ಲಕ್ಷ್ಮೀ ಎಂಬ ವಡ್ಡರ ಸಮುದಾಯದ ನವ ವಿವಾಹಿತ ಜೋಡಿ (ಮದುವೆಯಾಗಿ 4 ತಿಂಗಳು)ಯೂ ದುರಂತದಲ್ಲಿ ಕೊನೆಯುಸಿರೆಳೆದಿದ್ದು, ಇವರ ಮನೆಯಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬರು ಮಾತ್ರ ಬದುಕುಳಿದಿದ್ದಾರೆ.
ನಿರುದ್ಯೋಗ- ಬಡತನ: ಪಕ್ಕದಲ್ಲಿಯೇ ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆ ಇದ್ದರೂ ಉಪ್ಪಲದಿನ್ನಿ ಸೇರಿದಂತೆ 30ಕ್ಕೂ ಹೆಚ್ಚು ತಾಂಡಾಗಳಲ್ಲಿ ಬಡತನ, ನಿರುದ್ಯೋಗ ಮನೆ ಮಾಡಿದೆ. ಕಾಲುವೆ ಈ ಭಾಗದಲ್ಲಿ ಆಳವಾಗಿ ಸಾಗುವುದರಿಂದ ಮೇಲ್ಮಟ್ಟದಲ್ಲಿರುವ ಹೊಲಗದ್ದೆಗಳೆಲ್ಲ ನೀರಾವರಿ ವಂಚಿತ.
ಅತಿಸಣ್ಣ ರೈತರಾಗಿರುವ ಲಂಬಾಣಿಗರು ಮಳೆಗಾಲದಲ್ಲಿ ಮಾತ್ರ ತಾಂಡಾಗಳಲ್ಲಿದ್ದು ದಸರಾ- ದೀಪಾವಳಿ ನಂತರ ಕೆಲಸ ಅರಸಿ ಗುಳೆ ಹೋಗುವುದು ಇಲ್ಲಿನ ವಾರ್ಷಿಕ ನೋಟ. ಗುಳೆ ಹೋದರೆ 6 ತಿಂಗಳ ನಂತರವೇ ಮರಳುವುದು. ಕಬ್ಬು ಕತ್ತರಿಸುವ ಕೆಲಸಕ್ಕೆ ಹೊರಟವರು ಯುಗಾದಿಗೆ ಮನೆಗೆ ಮರಳುವ ಸಂಕಲ್ಪ ಮಾಡಿದ್ದರಂತೆ.
ಗುತ್ತಿಗೆದಾರನ ಕೈಗೊಂಬೆ ಇವರು: ಕಲ್ಲು ಗಣಿಗಾರಿಕೆಗೆ ಕಾರ್ಮಿಕರನ್ನು ಪಡೆಯಲು ಮಹಾರಾಷ್ಟ್ರದ ಗಣಿ ಮಾಲೀಕರು ಸ್ಥಳೀಯ ಗುತ್ತಿಗೆದಾರರ ನೆರವು ಪಡೆಯುತ್ತಾರೆ. ಅಂಥ ಗುತ್ತಿಗೆದಾರರು ತಾಂಡಾಗಳಲ್ಲಿ ಕೆಲವರನ್ನು ಗುರುತಿಸುತ್ತಾರೆ. ಅವರ ನೆರವಿನಿಂದ ಕಾರ್ಮಿಕ ಕುಟುಂಬಗಳನ್ನು ಗುಳೆಗೆ ಸಿದ್ಧಪಡಿಸುತ್ತಾರೆ.
ಉಪ್ಪಲದಿನ್ನಿ ಸೇರಿದಂತೆ ಸುರಪುರದ ತಾಂಡಾಗಳಲ್ಲಿಯೂ ಈ ನೋಟ ಸಾಮಾನ್ಯ. ಸಾವಂತವಾಡಿಯ ಗುತ್ತಿಗೆದಾರ ಮಗ್ಧು ಎಂಬಾತ ಇವರನ್ನೆಲ್ಲ ಕಬ್ಬು ಕಟಾವಿಗೆ ಕರೆದೊಯ್ಯುತ್ತಿದ್ದರು. ಸಾಗಣೆ ವೆಚ್ಚ ತಗ್ಗಿಸಲು ಅಗ್ಗದ ಸಾಗಣೆ ಮಾರ್ಗ ಅನುಸರಿಸಿದ್ದೇ ಇಂಥದ್ದೊಂದು ಭೀಕರ ದುರಂತ ಸಂಭವಿಸಲು ಕಾರಣ ಎಂಬುದು ಕಟು ವಾಸ್ತವ. ನಿರುದ್ಯೋಗ, ಬಡತನದಿಂದ ಉದ್ಯೋಗ ಅರಸಿ ಹೊರಟವರು ಈ ರೀತಿ ಯಮನ ಪಾದ ಸೇರಿದ್ದು ನಿಜಕ್ಕೂ ದುರಂತ. ಇನ್ನಾದರೂ ಯಾದಗಿರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸುರಪುರ ಭಾಗದ ತಾಂಡಾಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುವುದೆ ಕಾದು ನೋಡಬೇಕು.
ಮುಖ್ಯ ವೈದ್ಯಾಧಿಕಾರಿ ವಿರುದ್ಧ ಸಚಿವ ಹುಕ್ಕೇರಿ ಗರಂ
ಬೈಲಹೊಂಗಲ: ರಸ್ತೆ ಅಪಘಾತ ಸಂಭವಿಸಿದ ಸುದ್ದಿ ದೃಶ್ಯ ಮಾಧ್ಯಮದಲ್ಲಿ ನೋಡಿ ಚಿಕ್ಕೋಡಿಯಿಂದ ಬೆಳಗ್ಗೆ 7 ಗಂಟೆಗೆ ದೌಡಾಯಿಸಿ ಇಲ್ಲಿಗೆ ಬಂದಿದ್ದೇನೆ. ಆದರೆ ಇಲ್ಲೇ ಇರುವ ಮುಖ್ಯ ವೈದ್ಯಾಧಿಕಾರಿ ಇನ್ನೂ ಬಂದಿಲ್ಲವೇ? ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಚಿವ ಪ್ರಕಾಶ ಹುಕ್ಕೇರಿ ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಜಿ. ಹುಬ್ಬಳ್ಳಿಯವರ ಕರ್ತವ್ಯಲೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ಬೆಳಗ್ಗೆ 11ಕ್ಕೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪರಿಸ್ಥಿತಿ ವಿಚಾರಿಸಿ, ಅವರಿಗೆಲ್ಲ ಸಮಾಧಾನ ಹೇಳಿದ ನಂತರ ಸ್ಥಳದಲ್ಲಿದ್ದ ವೈದ್ಯರನ್ನು ಮುಖ್ಯ ವೈದ್ಯಾಧಿಕಾರಿಗಳು ಎಲ್ಲಿ ಎಂದು ವಿಚಾರಿಸಿದಾಗ ಅವರು ಈ ವರೆಗೆ ಆಸ್ಪತ್ರೆಗೆ ಬಂದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಸಚಿವರು ಕೆಂಡಮಂಡಲವಾದರು. 'ಮುಖ್ಯ ವೈದ್ಯಾಧಿಕಾರಿಗೆ ಮಾನವೀಯತೆ ಎಂಬುದು ಇದೆಯೋ ಇಲ್ಲವೋ? ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಇಷ್ಟೊತ್ತಾದರು ಇನ್ನು ಮುಖ್ಯ ವೈದ್ಯಾಧಿಕಾರಿ ಬಂದಿಲ್ಲ ಎಂದರೆ ಇದರ ಅರ್ಥ ಏನು?' ಎಂದು ತರಾಟೆಗೆ ತೆಗೆದುಕೊಂಡು ಅವರನ್ನು ಕೂಡಲೇ ಕರೆಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಿ, ಊಟೋಪಚಾರ ನೀಡುವಂತೆ ತಾಕೀತು ಮಾಡಿದರು.