ಕಾನೂನು ಗೌರವಿಸಿ, ಅದು ರಕ್ಷಿಸುತ್ತದೆ
ಶಹಾಪುರ: 1949 ನವೆಂಬರ್ 26ರಂದು ಸಂವಿಧಾನದ ಆಡಳಿತದ ಮಾರ್ಗಸೂಚಿಯ ದಿನವನ್ನಾಗಿ ರೂಪಿಸಿದ ಪವಿತ್ರ ದಿನವಾಗಿದೆ. ಯಾರು ಕಾನೂನನ್ನು ಗೌರವಿಸುತ್ತಾರೋ ಅವರಿಗೆ ಕಾನೂನು ಸದಾ ರಕ್ಷಾಕವಚವಾಗಿ ನಿಲ್ಲುತ್ತದೆ. ದೇಶದಲ್ಲಿ ಕಾನೂನು ಆಡಳಿತವಾಗಿದ್ದರಿಂದ ಎಲ್ಲರೂ ಕಡ್ಡಾಯವಾಗಿ ಕಾನೂನು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದು ನ್ಯಾಯಾಧೀಶ ವೈ.ಕೆ. ಬೇನಾಳ ಹೇಳಿದರು.
ಪಟ್ಟಣದ ಕೋರ್ಟ್ ಆವಣರಣದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಾಜ್ಯ ಮೊಳಕೆಯಲ್ಲೇ ಚಿವುಟಿ: ಹಳ್ಳಿಗಳಲ್ಲಿ ಉದ್ಬವಿಸುವ ಸಣ್ಣಪುಟ್ಟ ವ್ಯಾಜ್ಯವನ್ನು ಮೊಳಕೆಯಲ್ಲಿ ಚಿವುಟಿ ಹಾಕಬೇಕು. ದ್ವೇಷ ಹಾಗೂ ಅಸೂಯೆಯಿಂದ ಮಾನಸಿಕ ನೆಮ್ಮದಿ ಹಾಳಾಗು. ಲೋಕ ಅದಾಲತ್ ಮೂಲಕ ಈಚೆಗೆ 121 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆ ಹರಿಸಲಾಯಿತು. ರಾಜಿ ಸಂಧಾನದಿಂದ ವ್ಯಾಜ್ಯ ಅಳಿದು ನೆಮ್ಮದಿ ಉಳಿಯುತ್ತದೆ. ವ್ಯಾಜ್ಯರಹಿತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ಶೋಷಣೆ: ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಹೊನ್ನಾರಡ್ಡಿ ವಹಿಸಿ ಮಾತನಾಡಿ, ಕಾನೂನು ಅರಿವಿನ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಶೋಷಣೆ ನಡೆಯುತ್ತದೆ. ಚೆನ್ನಾಗಿ ಕಾನೂನು ಅರಿತುಕೊಂಡರೆ ನಮಗೆ ಪ್ರಶ್ನಿಸುವ ಹಾಗೂ ಪ್ರತಿಭಟಿಸುವ ಶಕ್ತಿ ಬರುತ್ತದೆ ಎಂದರು.
ಹಿರಿಯ ವಕೀಲರಾದ ಭಾಸ್ಕರರಾವ್ ಮುಡಬೂಳ ಆಸ್ತಿಯ ಹಕ್ಕು ಹಾಗೂ ವಕೀಲೆ ಬಸಮ್ಮ ರಾಂಪೂರ ಮಹಿಳೆಯರ ಹಕ್ಕು ಹಾಗೂ ಸಂರಕ್ಷಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಎಂ.ಎನ್. ಪೂಜಾರಿ, ಸ್ವಾಗತ ಅಮರೇಶ ದೇಸಾಯಿ, ಭೀಮಣ್ಣಗೌಡ ವಿಶ್ವನಾಥ ಫಿರಂಗಿ ಇದ್ದರು.