ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೊಗರಿ ರೈತರ ಮೂಗಿಗೆ ಪರಿಹಾರ ತುಪ್ಪ!

Srinivasa Murthy VN
Updated On : 27 Nov 2013, 10:31 am

ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಅತಿವೃಷ್ಟಿಯಿಂದ ಬಹುಕೋಟಿ ರುಪಾಯಿ ಹಾನಿಗೊಳಗಾದ ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಯ ತೊಗರಿ ರೈತರಿಗೆ ಸರ್ಕಾರ ಬಿಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಂಡಿದೆ.
ಉಭಯ ಜಿಲ್ಲೆಗಳಲ್ಲಿ ಬಿತ್ತನೆಯಾಗಿರುವ 4.25 ಲಕ್ಷ ಹೆಕ್ಟೇರ್ (ಗುಲ್ಬರ್ಗ ಜಿಲ್ಲೆಯಲ್ಲಿ 3.67 ಲಕ್ಷ ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 59 ಸಾವಿರ ಹೆಕ್ಟೇರ್) ತೊಗರಿ ಪೈಕಿ ಅತಿವೃಷ್ಟಿಗೆ 17,304 ಹೆಕ್ಟೇರ್ ತೊಗರಿ ಹಾನಿಗೀಡಾಗಿದೆ. ಕಂದಾಯ ಹಾಗೂ ಕೃಷಿ ಇಲಾಖೆ ನಡೆಸಿರುವ ಜಂಟಿ ಸಮೀಕ್ಷೆಯಿಂದಲೇ ಈ ಸಂಗತಿ ಬಯಲಾಗಿದ್ದರೂ ಸೂಕ್ತ ಪರಿಹಾರ ನೀಡಿಲ್ಲ.
ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ಪ್ರಕಾರ ಗುಲ್ಬರ್ಗ ಜಿಲ್ಲೆಯಲ್ಲಿ 15,735 ಹೆಕ್ಟೇರ್ ಮತ್ತು ಯಾದಗಿರಿಯಲ್ಲಿ 1,569 ಹೆಕ್ಟೇರ್ ತೊಗರಿ ಬಿತ್ತಿದ ಹೊಲದಲ್ಲಿ ಅಧಿಕ ನೀರು ನಿಂತು ಹಾನಿಯಾಗಿದೆ. ಪ್ರತಿ ಎಕರೆಗೆ 4 ರಿಂದ 6 ಕ್ವಿಂಟಲ್ ತೊಗರಿ ಉತ್ಪಾದಿಸುವ ರೈತರು ನೀರು ನಿಂತು ಬೆಳೆಯೇ ಹಾಳಾಗಿದ್ದರಿಂದ ಕಂಗಾಲಾಗಿದ್ದಾರೆ. ಸರ್ಕಾರದ ಕ್ರಮದಿಂದ ತೊಗರಿ ರೈತರಿಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಅಫಜಲ್ಪೂರ (50,450 ಹೆಕ್ಟೇರ್), ಚಿಂಚೋಳಿ (48,543 ಹೆಕ್ಟೇರ್) ತಾಲೂಕುಗಳಲ್ಲಿ ತೊಗರಿ ಪರವಾಗಿಲ್ಲ ಎಂಬಂತಿದೆ. ಆದರೆ ಆಳಂದ, ಚಿತ್ತಾಪುರ, ಗುಲ್ಬರ್ಗ, ಜೇವರ್ಗಿ, ಸೇಡಂ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಯಾದಗಿರಿ ತಾಲೂಕುಗಳಲ್ಲಿ ಅಪಾರ ಹಾನಿಗೊಳಗಾಗಿದೆ.
ಬಿಡಿಗಾಸು ಪರಿಹಾರ: 2013-14ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಆದ ಮಳೆ ಹಾನಿ, ಬೆಳೆ ನಷ್ಟದ ರೈತರಿಗೆ 2012-13ರಲ್ಲಿ ಎನ್‌ಡಿಆರ್‌ಎಫ್ (ರಾಷ್ಟ್ರೀಯ ಬರ ಪರಿಹಾರ ನಿಧಿ) ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಮಿಕ್ಕಿರುವ ಹಣದಲ್ಲೇ ಪರಿಹಾರ ನೀಡಲಾಗಿದೆ. ಗುಲ್ಬರ್ಗ ಜಿಲ್ಲೆಗೆ 11.12 ಲಕ್ಷ ಹಾಗೂ ಯಾದಗಿರಿಗೆ 13.07 ಲಕ್ಷ ಪರಿಹಾರ ನೀಡಲಾಗಿದೆ.
ಆಳಂದದಲ್ಲಿ 10 ಲಕ್ಷ ಪರಿಹಾರ ವಿತರಣೆಯಾದರೆ, ಗುಲ್ಬರ್ಗದಲ್ಲಿ 1.12 ಲಕ್ಷ, ಶಹಾಪುರದಲ್ಲಿ 16 ಸಾವಿರ, ಸುರಪುರದಲ್ಲಿ 10. 26 ಲಕ್ಷ, ಯಾದಗಿರಿಯಲ್ಲಿ 2.63 ಲಕ್ಷ ಪರಿಹಾರ ಮಾತ್ರ ವಿತರಣೆಯಾಗಿದೆ. ಇನ್ನೂ ಅನೇಕ ರೈತರಿಗೆ ಚಿಲ್ಲರೆ ಪರಿಹಾರವೂ ದೊರೆತಿಲ್ಲ. ಕ್ವಿಂಟಲ್ ತೊಗರಿಗೆ 6,500 ಬೆಲೆ ಇರುವಂತೆ ಸರ್ಕಾರ ನೋಡಿಕೊಳ್ಳಬೇಕೆಂದು ರೈತರು ಆಗ್ರಹಿಸುತ್ತಿರುವಾಗ ಸರ್ಕಾರ ಹಾನಿಗೊಳಗಾದ ತೊಗರಿ ರೈತರಿಗೆ ಚಿಲ್ಲರೆ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕಿದೆ.
 
ಗುಲ್ಬರ್ಗ ಜಿಲ್ಲೆ ತೊಗರಿ ಬಿತ್ತನೆ ವಿವರ
ಒಟ್ಟು ಬಿತ್ತನೆ- 3,67,578 ಹೆಕ್ಟೇರ್
ಅಫಜಲ್ಪೂರ- 50,450 ಹೆಕ್ಟೇರ್
ಚಿಂಚೋಳಿ- 48,543 ಹೆಕ್ಟೇರ್
ಆಳಂದ- 43,980 ಹೆಕ್ಟೇರ್
ಚಿತ್ತಾಪುರ- 55,703 ಹೆಕ್ಟೇರ್
ಗುಲ್ಬರ್ಗ- 67,450 ಹೆಕ್ಟೇರ್
ಜೇವರ್ಗಿ- 61,333 ಹೆಕ್ಟೇರ್
ಸೇಡಂ- 40,119 ಹೆಕ್ಟೇರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement