ಭಾರೀ ಮಳೆಗೆ ಬತ್ತದ ಬೆಳೆ ಹಾನಿ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಪಟ್ಟಣದ ಸುತ್ತಲೂ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬತ್ತದ ಬೆಳೆಗೆ ಹಾನಿಯಾಗಿದೆ. ಸಿರವಾರ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ರೈತರು ಈಚೆಗಷ್ಟೇ ಕಟಾವು ಮಾಡಿ ರಾಶಿ ಮಾಡಲು ಕೂಡಿಟ್ಟಿದ್ದ ಬತ್ತದ ಅಪಾರ ಬೆಳೆ ಮಳೆಯ ನೀರಿಗೆ ಸಿಲುಕಿ ಹಾನಿಗೀಡಾಗಿದ್ದು, ರೈತರು ಆತಂಕಕ್ಕೆ ಸಿಲುಕುವಂತಾಗಿದೆ. ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ಸಮರ್ಪಕ ನೀರು ದೊರೆಯದೇ ತಡವಾಗಿ ರೈತರು ಬತ್ತ ಬೆಳೆದಿದ್ದರು. ಆದರೆ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ರೈತರು ಕಟಾವು ಮಾಡಿ ಗದ್ದೆಗಳಲ್ಲಿ ರಾಶಿ ಮಾಡಲು ಸಜ್ಜಾಗಿರಿಸಿದ್ದ ಬತ್ತದ ಬೆಳೆಯು ಮಳೆ ನೀರಿಗೆ ಸಿಲುಕಿ ಹಾನಿಗೀಡಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಲುಮತದವರು ಸಂಘಟಿತರಾಗಲಿ
ಗುಲ್ಬರ್ಗ: ಹಾಲುಮತದ ಸಂಸ್ಕ ೃತಿ ವಿಶೇಷವಾದದ್ದು, ಅದನ್ನು ಮುಂದಿನ ಪೀಳಿಗೆಯವರೆಗೆ ಮುಂದುವರಿಸಿಕೊಂಡು ಹೋಗಬೇಕು. ಸಮಾಜದ ಜನರು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಹೇಳಿದರು. ನಗರದ ಬ್ರಹ್ಮಪುರ ಧನಗರಗಲ್ಲಿಯ ಕೋರಿಮಠದ ರೇವಣಸಿದ್ದೇಶ್ವರ ತರುಣ ಸಂಘ ಕೋರಿಮಠ ಏರ್ಪಡಿಸಿದ್ದ ದಾಸ ಶ್ರೇಷ್ಠಭಕ್ತ ಕನಕದಾಸರ 526ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಹಾಲುಮತ ಸಮಾಜ ಕರ್ನಾಟಕದಲ್ಲಿ 3ನೇ ಅತಿ ದೊಡ್ಡ ಸಮಾಜವಾಗಿದೆ. ಸಮಾಜದವರು ಶಿಕ್ಷಣ ಪಡೆದು ಮುಂದೆ ಬರಬೇಕು. ಹೆಚ್ಚೆಚ್ಚು ರಾಜಕೀಯ ಅವಕಾಶಗಳು ಸಮಾಜಕ್ಕೆ ದೊರೆಯುವಂತಾಗಲು ಎಲ್ಲರು ಸಂಘಟನೆಯಿಂದ ಇರಬೇಕು ಎಂದರು. ಶಾಸಕ ದತ್ತಾತ್ರೇಯ ಪಾಟೀಲ್ ರೇವುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಿಂಗರಾಜ ಬಿರಾದಾರ, ದೀಲಿಪ ಆರ್. ಪಾಟೀಲ್, ನಿಂಗಣ್ಣ ಪೂಜಾರಿ ಕುಸನೂರ, ಶಿವಾನಂದ ಪಾಟೀಲ್ ಅಷ್ಟಗಿ, ಅಪ್ಪು ಕಣಕಿ, ಹಣಮಂತ ಕುಸನೂರ, ಮಹೇಶ ಧರಿ, ಗಿರೆಪ್ಪ ಕಟ್ಟಿಮನಿ, ಶಂಕರ ಮೇಳಕುಂದಿ ಇತರರು ಇದ್ದರು.
ದರೋಡೆಗೆ ಸಂಚು: ಒಬ್ಬನ ಬಂಧನ
ಗುಲ್ಬರ್ಗ: ನಗರದ ಎಂಎಸ್ಕೆ ಮಿಲ್ ರಸ್ತೆಯ ಮಹಿಳಾ ಐಟಿಐ ಕಾಲೇಜು ಬಳಿಯ ಜಾಲಿ ಕಂಟಿಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪಿಐ ಬಿ.ಬಿ. ಭಜಂತ್ರಿ ಹಾಗೂ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಂಚಶೀಲ ನಗರದ ಸಿದ್ದು ತಂದೆ ಭೈಲಪ್ಪ ತಳವಾರ ಎಂಬಾತನನ್ನು ಬಂಧಿಸಿ ಖಾರದಪುಡಿ, ಹಗ್ಗ, ರಾಡ್ನ್ನು ಜಪ್ತಿ ಮಾಡಿದ್ದಾರೆ. ಖಾಜಾ ಪಟೇಲ್ ಮತ್ತು ಖಾಸಿಂ ಅಲಿ ಎಂಬುವರು ಪರಾರಿಯಾಗಿದ್ದು, ಅವರ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿ ಶೀಲ ಶಂಕಿಸಿ ಹಲ್ಲೆ
ಗುಲ್ಬರ್ಗ:ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿದ ಪತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ,ಕೊಲೆ ಬೆದರಿಕೆ ಹಾಕಿದ ಘಟನೆ ನಗರದ ಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ. ಸುವರ್ಣ ಎಂಬ ಮಹಿಳೆ ಮೇಲೆ ಪತಿ ಚಂದ್ರಕಾಂತ ಸುತಾರ ಎಂಬಾತನ್ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ
ಗುಲ್ಬರ್ಗ: ತವರು ಮನೆಯಿಂದ 4ಲಕ್ಷ ವರದಕ್ಷಿಣೆ ತರುವಂತೆ ಪತಿ ಪತ್ನಿಗೆ ಕಿರುಕುಳ ನೀಡಿದ ಘಟನೆ ಗುಲ್ಬರ್ಗದಲ್ಲಿ ನಡೆದಿದೆ.
ಫಾತಿಮಾ ಎಂಬ ಮಹಿಳೆಗೆ ಪತಿ ಕಲ್ಲಪ್ಪ ಶಿಂಧೆ, ಮಾವ ನಾಮದೇವ ಶಿಂಧೆ, ಅತ್ತೆ ಶಿವುಬಾಯಿ, ಮೈದುನ ಪಿಂಟು, ನೆಗೆಣಿ ರೇಖಾ ಅವರು ಕಿರುಕುಳ ನೀಡಿದ ಬಗ್ಗೆ ಫಾತಿಮಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.