ಸಿಎಂ ನಿಧಿಯಿಂದ ಪರಿಹಾರ: ಜಾಧವ್ ಭರವಸೆ
ಮೃತ ಬಾಲಕಿಯರ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಮನೆ ಮಂಜೂರು: ಗ್ರಾಪಂ ಅಧ್ಯಕ್ಷ
ಚಿಂಚೋಳಿ: ತಾಲೂಕಿನ ಗಡಿಭಾಗದ ಕುಂಚಾವರಂ ವ್ಯಾಪ್ತಿಯ ಚಿಂದಾನೂರ ತಾಂಡದ ಸಣ್ಣ ನೀರಾವರಿ ಕೆರೆಯಲ್ಲಿ 3 ಬಾಲಕಿಯರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರವನ್ನು ಮಂಜೂರಿಗೊಳಿಸಲಾಗುವುದೆಂದು ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ್ ಸಹೋದರ ರಾಮಚಂದ್ರ ಜಾಧವ್ ಶಾಸಕರ ಪರವಾಗಿ ಭರವಸೆ ನೀಡಿದರು.
ಅವರು ಚಿಂದಾನೂರ ತಾಂಡಕ್ಕೆ ಜಿಲ್ಲಾ ಮತ್ತು ತಾಲೂಕ ಬಂಜಾರ ಸಮಾಜದ ಮುಖಂಡರೊಂದಿಗೆ ಮಂಗಳವಾರ ಸಂಜೆ ಭೇಟಿ ನೀಡಿ ಮೃತಪಟ್ಟಿರುವ ಬಾಲಕಿಯರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದ್ದರಿಂದ ಅವರ ಪರವಾಗಿ ಚಿಂದಾನೂರ ತಾಂಡಕ್ಕೆ ಭೇಟಿ ನೀಡಲಾಗಿದೆ, ಮೃತಪಟ್ಟಿರುವ ರಾಜಶ್ರೀ ನಾರಾಯಣ(10) ಅಶ್ವಿನಿ ಹೀರಾಸಿಂಗ(11) ಕಲ್ಪನಾ ಹೀರಾಸಿಂಗ (10) ಮೂರು ಬಾಲಕಿಯರು ಚಿಂದಾನೂರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರಿಗೆ ಶಿಕ್ಷಣ ಇಲಾಖೆಯಿಂದ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರವನ್ನು ಒದಗಿಸಲಾಗುವುದೆಂದು ರಾಮಚಂದ್ರ ಜಾಧವ್ ಹೇಳಿದರು.
ಶಾದೀಪೂರ ಗ್ರಾಪಂ ಅಧ್ಯಕ್ಷ ತುಳಸೀರಾಮ ಜಾಧವ್ ಮಾತನಾಡಿ, ಮೃತಪಟ್ಟಿರುವ ಎಲ್ಲ 3 ಬಾಲಕಿಯರ ಕುಟುಂಬಗಳಿಗೆ ಸರ್ಕಾರದಿಂದ ಆಶ್ರಯ ಯೋಜನೆ ಅಡಿಯಲ್ಲಿ ಮನೆ ಮಂಜೂರಿ ಮಾಡಲಾಗುವುದೆಂದು ಭರವಸೆ ನೀಡಿದರು.
ತುಳಸೀರಾಮ ಜಾಧವ್ ಮತ್ತು ರಾಮಚಂದ್ರ ಜಾಧವ್ ತಮ್ಮ ವೈಯಕ್ತಿಕ ಪರಿಹಾರವನ್ನು ನೀಡಿದರು. ಜಿಲ್ಲಾ ಬಂಜಾರ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಸುರೇಶ ಜಾಧವ್, ಬಾಬು ಪವಾರ, ತಾಲೂಕ ಬಂಜಾರ ಸಮಾಜ ಅಧ್ಯಕ್ಷ ರಾಮಶೆಟ್ಟಿ ಪವಾರ, ವಿಠಲ್ ಚವ್ಹಾಣ, ಡಾ. ತುಕಾರಾಮ ಪವಾರ, ಪಪಂ ಸದಸ್ಯರಾದ ಅಬ್ದುಲ್ ಬಾಸೀತ್, ಶಿವನಾಗಯ್ಯ ಸ್ವಾಮಿ, ಸುರೇಶ ಬಂಟಾ, ಶಾಮ ಪವಾರ, ತಾಪಂ ಮಾಜಿ ಸದಸ್ಯ ರಾಜೂ ಜಾಧವ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶ ಸಿಂಗ್ ಠಾಕೂರ್ ಇನ್ನಿತರರು ಭೇಟಿ ನೀಡಿದ್ದರು.