ಕೇಂದ್ರೀಯ ವಿವಿ ಕ್ಯಾಂಪಸ್ಸಲ್ಲಿ ಜೀವಜಲ ಕಂಡೀರಾ?
-ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ನ.29
ಕಳೆದ ನಾಲ್ಕು ವರ್ಷಗಳ ಹಿಂದೆಯೇ (2009 ರಲ್ಲಿ) ಗುಲ್ಬರ್ಗದಲ್ಲಿ ಸ್ಥಾಪನೆಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಾತ್ಕಾಲಿಕ ನೆಲೆಯಾಗಿದ್ದ ಜ್ಞಾನಗಂಗೆ(ಗುವಿವಿ) ಕ್ಯಾಂಪಸ್ ತೊರೆದು ಗುಲ್ಬರ್ಗ- ಆಳಂದ ರಸ್ತೆಯಲ್ಲಿ (ನಗರದಿಂದ 25 ಕಿಮೀ ದೂರ) 621 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಹೊಸ ಕ್ಯಾಂಪಸ್ಗೆ ನ.30ರಂದು ಹೆಜ್ಜೆ ಇಡುತ್ತಿದೆ.
ಆದರೆ ನೂತನ ಕ್ಯಾಂಪಸ್ನಲ್ಲಿ ನೀರಿನ ಕೊರತೆ ಎದುರಾಗಿದೆ. ಗುಲ್ಬರ್ಗ- ಆಳಂದ ರಸ್ತೆಯ ಕಡಗಂಚಿ- ಸುಂಟನೂರು ಸೀಮೆಯ 621 ಎಕರೆ ಭೂ ಪ್ರದೇಶದಲ್ಲಿ ಅಂತರ್ಜಲವೇ ಅಂತರ್ಧಾನ.
27 ಬೋರ್ವೆಲ್ನಲ್ಲೂ ಸಿಕ್ಕಿಲ್ಲ ನೀರು: ಕಟ್ಟಡ ನಿರ್ಮಾಣ ಗುತ್ತಿಗೆಯ ಯೂನಿಟಿ ಕಂಪನಿ 27ಕ್ಕೂ ಹೆಚ್ಚು ಕೊಳವೆಬಾವಿ ಕೊರೆದರೂ ನೀರು ಸಿಕ್ಕಿಲ್ಲ. ಅಂತರ್ಜಲಕ್ಕಾಗಿ ಸರ್ಕಾರ ನಡೆಸಿದ ಹುಡುಕಾಟವೂ ಕೈಗೂಡಿಲ್ಲ. ಹೀಗಾಗಿ ಹೊಸ ಕ್ಯಾಂಪಸ್ ಬಾಯಾರಿದೆ. ಆದಾಗ್ಯೂ ಆಡಳಿತಾಂಗವನ್ನು ಕಳೆದೆರಡು ತಿಂಗಳ ಹಿಂದೆಯೇ ಸ್ಥಳಾಂತರಿಸಿರುವ ಕೇಂದ್ರೀಯ ವಿವಿ ಇದೀಗ ನ.30ರಂದು ತನ್ನೆಲ್ಲ ವಿಭಾಗಗಳೊಂದಿಗೆ ಹೊಸ ಕ್ಯಾಂಪಸ್ನತ್ತ ಸಾಗಿದ್ದು ವರ್ಷಾಂತ್ಯಕ್ಕೆ ಪೂರ್ಣ ಸ್ಥಳಾಂತರಗೊಳ್ಳುತ್ತಿದೆ.
ಹೊಸ ಕೋರ್ಸ್ಗಳು, ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಯಿಂದ ತುಂಬಿ ತುಳುಕುತ್ತಿರುವ ಕೇಂದ್ರೀಯ ವಿವಿಗೆ ಹೊಸ ಕ್ಯಾಂಪಸ್ಸಿಗೆ ಹೋಗಲೇಬೇಕಾದ ಅನಿವಾರ್ಯತೆ, ಜೀವಜಲ ಮರೀಚಕೆಯಾದ್ರೂ ಪರವಾಗಿಲ್ಲವೆಂದು ಎಲ್ಲರೂ ಹೊಸ ಕ್ಯಾಂಪಸ್ಸಿಗೆ ಹೊರಟು ನಿಂತಿದ್ದಾರೆ.
ಅಮರ್ಜಾ ಅವಲಂಬನೆ: ಕೇಂದ್ರೀಯ ವಿವಿಗೆ ವಿದ್ಯುತ್, ನೀರು, ಭೂಮಿ ಒದಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ನೂರಾರು ಎಕರೆ ಭೂಮಿಯನ್ನು ರಾಜ್ಯ ಒದಗಿಸಿಕೊಟ್ಟರೂ ಅಲ್ಲಿನ ಅಂತರ್ಜಲವೇ ಅಂತರ್ಧಾನಗೊಂಡರೆ ಮಾಡೋದೇನು, ವಿವಿಗೆಂದು ಭೂಸ್ವಾಧೀನ ಮಾಡಿಕೊಳ್ಳುವಾಗ ಅಂತರ್ಜಲ ವಿಚಾರ ಅಲಕ್ಷಕ್ಕೆ ಒಳಗಾಗಿದ್ದೇ ಎಲ್ಲರನ್ನೂ ಪೇಚಾಡುವಂತೆ ಮಾಡಿದೆ.
ಸರ್ಕಾರ ತನ್ನ ನೀರು ಪೂರೈಕೆಯ ಗೊಂಚಲು ಗ್ರಾಮ ಯೋಜನೆಯಡಿಯಲ್ಲಿ 18 ಕೋಟಿ ವೆಚ್ಚ ಮಾಡಿ ಅಮರ್ಜಾ ಜಲಾಶಯದಿಂದ ಕೊಳವೆಗಳನ್ನೇನೋ ಜೋಡಿಸಿದೆಯಾದರೂ ಬೇಡಿಕೆಯಷ್ಟು ನೀರು ಕೇಂದ್ರೀಯ ವಿವಿಯತ್ತ ಹರಿದು ಬರುವುದು ಅಸಾಧ್ಯ. ಏಕೆಂದರೆ ಈ ಯೋಜನೆಯಡಿಯಲ್ಲಿ ಕೋರಳ್ಳಿ ಗ್ರಾಮಕ್ಕೂ ನೀರು ಪೂರೈಕೆಯಾಗಬೇಕು, ನೀರಾವರಿಗೂ ಅಮರ್ಜಾ ಬೇಕು. ಹೀಗಾಗಿ ಈ ನೀರಿನ ಮೂಲವನ್ನು ಕಾಯಂ ಆಗಿ ಅವಲಂಬಿಸುವಂತಿಲ್ಲ.
800ಕ್ಕೂ ಅಧಿಕ ವಿದ್ಯಾರ್ಥಿಗಳು, ಅಷ್ಟೇ ಸಂಖ್ಯೆಯ ಬೋಧಕ- ಬೋಧಕೇತರ ಸಿಬ್ಬಂದಿಯುಳ್ಳ ವಿವಿಗೆ ನಿತ್ಯ ಏನಿಲ್ಲವೆಂದರೂ 5 ಎಂಜಿಡಿ (ಮಿಲಿಯನ್ ಗ್ಯಾಲನ್ ಪರ್ ಡೇ)ಗೂ ಅಧಿಕ ನೀರು ಬೇಕು. ಈಗಾಗಲೇ ಆಳಂದ ಪಟ್ಟಣಕ್ಕೂ ಜಲಮೂಲವಾಗಿರುವ ಅಮರ್ಜಾ, ಇದೀಗ ಕೇಂದ್ರೀಯ ವಿವಿ, ಕೊರಳ್ಳಿಗೂ ನೀರೊದಗಿಸಬೇಕು, ಜೊತೆಗೇ ನೀರಾವರಿಗೂ ಒದಗಬೇಕು. ಪುಟ್ಟ ಅಮರ್ಜಾ ಕಟ್ಟೆಗೆ ಅಷ್ಟೊಂದು ಸಾಮರ್ಥ್ಯ ಅದೆಲ್ಲಿಂದ ಬಂದೀತು.
621 ಎಕರೆ ಕ್ಯಾಂಪಸ್: ಗುಲ್ಬರ್ಗ- ಆಳಂದ ರಸ್ತೆಯಲ್ಲಿ ಕಡಗಂಚಿ- ಸುಂಟನೂರ್ ಮಧ್ಯೆ 621 ಎಕರೆ ವಿಶಾಲ ಪ್ರದೇಶದಲ್ಲಿ ಕೇಂದ್ರೀಯ ವಿವಿ ಹೊಸ ಕ್ಯಾಂಪಸ್ ತಲೆ ಎತ್ತುತ್ತಿದೆ. ಮೊದಲ ಹಂತದಲ್ಲಿ ಆಡಳಿತಾಂಗ ನಿರ್ಮಾಣ ಪೂರ್ಣಗೊಂಡಿದ್ದೇ ವಿವಿ ಸ್ಥಳಾಂತರಕ್ಕೆ ಕಾರಣ. ತಾತ್ಕಾಲಿಕವಾಗಿ ಅದೆಷ್ಟು ದಿನ ಜ್ಞಾನಗಂಗೆಯಲ್ಲಿರೋದು, ಬೆಳೆಯುತ್ತಿರುವ ವಿವಿಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಕೊಡಬೇಕಲ್ಲ ಎಂದು ಈಗ ಬಂದಿರುವ ಕುಲಪತಿ ಡಾ. ಶ್ರೀನಿವಾಸ ಮೂರ್ತಿ, ಸಮ ಕುಲಪತಿ ಡಾ. ಸುಧೀಂದ್ರರಾವ್ ಡಿಸೆಂಬರ್ ಕೊನೆಯೊಳಗೆ ಜ್ಞಾನಗಂಗೆಯಿ ಂದ ಕೇಂದ್ರೀಯ ವಿವಿ ಹೊಸ ಕ್ಯಾಂಪಸ್ಸಿಗೆ ಕೊಂಡೊಯ್ಯಲು ಸಂಕಲ್ಪಿಸಿದ್ದರು. ಇವರ ಭಗೀರಥ ಯತ್ನಕ್ಕೆ ಭಾಗೀರಥಿ ಸಾಥ್ ನೀಡುತ್ತಿಲ್ಲ.
ವಿವಿ ಸುತ್ತಮುತ್ತ
- ಸ್ಥಾಪನೆ- 2009ನೇ ಇಸ್ವಿ
- ಕಾರ್ಯಾಚರಣೆ- ಗುಲ್ಬರ್ಗ ವಿವಿ ಕಾರ್ಯಸೌಧ 2ನೇ ಮಹಡಿ
- ಹೊಸ ಕ್ಯಾಂಪಸ್- ಗುಲ್ಬರ್ಗ- ಆಳಂದ ರಸ್ತೆ ಕಡಗಂಚಿ ಗ್ರಾಮ
- ಕ್ಯಾಂಪಸ್ ವಿಸ್ತೀರ್ಣ- 621 ಎಕರೆ
- ಕಟ್ಟಡ ಕಾಮಗಾರಿ- 243 ಕೋಟಿ
- ಬಿಡುಗಡೆಯಾದ ಹಣ- 170 ಕೋಟಿ7. ಇದುವರೆಗಿನ ವೆಚ್ಚ- 90 ಕೋಟಿ 8. 2012,
- ಏಪ್ರಿಲ್ನಲ್ಲೇ ಮೊದಲ ಹಂತ ಕಾಮಗಾರಿ ಪೂರ್ಣವಾಗಬೇಕಿತ್ತು.
- ಕಾಮಗಾರಿ ಒಂದೂವರೆ ವರ್ಷ ವಿಳಂಬ
- ಕೊಳವೆಬಾವಿ ಕೊರೆದರೂ ನೀರಿನ ಸೆಲೆ ಅಲ್ಲಿ ಕಂಡಿಲ್ಲ
- ಕಟ್ಟಡ ಕಾಮಗಾರಿ ವಿಳಂಬಕ್ಕೆ ನೀರಿನ ಕೊರತೆಯೂ ಕಾರಣ