ಗಡಿಭಾಗದಲ್ಲಿ ಖಾಸಾ ಶ್ರೀಗಳ ಕೆಲಸ ಅನನ್ಯ: ಬಿದರಿ
ಯಾದಗಿರಿ: ರಾಜ್ಯದ ಗಡಿಭಾಗದಲ್ಲಿರುವ ಯಾದಗಿರಿ ಜಿಲ್ಲೆಗೆ ಗುರುಮಠಕಲ್ ಖಾಸಾ ಮಠದ ಶ್ರೀಗಳಾದ ಶಾಂತವೀರ ಮಹಾಸ್ವಾಮಿ ಮಾಡುತ್ತಿರುವ ಕೆಲಸ ಅನನ್ಯವಾಗಿದೆ ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.
ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದಂಪತಿ ಸಮೇತ ಗುರುಮಠಕಲ್‌ಗೆ ಆಗಮಿಸಿದ ಬಿದರಿ ಖಾಸಾ ಮಠಕ್ಕೆ ತೆರಳಿ ಶ್ರೀಗಳಿಂದ ಗೌರವ ಆಶೀರ್ವಾದ ಪಡೆದು ಮಾತನಾಡಿ, ಮಠದಲ್ಲಿ ನೂರಾರು ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಬದಲಾವಣೆ ಸಂಕೇತ ಎಂದು ತಿಳಿಸಿದರು. ನಾನು ಮೊದಲಿನಿಂದಲು ಯಾನಾಗುಂದಿ ಮಾತಾ ಮಾಣಿಕೇಶ್ವರಿ ದೇವಸ್ಥಾನಕ್ಕೆ ಹಲವಾರು ಬಾರಿ ಬಂದಿದ್ದೇನೆ. ಇಲ್ಲಿನ ಶ್ರೀಗಳ ಕಾರ್ಯ ತಿಳಿದಿದ್ದೇನೆ. ಗಡಿಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಸಿ ಬೆಳೆಸುತ್ತಿರುವುದರಿಂದ ಕನ್ನಡ ಭಾಷೆ ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದು ಹೇಳಿದರು. ಶಾಂತವೀರ ಮಹಾಸ್ವಾಮಿ ಮಾತನಾಡಿ, ಬಿದರಿ ಅವರು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಕೆಲಸ ಮಾಡಿ ನಿವೃತ್ತಿಯಾಗಿ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಅವರ ವಿಚಾರ ಧಾರೆಗಳು ಯುವಕರಿಗೆ ಮಾರ್ಗದರ್ಶನವಾಗಲಿ ಎಂದು ನುಡಿದರು. ಈ ಸಂದರ್ಭದಲ್ಲಿ ಬಸವರೆಡ್ಡಿ ಪಾಟೀಲ್, ಮಲ್ಲೇಶಿ ಕುರಕುಂದಿ, ಪ್ರಕಾಶ ಅಂಗಡಿ, ದೇವು ವರ್ಕನಳ್ಳಿ, ಮಲ್ಲು ಸ್ವಾಮಿ ಮುಂತಾದವರು ಇದ್ದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೌರವ
ಹುಣಸಗಿ: ಗುಲ್ಬರ್ಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಡಾ. ಎಸ್.ಎಂ. ಪಂಡಿತ್ ರಂಗ ಮಂದಿರದಲ್ಲಿ ಇತ್ತೀಚಿಗೆ ನಡೆದ ವಿಭಾಗ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಹುಣಸಗಿಯ ಹಣಮಂತ್ರಾಯ ಗುತ್ತೇದಾರ ಪ್ರಶಸ್ತಿಯನ್ನು ಸ್ವೀಕರಿಸಿದರು. 2012-13ನೇ ಸಾಲಿನಲ್ಲಿ ಪಿಯುಸಿಯಲ್ಲಿ ತಾಲೂಕಿಗೆ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದ್ದ ಮಲ್ಲಿಕಾರ್ಜುನ ಗುತ್ತೇದಾರಗೆ ಪ್ರಾಧಿಕಾರದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮತ್ತು ಶ್ರೀಗಳಾದ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮಿ ರೇವೂರು ಮಠ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಿದರು.