ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸವಣ್ಣ ಬಡವರ ನಿಧಿ

Srinivasa Murthy VN
Updated On : 30 Nov 2013, 10:40 am

ಶಹಾಪುರ: ಬಸವಣ್ಣ ರಾಜ್ಯದ ಸಿರಿ. ಬಸವಣ್ಣ ಬಡವರ ನಿಧಿ. ಆದ್ದರಿಂದಲೇ ಇಪ್ಪತ್ತನೆಯ ಶತಮಾನದವಾದ ಇಂದಿನ ದಿನಗಳಲ್ಲಿಯೂ ಬಸವಣ್ಣ ಸರ್ವರ ಮನಸ್ಸಿನಲ್ಲೂ ಅಪ್ಪ-ಅಣ್ಣನಂತೆ, ನಮ್ಮೆಲ್ಲರ ಹೃದಯದೊಳಗೆ ಬೆರೆತು ಹೋಗಿದ್ದಾರೆ. ಬಸವಣ್ಣ ಕಟ್ಟ ಬಯಸಿದ ಸಮಾಜದಲ್ಲಿ ಸತ್ಯಶುದ್ಧವಾದ ಕಾಯಕ ಮಾಡುವುದು. ಅದರಿಂದ ಬಂದ ಸಂಪತ್ತನ್ನು ಲಿಂಗಕ್ಕೆ ಅರ್ಪಿಸಿ ದಾಸೋಹ ಮಾಡುವ ಪರಿಕಲ್ಪನೆ ವಿಶ್ವದಲ್ಲೇ ವಿನೂತನವಾದುದು ಎಂದು ಲೋಹಿಯಾ ಪ್ರಕಾಶನದ, ಕನಕಶ್ರೀ ಪ್ರಶಸ್ತಿ ಪುರಸ್ಕೃತ ಸಿ. ಚೆನ್ನಬಸವಣ್ಣ ಬಣ್ಣಿಸಿದರು.
ಬಸವಾದಿ ಶರಣರ ಪ್ರಸ್ತುತತೆ: ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲಿಂಗಣ್ಣ ಸತ್ಯಂಪೇಟೆಯವರ ವೇದಿಕೆಯಲ್ಲಿ ನಡೆದ ಬಸವ ಬೆಳಕು -25ರ ಸಭೆಯಲ್ಲಿ ಬಸವಾದಿ ಶರಣರ ಪ್ರಸ್ತುತತೆ ಎಂಬ ವಿಷಯ ಕುರಿತು ಮಾತನಾಡಿದರು. ಭಾರತದ ಬಹುತೇಕ ರಾಜ್ಯಗಳಲ್ಲಿ ಕೌರ್ಯ, ಹಿಂಸೆ, ದಬ್ಬಾಳಿಕೆ, ಶೋಷಣೆ ಹೆಚ್ಚು ಪ್ರಮಾಣದಲ್ಲಿದೆ. 12ನೇ ಶತಮಾನದಲ್ಲಿ ಬಸವಾದಿ ಪ್ರಥಮರು ಮಾಡಿ ಹೋದ ವೈಚಾರಿಕ, ಆಧ್ಯಾತ್ಮಿಕ, ಸಾಮಾಜಿಕ ಬದಲಾವಣೆಯಿಂದ ಅದು ಹೆಚ್ಚು ಪ್ರಮಾಣದಲ್ಲಿ ಇಲ್ಲ. ಹಿಂದೊಮ್ಮೆ ನಾಡಿಗೆ ಅಕ್ಷರ- ಅನ್ನ ದಾಸೋಹವನ್ನು ನೀಡಿದ ಮಠೀಯ ಪರಂಪರೆ ಇಂದು ಕಾರ್ಪೋರೇಟ್ ಸಂಸ್ಥೆಗಳಾಗಿವೆ. ಇಂಥಲ್ಲಿ ಅಭ್ಯಸಿಸಿದ ಯುವಕ- ಯುವತಿಯರು ತಾವು ಬದುಕುತ್ತಿರುವ ಸಮಾಜದ ಬಗ್ಗೆ ಕನಸು ಕುತೂಹಲ ತಲ್ಲಣ ವಿಸ್ಮಯಗಳಿಲ್ಲದೆ ಬದುಕುತ್ತಿದ್ದಾರೆ. ಬಸವಮಾರ್ಗದಲ್ಲಿ ನಡೆಯುವವರಿಗೆ ತಪಸ್ಸು, ಯಜ್ಞ-ಯಾಗ ಮೋಕ್ಷ, ಅರ್ಚನೆ, ಮಂತ್ರ ತಂತ್ರಗಳ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟರು.
ಮೂಲ ಲಿಂಗಾಯಿತರಲ್ಲ: ಜಾತಿ ಸಂಕರಗೊಂಡ ಕುಲ ಲಿಂಗಾಯತ. ಇಲ್ಲಿ ಜಾತಿಗಳು ಇಲ್ಲ. ವೃತ್ತಿಗಳೇ ಜಾತಿಗಳಾದವು. 770 ಅಮರ ಗಣಂಗಳೆಂದು ಕರೆಯುವ ಶರಣರ್ಯಾರೂ ಮೂಲತಃ ಲಿಂಗಾಯತರಾಗಿರಲಿಲ್ಲ. ತಳವರ್ಗದ ದುಡಿಯುವ ಸಂಸ್ಕೃತಿಯಿಂದ ಬಂದ ಜನಗಳಿಗೆಲ್ಲ ಆತ್ಮಸ್ಥೈರ್ಯ ತುಂಬಿ, ವೈಚಾರಿಕವಾಗಿ ಆಲೋಚನೆ ಮಾಡಲು ಹಚ್ಚಿ ವಿಶ್ವವೆ ಬೆರಗಾಗುವಂಥ ಸಾಹಿತ್ಯ ರಚಿಸಲು ಪ್ರೇರೇಪಿಸಿದರು.
ಆದರೆ ಕಾಯಕಗಳೇ ಜಾತಿಯಾದುದೊಂದು ವಿಪರ್ಯಾಸ. 12ನೇ ಶತಮಾನದ ತತ್ವಗಳು 21ಶತಮಾನದ ವೈಜ್ಞಾನಿಕ ದಿನಮಾನಗಳಲ್ಲೂ ಅತ್ಯಂತ ಪ್ರಸ್ತುತವಾಗಿವೆ ಎಂದು ಪ್ರಾಸ್ತಾವಿಕವಾಗಿ ವಿಶ್ವಾರಾಧ್ಯ ಸತ್ಯಂಪೇಟೆ ವಿಷದ ಪಡಿಸಿದರು.
ಹೊಣೆಗಾರಿಕೆ: ಅಕ್ಷರ ಕಲಿತ ಎಲ್ಲರೂ ವಿದ್ಯಾವಂತರಾಗದೆ, ಅಕ್ಷರಗಳನ್ನು ಬಳಸಿಕೊಂಡು ಸುಲಿಗೆ ಮಾಡುವುದನ್ನು ಕಲಿತಿರುವುದರಿಂದ ಇಂದಿನ ಸಮಾಜ ದಿಕ್ಕೆಟ್ಟು ಹೋಗುತ್ತಿದೆ. ಬದ್ಧತೆಯಿಲ್ಲದೆ, ಯೋಜನೆಗಳಿಲ್ಲದೆ, ಕನಸುಗಳಿಲ್ಲದ ವ್ಯಕ್ತಿಗಳಿಂದ ಯಾವುದನ್ನೂ ಸಾಧನೆ ಮಾಡಲಾಗುವುದಿಲ್ಲ. ಸಾಮಾಜಿಕ ಹೊಣೆಗಾರಿಕೆಯಿಂದ ವರ್ತಿಸಿದ್ದರಿಂದಲೇ 12ನೇ ಶತಮಾನದ ಬಸವಾದಿ ಶರಣರು ಜಗತ್ತು ನಿಬ್ಬೆರಗಾಗುವಂಥ ಅನುಭವ ಮಂಟಪ ಎಂಬ ಸಂಸ್ಥೆಯನ್ನು ಕಟ್ಟಿದರು. ವೈಚಾರಿಕ- ವೈಜ್ಞಾನಿಕ ಸಮಾಜವನ್ನು ಕಟ್ಟಿಕೊಟ್ಟ ಶರಣರು ಇಂದಿಗೂ ನಮಗೆಲ್ಲ ಆದರ್ಶಪ್ರಾಯರೆಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಧುರೀಣ ಶರಣಪ್ಪ ಸಲಾದಪುರ ನುಡಿದರು. ಹನುಮಂತಿ ಗುತ್ತೇದಾರ ಸ್ವಾಗತಿಸಿದರು. ಡಾ.ಶರಣಪ್ಪ ಯಾಳಗಿ ವಂದಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು.
ಸಭೆಯಲ್ಲಿ ಡಾ.ಎಸ್.ಆರ್. ಸಿನ್ನೂರ, ಶಿವಯೋಗಪ್ಪ ಮುಡಬೂಳ, ಎ.ವೈ. ಪದ್ಮಾಕರ್, ಅಶೋಕ ಚೌದರಿ, ಮರಿರಾಜ ಶಿಕ್ಷಕರು. ಡಾ.ಚಂದ್ರಶೇಖರ ಸುಬೇದಾರ, ಜ್ಯೋತಿ ಮಣ್ಣೂರ, ಬೂದೆಪ್ಪ ಕೋನಳ್ಳಿ, ಸಂಗಣ್ಣ ದೊರಿ, ಸಿದ್ಧಲಿಂಗಪ್ಪ ಆನೇಗುಂದಿ, ನರಸಣ್ಣ ಜಹಾಗೀರದಾರ, ಸಿದ್ಧರಾಮ ಹೊನ್ಕಲ್, ಹೊನ್ನಾರೆಡ್ಡಿ ವಕೀಲರು, ಮಾನಪ್ಪ ಹೂಗಾರ, ಅಡಿವೆಪ್ಪ ಜಾಕಾ, ಮಲ್ಲಿಕಾರ್ಜುನ ಟೋಕಾಪುರ, ಚೆನ್ನಪ್ಪ ಗುಂಡಾನೋರ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement