'ಮಹಿಳಾ ಪೇದೆ ಅತ್ಯಾಚಾರಿ ಬಂಧಿಸಿ'
ಸಿಂಧನೂರು: ತಾಲೂಕಿನ ಬಳಗಾನೂರು ಠಾಣೆಯ ಮಹಿಳಾ ಪೊಲೀಸ್ ಪೇದೆ ಮೇಲೆ ರಾಯಚೂರು ಸಂಚಾರಿ ಪೊಲೀಸ್ ಠಾಣೆಯ ಅಮರೇಶ ತೋಟದ ಎನ್ನುವ ಪೇದೆ ಅತ್ಯಾಚಾರ ಎಸಗಿದ್ದು ಆರೋಪಿಯ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಸೀತಮ್ಮ ಮನವಿ ಸಲ್ಲಿಸಿದರು.
ಆರೋಪಿಯನ್ನು ತಕ್ಷಣ ಬಂಧಿಸಬೇಕು, ಸೇವೆಯಿಂದ ವಜಾಗೊಳಿಸಬೇಕು. ಅಲ್ಲದೆ ಅವನನ್ನು ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದರು. ಲಿಂಗಸ್ಗೂರು ತಾಲೂಕು ಅಧ್ಯಕ್ಷೆ ಬಸಮ್ಮ ಪಾಟೀಲ, ಸಿಂಧನೂರು ತಾಲೂಕು ಕಾರ್ಯದರ್ಶಿ ಬಸಮ್ಮ, ಸಹಕಾರ್ಯದರ್ಶಿ ವಾಣಿ ರತ್ನಂ ಇದ್ದರು.
ಇಂದು ಬೃಹತ್ ಆಂದೋಲನ
ಸಿಂಧನೂರು: ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ತಾಲೂಕು ಮಟ್ಟದ ಬೃಹತ್ ಆಂದೋಲವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನ.30 ರಂದು ಹಮ್ಮಿಕೊಳ್ಳಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೀತಾ ಬಾಯಿ, ಗಾನಯೋಗಿ ಕಲಾ ಬಳಗದ ಅಧ್ಯಕ್ಷ ಎಸ್.ದೇವೇಂದ್ರಗೌಡ ತಿಳಿಸಿದ್ದಾರೆ.
ಬೆ.9.30ಕ್ಕೆ ಪ್ರವಾಸಿ ಮಂದಿರದಿಂದ ವಾಸವಿ ಕಲ್ಯಾಣ ಮಂಟಪದವರೆಗೆ ಪ್ರಚಾರಾಂದೋಲನ ಜಾಥಾ, ಬೀದಿ ನಾಟಕ ನಡೆಯಲಿದೆ. ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ ಉದ್ಘಾಟಿಸುವರು. ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸುವರು.
ಕನಕ ಜಯಂತಿ
ಮಸ್ಕಿ: ಇಲ್ಲಿನ ಭ್ರಮರಾಂಬಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಡಿ.1 ರಂದು ಕನಕ ಜಯಂತಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ದೊಡ್ಡ ಬಸವರಾಜ ಹೇಳಿದರು.
ಪಟ್ಟಣದ ಕನಕದಾಸ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಯಂತಿ ಅಂಗವಾಗಿ ಕನಕದಾಸ ಸಮುದಾಯ ಭವನದಿಂದ ಭ್ರಮರಾಂಬಾ ದೇವಸ್ಥಾನದವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ತಿಂಥಿಣಿ ಬ್ರಿಜ್ನ ವೀರಗೋಟದ ಕನಕಗುರು ಪೀಠದ ಸಿದ್ದರಾಮಾನಂದ ಪುರಿ ವಹಿಸಲಿದ್ದಾರೆ. ಅಧ್ಯಕ್ಷತೆ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ವಹಿಸುವರು. ಅತಿಥಿಗಳಾಗಿ ಶಾಸಕರಾದ ಪ್ರತಾಪಗೌಡ ಪಾಟೀಲ್, ದೊಡ್ಡನಗೌಡ ಪಾಟೀಲ್ ಇತರರು ಆಗಮಿಸುವರು ಎಂದರು.
ಮುಟ್ಟುಗೋಲಿಗೆ ತಿಕ್ಕಯ್ಯ ಆಗ್ರಹ
ಸಿಂಧನೂರು: ತಾಲೂಕಿನ ಬಳಗಾನೂರು ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೆ ನಂ 288/5 ಎರಡು ಎಕರೆ ಜಮೀನು ಬೇನಾಮಿ ಆಸ್ತಿಯಾಗಿದ್ದು, ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿಕೊಂಡು ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಗ್ರಾಪಂ ಮಾಜಿ ಅಧ್ಯಕ್ಷ ತಿಕ್ಕಯ್ಯ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗ್ರಾಮದಲ್ಲಿ ಅನೇಕ ಭೂಹೀನರು, ನಿವೇಶನ ರಹಿತ ನಿರ್ಗತಿಕ ಕುಟುಂಬಗಳು ಅನೇಕವಿದ್ದು ಅವರಿಗೆ ಆಸರೆಯಾಗುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಕೂಡಲೇ ಭೂಮಿ ಮುಟ್ಟುಗೋಲು ಹಾಕಿಕೊಳ್ಳಲು ಕಾರ್ಯ ಪ್ರವೃತ್ತರಾಗುವಂತೆ ಮನವಿ ಮಾಡಿದರು.
ಇಂದು ಚಾಲನೆ
ಸಿಂಧನೂರು: ಕಾನೂನು ಸಾಕ್ಷರತಾ ರಥ-ಸಂಚಾರಿ ನ್ಯಾಯಾಲಯ, ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟನೆ 30ರಂದು ನಡೆಯಲಿದೆ ಎಂದು ನ್ಯಾಯಾಧೀಶೆ ಬಿ.ಎಸ್.ರಾಯಣ್ಣವರ್ ಹೇಳಿದರು. ಶಂಕರ್ ಟ್ರಸ್ಟ್ ಕಾಲೇಜಿನ ಕಾರ್ಯಕ್ರಮ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ವೈ. ಶಶಿಧರ ಉದ್ಘಾಟಿಸುವರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಅಧ್ಯಕ್ಷತೆ ವಹಿಸುವರು. 2ನೇ ಕಾರ್ಯಕ್ರಮ ಬಡಿಬೇಸ್ನ ಉರ್ದು ಹೈಸ್ಕೂಲ್, 3ನೇ ಕಾರ್ಯಕ್ರಮ, ಡಿ.1ರಂದು ಬೆಳಗ್ಗೆ ಕೃಷ್ಣದೇವರಾಯ ಕಾಲೇಜು, 2ನೇ ಕಾರ್ಯಕ್ರಮ ಜಾಲಿಹಾಳ, 3ನೇ ಕಾರ್ಯಕ್ರಮ ಹೊಸಳ್ಳಿ ಇ.ಜೆ.ದಲ್ಲಲ್ಲಿ ನಡೆಯಲಿವೆ. 2ರಂದು ಬೆಳಗ್ಗೆ ಸೃಷ್ಟಿ ಪಪೂ ಕಾಲೇಜು, 2ನೇ ಕಾರ್ಯಕ್ರಮ ಬಾಲಕಿಯರ ಪಪೂ ಕಾಲೇಜು, 3ನೇ ಕಾರ್ಯಕ್ರಮ ಧುಮತಿಯಲ್ಲಿ ನಡೆಯಲಿವೆ ಎಂದು ವಿವರಿಸಿದರು.
ಆತ್ಮಹತ್ಯೆ: ಸಂತಾಪ
ಜೇವರ್ಗಿ: ಬೆಳಗಾವಿಯ ಸುವರ್ಣಸೌಧದ ಎದುರು ನಡೆಸುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ವಿಷ ಸೇವಿಸಿ ಮಡಿದ ಹುತಾತ್ಮ ರೈತನಿಗೆ ಶಾಂತಿ ಕೋರಿ ಜೇವರ್ಗಿ ತಾಲೂಕು ಕಬ್ಬು ಬೆಳೆಗಾರರ ಸಂಘ ಸಂತಾಪ ಸೂಚಿಸಿತು.
ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು, ಬಾಕಿ ಹಣ ಪಾವತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದನೆ ನೀಡದೆ ಇರುವುದರಿಂದ ಕಬ್ಬು ಬೆಳೆಗಾರರಲ್ಲಿ ಆತಂಕ ಶುರುವಾಗಿ ರೈತ ವಿಠಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಸಂತಾಪ ಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಸಂಘದ ಅಧ್ಯಕ್ಷ ಶರಣಕುಮಾರ್ ಬಿಲ್ಲಾಡ, ಡಿ.ಎಂ ಕುಲಕರ್ಣಿ, ಸುಭಾಷಗೌಡ ಪಾಟೀಲ್, ಚಂದ್ರ ಕಲಶೆಟ್ಟಿ, ಗುರಣ್ಣ ಪಾವಡೆ, ರುದ್ರಗೌಡ, ಬಸವರಾಜ ಸಾಹು, ಉದಯಕುಮಾರ್, ಶ್ರೀನಿವಾಸ ವಕೀಲ್, ಮಲ್ಲಣ್ಣ ಬಸವರಾಜಗೌಡ, ಸಮರ್ಥ ದೇವರಮನಿ, ಶರಣು ಪಾಟೀಲ್, ಸಂಪತ ಪಾಟೀಲ್ ಪಾಲ್ಗೊಂಡಿದ್ದರು.