ಲೋಕಸಭಾ ಚುನಾವಣೆ ಸಿದ್ಧತೆಗೆ ಚಾಲನೆ: ಪ್ರಹ್ಲಾದ್ ಜೋಶಿ
ಗುಲ್ಬರ್ಗ: ಲೋಕಸಭಾ ಚುನಾವಣೆಗೆ ಐದು ತಿಂಗಳು ಮಾತ್ರ ಬಾಕಿ ಇದ್ದು, ರಾಜ್ಯಾದ್ಯಂತ ಲೋಕಸಭಾ ಕ್ಷೇತ್ರಗಳಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಕಾರ್ಯಾಗಾರ ಆಯೋಜಿಸುವ ಮೂಲಕ ಲೋಕಸಭಾ ಚುನಾವಣೆ ಸಿದ್ಧತೆಗೆ ಚಾಲನೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ಪಕ್ಷದ ಗುಲ್ಬರ್ಗ ಲೋಕಸಭಾ ಕ್ಷೇತ್ರ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಡಿಸೆಂಬರ್ನಲ್ಲಿ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಲಾಗುವುದು. ಜನವರಿಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು ಎಂದರು.
ಮೋದಿ ಪ್ರಧಾನಿ ಹುದ್ದೇಗೇರಿಸಲು ಸಂಕಲ್ಪ ತೊಡಿ: ಅಂತಿಮದಲ್ಲಿ ಯಾರೇ ಅಭ್ಯರ್ಥಿಗಳು ಕಣಕ್ಕಿಳಿದರೂ ಅವರ ಗೆಲವಿಗೆ ಎಲ್ಲ ಮುಖಂಡರು, ಕಾರ್ಯಕರ್ತರು ಪ್ರಯತ್ನಿಸಬೇಕು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಗುಜರಾತ್ ಸಿಎಂ ಮೋದಿ ಅವರು ಪ್ರಧಾನಮಂತ್ರಿ ಆಗಬೇಕೆಂಬ ಸಂಕಲ್ಪ ಮಾಡಬೇಕು. ಬಿಜೆಪಿ ಸಾಧನೆ, ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಈಗಿನಿಂದಲೇ ಆರಂಭಿಸಬೇಕು ಎಂದರು.
ಹೈ.ಕ. ಭಾಗದಲ್ಲಿ ಖರ್ಗೆ ಮತ್ತು ಧರ್ಮಸಿಂಗ್ 35 ವರ್ಷ ಆಳ್ವಿಕೆ ನಡೆಸಿದ್ದು, ಅವರು ಹಿಂದುಳಿದ ಭಾಗವೆಂದು ಭಜನೆ ಮಾಡುತ್ತಲೇ ಬಂದಿದ್ದರು. ಆದರೆ, ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಇದೀಗ ಖರ್ಗೆ ಅವರು ರೇಲ್ವೆ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬರುವ ಲೋಕಸಭಾ ಚುನಾವಣೆಗೆ ಬುನಾದಿ ಹಾಕಲು ಹೊರಟಿದ್ದಾರೆಂದು ಆರೋಪಿಸಿದರು.
ಮಾಜಿ ಸಚಿವ ಬೆಳಮಗಿ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ಶಶೀಲ್ ನಮೋಶಿ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಲ್ಲಾಧ್ಯಕ್ಷ ರಾಜಕುಮಾರ್ ತೇಲ್ಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ, ನಗರಾಧ್ಯಕ್ಷ ವಿದ್ಯಾಸಾಗರ ಶಾಬಾದಿ, ಮುಖಂಡರಾದ ವಿದ್ಯಾಸಾಗರ ಕುಲಕರ್ಣಿ, ಶಿವಾನಂದ ಕಲ್ಲೂರ, ರಾಜಗೋಪಾಲರೆಡ್ಡಿ, ಮಹಾಂತಗೌಡ ಪಾಟೀಲ್, ಬಿ.ಜಿ. ಪಾಟೀಲ್, ಮುಕುಂದ ದೇಶಮುಖ, ಎಚ್.ಎ. ರೆಡ್ಡಿ, ಧರ್ಮಣ್ಣ ಇಟಗಾ ಇತರರು ಇದ್ದರು.