ವಿಶ್ವ ಶ್ರೇಷ್ಠ ಪ್ರಜಾಪ್ರಭುತ್ವ ರಚಿಸಿದ ಅಂಬೇಡ್ಕರ್
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಿ.ಜಿ. ಸೆಂಟರ್ ಉಪನ್ಯಾಸಕ ಎಂ.ಬಿ. ಕಟ್ಟಿ
ಗುಲ್ಬರ್ಗ/ಶಹಾಬಾದ್: ಇಂದು ಭಾರತ ವಿಶ್ವದಲ್ಲಿಯೇ ಶ್ರೇಷ್ಠವಾದ ಪ್ರಜಾಪ್ರಭುತ್ವ ಹೊಂದಲು ಸಾಧ್ಯವಾಗಿದ್ದರೆ ಅದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ಎಂದು ರಾಯಚೂರ ಪಿ.ಜಿ. ಸೆಂಟರ್ ಉಪನ್ಯಾಸಕ ಎಂ.ಬಿ.ಕಟ್ಟಿ ಹೇಳಿದರು.
ನಗರದ ಹನುಮಾನ ನಗರದಲ್ಲಿ ಪ್ರಬುದ್ಧ ಚಿಂತನ ವೇದಿಕೆ ವತಿಯಿಂದ ಆಯೋಜಿಸಲಾದ ಭಾರತ ಸಂವಿಧಾನ ಸಮರ್ಪಣೆ ದಿನಾಚಾರಣೆ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಅಂಬೇಡ್ಕರ್ ಅವರೊಬ್ಬ ಮಹಾನ್ ಮಾನವತಾವಾದಿ. ಅವರು ತಮಗೆ ಸಂವಿಧಾನ ರಚಿಸಲು ಅವಕಾಶ ದೊರೆತಾಗ ಅದನ್ನು ತಮಗೆ ನೋವುಂಟು ಮಾಡಿದವರ ವಿರುದ್ಧ ಬಳಸಿಕೊಳ್ಳದೇ ಸಮಾಜದ ಎಲ್ಲ ವರ್ಗಗಳ ಜನರಿಗೂ ಒಳಿತಾಗುವಂತೆ ಸಂವಿಧಾನ ರಚಿಸಿದ ಒಬ್ಬ ಧೀಮಂತ ನಾಯಕ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ರಾಜಾಧ್ಯಕ್ಷ ಬಸವರಾಜ ಮದ್ರಿಕಿ ಮಾತನಾಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಶಿನಾಥ ಜೋಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭೀಮಸೇನೆ ಅಧ್ಯಕ್ಷ ಸತೀಶ ಕಂಬಾನೂರ, ಸಿದ್ರಾಮ ಸರಡಗಿ, ನಗರಸಭೆ ಸದಸ್ಯ ದುರ್ಗಪ್ಪ ಪವಾರ, ಸಂಘ ಮಿತ್ರ ಮಹಿಳಾ ಸಂಘದ ಅಧ್ಯಕ್ಷೆ ಸುಜಾತಾ ಯನಗುಂಟಿಕರ್, ಸಾಹಿತಿ ಮಂಡಲಗಿರಿ ಪ್ರಸನ್ನ, ಉಪನ್ಯಾಸಕ ಪೂಜಾರಿ ಮೇತ್ರೆ, ಜನತಾ ದಳದ ಕಾರ್ಯಾಧ್ಯಕ್ಷ ಲೋಹಿತ ಕಟ್ಟಿ, ಜೆಡಿಎಸ್ ಮುಖಂಡ ಬಸವರಾಜ ಮಯೂರ, ರಾಮಣ್ಣ ಇಬ್ರಾಹಿಂಪುರೆ, ಶಂಕರ ಜಾನಾ ಉಪಸ್ಥಿತರಿದ್ದರು.
ಪ್ರಬುದ್ಧ ಚಿಂತನ ವೇದಿಕೆ ಅಧ್ಯಕ್ಷ ಭರತ್ ಧನ್ನಾ ಅಧ್ಯಕ್ಷತೆ ವಹಿಸಿದ್ದರು. ಬಿ.ಧನ್ನಾ ಕಾರ್ಯಕ್ರಮ ನಿರೂಪಿಸಿದರು. ಮರಲಿಂಗ ಯಾದಗಿರಿ ಕಾವ್ಯ ವಾಚಿಸಿದರು. ಅಲ್ಲಂಪ್ರಭು ಮಸ್ಕಿ ಸ್ವಾಗತಿಸಿ, ಹುಲಿಗೇಶ ನಾಟೀಕಾರ ವಂದಿಸಿದರು.