ಶಾರ್ಟ್ ಸರ್ಕ್ಯೂಟ್: ತಡಕಲದಲ್ಲಿ 3 ಎಕರೆ ಕಬ್ಬು ಭಸ್ಮ
ಗುಲ್ಬರ್ಗ: ಸಂಪೂರ್ಣ ಸಾವಯವ ಗೊಬ್ಬರದಲ್ಲಿ ಬೆಳೆಸಿದ ಕಬ್ಬನ್ನು ಇನ್ನೇನು ಗಾಣಕ್ಕೆ ಹಾಕಿ ಬೆಲ್ಲ ತೆಗೆಯಬೇಕು ಎನ್ನುವಷ್ಟರಲ್ಲೇ ವಿಧಿಯ ಅಟ್ಟಹಾಸ ಮೆರೆದ ಪರಿಣಾಮ ಮೂರು ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ತಾಲೂಕಿನ ತಡಕಲ ಗ್ರಾಮದಲ್ಲಿ ಗುರುವಾರ ನಡೆದಿದೆ.
ಸಾವಯವ ಕೃಷಿ ಪರಿವಾರದ ತಾಲೂಕಾಧ್ಯಕ್ಷ ಬಸವರಾಜ ಪವಾಡಶೆಟ್ಟಿ ಅವರಿಗೆ ಸೇರಿದ ಮೂರು ಎಕರೆ ಸಾಯವಯ ಕಬ್ಬು ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿ ಶೇ.90ರಷ್ಟು ಸುಟ್ಟಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಬ್ಬಿನ ಗದ್ದೆಯಿಂದ ಹಾದಿರುವ ವಿದ್ಯುತ್ ತಂತಿಗೆ ಕಬ್ಬು ಆಳೆತ್ತರಕ್ಕೆ ಮೀರಿ ಬೆಳೆದು ನಿಂತಿತ್ತು. ಆದರೆ ಬೆಳಗಿನ ಹೊತ್ತಿನಲ್ಲಿ ಬೀಸಿದ ಗಾಳಿಗೆ ವಿದ್ಯುತ್ ತಂತಿ ಪರಸ್ಪರ ಸ್ಪರ್ಶಗೊಂಡು ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುವಷ್ಟರಲ್ಲೇ ಕಬ್ಬು ಸುಟ್ಟು ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನೂ 4 ಎಕರೆ ಕಬ್ಬು ರಕ್ಷಣೆ: ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದ ಫಲವಾಗಿ ಹತ್ತಿರದಲ್ಲೇ ಇದ್ದ ಇನ್ನೂ 4 ಎಕರೆ ಕಬ್ಬು ಅನಾಹುತದಿಂದ ಪಾರಾಗಿದೆ. ಸುಟ್ಟು ಹಾಳಾಗಿರುವ ಕಬ್ಬು ಎಕರೆಗೆ ಕನಿಷ್ಠ 100 ಟನ್ ಉತ್ಪಾದನೆಯಾಗುತ್ತಿತ್ತು. ಅಲ್ಲದೆ, ಆರೋಗ್ಯಕರವಾಗಿ ಬೆಲ್ಲ ಉತ್ಪಾದಿಸಲು ಸಿದ್ಧತೆ ಮಾಡಿಕೊಳ್ಳುವ ಮುನ್ನಾ ದಿನವೇ ಈ ಘಟನೆ ಜರುಗಿದೆ ಎಂದು ಬಸವರಾಜ ಪವಾಡಶೆಟ್ಟಿ ಅವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಎನ್ಎಸ್ಎಲ್ ಕಾರ್ಖಾನೆ ಸಹಾಯಕ ಅಧಿಕಾರಿಗಳು, ಆಳಂದ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.
ಮನೆ ಬೀಗ ಮುರಿದು ಕಳವು
ಗುಲ್ಬರ್ಗ: ಮನೆ ಬೀಗ ಮುರಿದು ಲಕ್ಷಾಂತರ ರು. ಮೌಲ್ಯದ ನಗ- ನಾಣ್ಯ ಕಳವು ಮಾಡಿದ ಘಟನೆ ಜೇವರ್ಗಿ ಪಟ್ಟಣದ ವಿದ್ಯಾನಗರದ ಬಡಾವಣೆಯ ಸಜ್ಜನ್ ಕಲ್ಯಾಣ ಮಂಟಪದ ಹತ್ತಿರ ನಡೆದಿದೆ.
ಕಾಶಿಪತಿ ಕಟ್ಟಿಗೆ ಅಡ್ಡ ಎಂಬುವರ ಮನೆ ಬೀಗ ಮುರಿದು ರು. 50 ಸಾವಿರ ನಗದು ಮತ್ತು 25 ಗ್ರಾಂ ಚಿನ್ನ ಸೇರಿ ಲಕ್ಷಾಂತರ ರು. ಮೌಲ್ಯದ ನಗ- ನಾಣ್ಯ ದೋಚಿಕೊಂಡು ಹೋಗಲಾಗಿದೆ. ಸುದ್ದಿ ತಿಳಿದು ಸಿಪಿಐ ಭಾಸು ಚವ್ಹಾಣ, ಪಿಎಸ್ಐ ಸುಧೀರ ಬೆಂಕಿ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಕ್ಕಿ ವ್ಯಕ್ತಿ ಸಾವು
ಗುಲ್ಬರ್ಗ: ಚಲಿಸುತ್ತಿದ್ದ ರೈಲಿಗೆ ಸಿಕ್ಕು ಅಪರಿಚಿತ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಕುಲಾಲಿ- ದುಧನಿ ಸ್ಟೇಷನ್ ಮಧ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿ 38 ವರ್ಷದವನಾಗಿದ್ದು, ಸಾಧಾರಣ ಕಪ್ಪು ಬಣ್ಣ, ದುಂಡು ಮುಖ ಹೊಂದಿದ್ದಾನೆ. ನೀಲಿ ಕಪ್ಪು ಬಣ್ಣದ ಶರ್ಟ್, ಚಾಕ್ಲೆಟ್ ಕಲರ್ ಲುಂಗಿ ಧರಿಸಿದ್ದಾನೆ.
ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ವಾಡಿ ರೇಲ್ವೆ ಠಾಣೆಯಲ್ಲಿ ಸಂಪರ್ಕಿಸುವಂತೆ ಮುಖ್ಯ ಪೇದೆ ಭೀಮಣ್ಣ ಕೋರಿದ್ದಾರೆ.
ಬೆಂಕಿ ಹಚ್ಚಿಕೊಂಡು ಸಾವು
ಗುಲ್ಬರ್ಗ:ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಅಫಜಲ್ಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಮೌಲಾಲಿ ತಂದೆ ಚಂದಪ್ಪ (40) ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ದೇವಲಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆಗೆ ವಿಫಲ ಯತ್ನ
ಗುಲ್ಬರ್ಗ:ಇಬ್ಬರು ದ್ವಿಚಕ್ರ ವಾಹನದ ಮೇಲೆ ಬಂದು ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಹಣ ಸುಲಿಗೆ ಮಾಡಲು ಯತ್ನಿಸಿದ ಘಟನೆ ನಗರದ ತಹಸೀಲ್ದಾರ್ ಕಚೇರಿ ಎದುರುಗಡೆ ನಡೆದಿದೆ. ಗುಲ್ಬರ್ಗದ ಗಣೇಶ ನಗರದ ನಿವಾಸಿ ರಘುರಾಜ ತಂದೆ ನಾಗಪ್ಪ ಮಡಿವಾಳ ಎಂಬಾತ ತಹಸೀಲ್ದಾರ್ ಕಚೇರಿಯಿಂದ ಹೊರಗಡೆ ಬರುತ್ತಿದ್ದಾಗ ಇಬ್ಬರು ದ್ವಿಚಕ್ರ ವಾಹನದ ಮೇಲೆ ಬಂದು ಗಣೇಶಗೆ ಬೈದು ಚಾಕು ಚೋರಿಸಿ ಪ್ಯಾಟಿನ ಜೇಬಿಗೆ ಕೈ ಹಾಕುತ್ತಿದ್ದಾಗ ಆತ ಚಿರಾಡಿದ ಸಂದರ್ಭದಲ್ಲಿ ಹಲವರು ಅಲ್ಲಿ ಧಾವಿಸಿ ಬಂದ ತಕ್ಷಣ ಅವರು ಪರಾರಿಯಾಗಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.