ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಹಕಾರವಿದ್ದರೆ ಕೊರವಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ

Srinivasa Murthy VN
Updated On : 30 Nov 2013, 10:41 am

ರೈತರು, ಕಬ್ಬು ಬೆಳೆಗಾರರ ಮಹಾಸಭೆಯಲ್ಲಿ ಜಿಲ್ಲಾ ಉದ್ಯಮಿ ರಾಜೇಂದ್ರ ಖೂಬಾ ಭರವಸೆ
ಕ.ಪ್ರ.ವಾರ್ತೆ, ಚಿಂಚೋಳಿ, ನ.29
ತಾಲೂಕಿನ ಕಬ್ಬು ಬೆಳೆಗಾರರು ಸಹಕಾರ ನೀಡಿದರೆ ಕೊರವಿ ಗ್ರಾಮದಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉದ್ಯಮಿ ರಾಜೇಂದ್ರ ಖೂಬಾ ರೈತರಿಗೆ ಭರವಸೆ ನೀಡಿದರು.
ಪಟ್ಟಣದ ಮಹಾಂತೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ತಾಲೂಕು ಕಬ್ಬು ಬೆಳೆಗಾರರ ಸಂಘದಿಂದ ಏರ್ಪಡಿಸಿದ್ದ ರೈತರ ಮತ್ತು ಕಬ್ಬು ಬೆಳೆಗಾರರ ಮಹಾಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನೂತನವಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು 4500 ಎಕರೆ ಜಮೀನುದಲ್ಲಿ ಕಬ್ಬು ಬೆಳೆಯಬೇಕು, ರೈತರು ಪ್ರತಿ ಎಕರೆಗೆ 20000 ಶೇರು ಹಣ ನೀಡಿದರೆ ಅದರ ಹಣ ಬಡ್ಡಿ ಸಮೇತವಾಗಿ 3 ವರ್ಷಗಳಲ್ಲಿ ರೈತರಿಗೆ ವಾಪಸ್ ನೀಡಲಾಗುವುದು ಎಂದರು.
ಈಗಾಗಲೇ ಕೊರವಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ 150 ಎಕರೆ ಜಮೀನು ಖರೀದಿಸಲಾಗಿದೆ. ಪ್ರತಿದಿನ 2500 ಟನ್ ಕಬ್ಬು ನುರಿಸುವ ಸಾಮರ್ಥ ಹೊಂದಿರುವ ಯೋಜನೆಯಿದೆ. ಡಿ.15 ರೊಳಗೆ ಹಣ ನೀಡಿದರೆ ಕೇವಲ 8 ತಿಂಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆ ತನ್ನ ಕಾರ್ಯಾರಂಭಗೊಳ್ಳಲಿದೆ. ಒಟ್ಟು ಷೇರು ಹಣ 8 ಕೋಟಿ ಸಂಗ್ರಹಿಸಬೇಕಾಗಿದೆ ಎಂದರು.
ತಾಲೂಕು ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಶಿವಶರಣಪ್ಪ ಜಾಪಟ್ಟಿ ಮಾತನಾಡಿ, ತಾಲೂಕಿನಲ್ಲಿ 18 ಸಣ್ಣ ನೀರಾವರಿ ಕೆರೆಗಳು ಮತ್ತು ಕೆಳೆದಂಡೆ ಮುಲ್ಲಾಮಾರಿ ಯೋಜನೆ, ಚಂದ್ರಂಪಳ್ಳಿ ನೀರಾವರಿ ಯೋಜನೆಗಳಿದ್ದರೂ ಸಹ ನಮ್ಮ ಭಾಗದ ರೈತರ ಆರ್ಥಿಕ ಪರಿಸ್ಥಿತಿ ಇನ್ನು ಸುಧಾರಿಸಿಲ್ಲ. ಜಲ ಸಂಪತ್ತು ಮತ್ತು ಒಳ್ಳೆಯ ಜಮೀನು ಹೊಂದಿದ್ದರೂ ರೈತರು ನೀರಾವರಿಯಲ್ಲಿ ಅತಿ ಹಿಂದುಳಿದಿದ್ದಾರೆ ಎಂದರು.
ಚಿಂಚೋಳಿ ಮತಕ್ಷೇತ್ರವು ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನ ಪಡೆದ ಗಣ್ಯರನ್ನು ಹೊಂದಿದೆ. ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ರೈತರ ಜೀವನಮಟ್ಟ ಸುಧಾರಿಸಿಲ್ಲ. ಈಗ ಸಕ್ಕರೆ ಕಾರ್ಖಾನೆ ತುಂಬಾ ಅವಶ್ಯಕವಿದೆ ಎಂದರು.
ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪಾಟೀಲ್ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆಯ ಪರವಾನಿಗೆ ಅತೀ ಶೀಘ್ರದಲ್ಲಿ ರದ್ದಾಗಲಿದೆ ಎಂದರು.
ಗೌತಮ ಪಾಟೀಲ್, ನಿವೃತ್ತ ಶಿಕ್ಷಕ ಸಂಗಯ್ಯಸ್ವಾಮಿ, ಸಂಗಪ್ಪ ಮಲಿ, ಸೂರ್ಯಕಾಂತ ಹುಲಿ, ಮಧುಸೂಧನರೆಡ್ಡಿ ಕಲ್ಲೂರ, ಅಶೋಕ ಪಾಟೀಲ್, ಮಲ್ಲಿಕಾರ್ಜುನ ಭೂಶೆಟ್ಟಿ, ಬಸವಣ್ಣಪ್ಪ ಕುಡಹಳ್ಳಿ ಮುಂತಾದವರು ಮಾತನಾಡಿದರು. ಸಭೆಯಲ್ಲಿ ತಾಲೂಕಿನ ಕಬ್ಬು ಬೆಳೆಗಾರರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ನಾಗಯ್ಯ ಕೊಟ್ರಕಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ವಿಶ್ವನಾಥ ಬೆನಕಿನ ಸ್ವಾಗತಿಸಿದರು. ನಂದಿಕುಮಾರ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಗೌರಿಶಂಕರ ಉಪ್ಪಿನ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement