ಇಲ್ಲಿ ಎಲ್ಲ ಮಕ್ಕಳ ಕೈಯಲ್ಲಿ ಚೇಳು!
ಯಾದಗಿರಿ: ತಾಲೂಕಿನ ಕಂದಕೂರು ಚೇಳುಗಳ ತವರೆಂದೇ ಪ್ರಸಿದ್ಧಿ. ಏಕೆಂದರೆ ಇಲ್ಲಿ ಚೇಳುಗಳ ಕುರಿತು ಪೂಜ್ಯ ಭಾವನೆಯ ದಂತಕಥೆಗಳಿವೆ. ಗ್ರಾಮಸ್ಥರು ವಿಷಕಾರಿ ಚೇಳುಗಳನ್ನು ದೇವರೆಂದು ಪೂಜಿಸುತ್ತಾರೆ. ಚೇಳುಗಳನ್ನು ಹಾರದಂತೆ ಮಾಲೆ ಧರಿಸುತ್ತಾರೆ. ಇದು ಯಾದಗಿರಿ ತಾಲೂಕಿನ ಕಂದಕೂರು ಒಂದು ಪುಟ್ಟ ಗ್ರಾಮ. ಊರಿನ ಪಕ್ಕದಲ್ಲಿರುವ ಈ ಗುಡ್ಡದಲ್ಲಿರುವ ಚೇಳಮ್ಮ ದೇವಸ್ಥಾನದಲ್ಲಿ ಹಾಗೂ ಗುಡ್ಡದ ಬಹುತೇಕ ಕಡೆ ಕೆಂಪು ಚೇಳು, ಕಬ್ಬಿಣ ಚೇಳು(ಕರಿ ಚೇಳು) ಅನೇಕ ಜಾತಿಯ ಚೇಳು ಸಿಗುತ್ತವೆ. ಪ್ರತಿ ವರ್ಷ ನಾಗರ ಪಂಚಮಿಯಂದೇ ಗುಡ್ಡದ ಚೇಳಮ್ಮ ದೇವಿಯ ಜಾತ್ರೆ. ದೇವಿಗೆ ವಿಶೇಷ ಪೂಜೆಯನ್ನೂ ಮಾಡಿ ಭಕ್ತರು ಚೇಳನ್ನು ಹಿಡಿಯುತ್ತಾರೆ. ಈ ದೇವಿಯ ಜಾತ್ರೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಅನೇಕ ಭಕ್ತಾದಿಗಳು ಬಂದು ಚೇಳು ಹಿಡಿಯುವ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಪಂಚಮಿ ದಿನ ಮಾತ್ರ ಕಚ್ಚುವುದಿಲ್ಲ: ಈ ಊರಿನ ಸುತ್ತ ಹಲವಾರು ಗುಡ್ಡಗಳಿವೆ. ಆದರೆ ಕೊಂಡಮಾಯಿ ಬೆಟ್ಟದಲ್ಲಿ ಮಾತ್ರ ಪ್ರತಿ ಕಲ್ಲಿನ ಸಂಧಿಯಲ್ಲೂ ಚೇಳುಗಳು ವಾಸ ಮಾಡುತ್ತವೆ. ಅವು ಪಂಚಮಿ ದಿನ ಮಾತ್ರ ಕಚ್ಚುವುದಿಲ್ಲ ಎಂಬುದು ಜನರ ನಂಬಿಕೆ. ಉಳಿದ ದಿನ ಕಚ್ಚಿದರೆ ದೇವಿಯ ಹೆಸರನ್ನು ನೆನೆದು ಅಂಗಾರ(ಬೂದಿ) ಹಚ್ಚಿಕೊಂಡರೆ ನೋವು ಮಾಯವಾಗುತ್ತದೆ ಎನ್ನುವ ನಂಬಿಕೆಯಿದೆ.
ಚೇಳುಗಳ ವಿಸ್ಮಯದ ಕುರಿತು ಊರಿನ ಗಣ್ಯರೊಬ್ಬರಿಗೆ ಮಾತನಾಡಿಸಿದಾಗ, ಕೆಲವು ವಿದೇಶಿಯರೂ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಆದರೆ ಈ ವಿಚಿತ್ರ ನಮಗೆ ಇನ್ನೂ ಅರ್ಥವಾಗುತ್ತಿಲ್ಲ ಎಂದರು.