ವೈದ್ಯರ ಹುದ್ದೆಗೆ ಕತ್ತರಿ
ಗುಲ್ಬರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹೊರಡಿಸಿರುವ ಆದೇಶ ಜಿಲ್ಲೆಯ ವಿವಿಧ ಹಂತದ ಆಸ್ಪತ್ರೆಗಳಲ್ಲಿ ಮಂಜೂರಾಗಿರುವ ವೈದ್ಯರ ಹುದ್ದೆಗಳಿಗೆ ಕುತ್ತು ತಂದಿದೆ.
2014 ಜು.18ರಂದು ಹೊರಬಿದ್ದಿರುವ ಆದೇಶದಲ್ಲಿ ಮಂಜೂರಾಗಿರುವ ವೈದ್ಯರ ಹುದ್ದೆಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರ ಸುಮಾರು 150ರಷ್ಟು ಹುದ್ದೆಗಳು ಜಿಲ್ಲೆಯಿಂದ ಕೈತಪ್ಪಿ ಹೋಗಲಿವೆ.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ. ವಿವೇಕಾನಂದ ಟೆಂಗೆ, ಡಾ. ಶರಣಬಸಪ್ಪ ಗಣಜಲಖೇಡ್, ಡಾ. ಪ್ರಕಾಶ ಪುಣ್ಯಶೆಟ್ಟಿ, ಡಾ. ಶಿವಶರಣಪ್ಪ ಇವರು ಇಲಾಖೆಯಿಂದ ಹೊರಬಿದ್ದಿರುವ ಆದೇಶ ಪ್ರತಿಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದು, ಇಂತಹ ಆದೇಶ ಇಲಾಖೆಯಲ್ಲಿ ಗೊಂದಲ ಹೆಚ್ಚಿಸಲಿದೆ ಎಂದರು.
ಸಮರ್ಪಕ ವೈದ್ಯಕೀಯ ಸೇವೆ ದೊರಕದು: ಈಗಾಗಲೇ ವೈದ್ಯರ ಹುದ್ದೆ ಕೊರತೆ ಎದುರಿಸುತ್ತಿರುವ ಗುಲ್ಬರ್ಗದಲ್ಲಂತೂ ಈ ಆದೇಶ ಹೊಸ ಸಮಸ್ಯೆ ಹುಟ್ಟುಹಾಕುವ ಆತಂಕ ವ್ಯಕ್ತಪಡಿಸಿದ ಇವೆರಲ್ಲರೂ, ಬರುವ ದಿನಗಳಲ್ಲಿ 150ರಷ್ಟು ವೈದ್ಯರ ಹುದ್ದೆಗಳು ಕಡಿತಗೊಂಡಲ್ಲಿ ಜಿಲ್ಲೆಯ ಜನತೆಗೆ ವೈದ್ಯರ ಸೇವೆ ದೊರಕುವುದು ಇನ್ನೂ ದುಸ್ತರವಾಗಲಿದೆ ಎಂದರು.
ಇಂತಹ ಆದೇಶಗಳಿಂದ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರಕದು. ಈಗಿರುವ ವೈದ್ಯರೇ ಕಮ್ಮಿ ಇದ್ದಾರೆ ಎಂಬ ಅನಿಸಿಕೆ ಇರುವಾಗ ಮಂಜೂರಾದ ಹುದ್ದೆಗಳನ್ನೇ ಕಡಿತ ಮಾಡಿದರೆ ಹೇಗೆ? ವೈದ್ಯರ ಕೊರತೆ ಇದ್ದಲ್ಲಿ ಹೊಸಬರ ನೇಮಕಕ್ಕೆ ಮುಂದಾಗದೆ ಇರೋ ಹುದ್ದೆಗಳನ್ನೇ ರದ್ದು ಮಾಡುತ್ತಿರುವುದು ಯಾವ ನಾಯ್ಯ? ಇದರಿಂದ ಈಗಿರುವ ವೈದ್ಯರ ಮೇಲೂ ಕೆಲಸದ ಒತ್ತಡ ಹೆಚ್ಚುತ್ತದೆ ಎಂದರು.
ವಿಚಿತ್ರ ಆದೇಶ: ಜು.18ರಂದು ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಪ್ರತಿ ಉಪ ಆರೋಗ್ಯ ಕೇಂದ್ರದಲ್ಲಿ ಒಬ್ಬರೇ ಸಿಬ್ಬಂದಿ ಇರುವಂತಾಗುತ್ತದೆ. ಜೊತೆಗೆ ಪಿಎಚ್ಸಿಗಳಲ್ಲಿ ಒಬ್ಬ ವೈದ್ಯ, 8 ಜನ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಹೆಚ್ಚುಕಮ್ಮಿ ಇಂತಹದ್ದೇ ಸಮಸ್ಯೆ ಉಂಟಾಗಲಿದೆ. ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿರುವ 92 ಮಂಜೂರಾದ ಹುದ್ದೆಗಳಲ್ಲಿ ಆದೇಶದಿಂದ 30ಕ್ಕೂ ಹೆಚ್ಚು ಹುದ್ದೆಗಳು ಕಡಿತಗೊಳ್ಳಲಿವೆ. ವೈದ್ಯಕೀಯ ಸಂಸ್ಥೆಗಳಲ್ಲಿ ಹುದ್ದೆಗಳು ಕಡಿತಗೊಂಡಲ್ಲಿ ಬರುವ ರೋಗಿಗಳಿಗೆ ಸೇವೆ ನೀಡುವುದಾದರೂ ಹೇಗೆ ಎಂದರು.
2009ರ ನಂತರ ಇಂದಿಗೂ ವೈದ್ಯರ ಹುದ್ದೆಗಳು ಭರ್ತಿಯಾಗಿಲ್ಲ. ಸರ್ಕಾರ ನೇಮಕಾತಿಗೆ ಮುಂದಾಗುವುದನ್ನು ಬಿಟ್ಟು ಇಂತಹ ವಿಚಿತ್ರ ಆದೇಶ ಮಾಡುತ್ತ ಇರುವ ಆರೋಗ್ಯ ಸೇವೆಗಳಲ್ಲೂ ಗೊಂದಲ ಮೂಡಿಸುತ್ತಿದೆ ಎಂದು ಸಂಘದ ಪದಾಧಿಕಾರಿಗಳು ನುಡಿದರು.
ಆರೋಗ್ಯ ಇಲಾಖೆಯ ಜು.18ರ ಆದೇಶ ಗೊಂದಲಕಾರಿಯಾಗಿದೆ. ವೈದ್ಯರ ಹುದ್ದೆಗಳನ್ನೇ ರದ್ದುಪಡಿಸುವ ಇಂತಹ ಆದೇಶಗಳಿಂದ ರೋಗಿಗಳು ತುಂಬ ತೊಂದರೆ ಎದುರಿಸುತ್ತಾರೆ. ಇಂತಹ ಆದೇಶದ ವಿರುದ್ಧ ವೈದ್ಯರು ಹೋರಾಟ ನಡೆಸಬೇಕಾಗುತ್ತದೆ. ಆ.15ರೊಳಗಾಗಿ ಈ ಆದೇಶ ಹಿಂದಕ್ಕೆ ಪಡೆಯದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು