ಪರಿಹಾರ ಉದ್ದಂಡಪ್ಪಗೆ ಏಕಿಲ್ಲ?
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.2
ಹುತಾತ್ಮ ಬಂಡೆ ಕುಟುಂಬದ ನೆರವಿಗೆ ನಿಂತಂತೆ ಸರ್ಕಾರ ಗುಂಡಿಗೆ ಎದೆ ಒಡ್ಡಿ ಬದುಕುಳಿದಿರುವ ಎಎಸ್‌ಐ ಉದ್ದಂಡಪ್ಪ ಕುಟುಂಬಕ್ಕೂ ನೆರವು ನೀಡಬೇಕು. ನೆರವು ನೀಡುವಲ್ಲಿ ಪಕ್ಷಪಾತ ನೀತಿ ಯಾಕೆ ಎಂಬ ಪ್ರಶೆಗಳು ಇದೀಗ ಕೇಳಿಬರಲಾರಂಭಿಸಿವೆ.
ಅನೇಕ ಜಾತಿ ಸಂಘಟನೆಗಳು ಬಂಡೆ ಕುಟುಂಬದ ಪರಿಹಾರ ವಿಚಾರದಲ್ಲಿ ಹೋರಾಟ ಮಾಡಿದವು. ಆದರೆ ಬದುಕುಳಿದ ಉದ್ದಂಡಪ್ಪ ವಿಚಾರವನು ಮರೆತೇ ಬಿಟ್ಟಿದ್ದವು. ಆದರೀಗ ಉದ್ದಂಡಪ್ಪ ಅವರ ಪರವಾಗಿ ಮೇದಾರ ಪರಿಶಿಷ್ಟ ಪಂಗಡ ಗಿರಿಜನಾಂಗ ಸಂಘಟನೆಯವರು ಸಿಡಿದೆದ್ದಿದ್ದಾರೆ. ಬಂಡೆ ಕುಟುಂಬದ ಮಾದರಿಯಲ್ಲೇ ಉದ್ದಂಡಪ್ಪ ಕುಟುಂಬಕ್ಕೂ ಪರಿಹಾರ ದೊರಕಬೇಕು, ಇಲ್ಲದೆ ಹೋದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಉಗ್ರ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಮೇದಾರ ಸಂಘಟನೆಯ ನಾಯಕರು ಉದ್ದಂಡಪ್ಪ ಕುಟುಂಬಕ್ಕೆ ಈ ಕೆಳಗಿನ ಪರಿಹಾರಗಳು ತಿಂಗಳೊಳಗೆ ದಕ್ಕಬೇಕು.
1) ಜಿಡಿಎ ಅಥವಾ ಹೌಸಿಂಗ್ ಬೋರ್ಡ್‌ನಲ್ಲಿ ಉದ್ದಂಡಪ್ಪರಿಗೆ ನಿವೇಶನ ನೀಡಬೇಕು
2) ಬಂಡೆ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗಿದೆ. ಇವರ ಕುಟುಂಬಕ್ಕೆ 25 ಲಕ್ಷ ನಗದು ಪರಿಹಾರ ನೀಡಬೇಕು
3) ಜ.8 ರ ಎನ್‌ಕೌಂಟರ್, ನಂತರ ಕುಟುಂಬ ಸದಸ್ಯರು ಹೈದ್ರಾಬಾದ್ ಹೋಗಿ ಬಂದು ಮಾಡಿದ್ದಾರ. ಇದರ ಖರ್ಚು- ವೆಚ್ಚ ಸರ್ಕಾರ ಭರಿಸಬೇಕು. ಶೂಟೌಟ್‌ನಲ್ಲಿ ಉದ್ದಂಡಪ್ಪ ಅಂಗವಿಕಲರಾಗಿದ್ದಾರೆ. 3 ಗಂಡು, 2 ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು.
4) ಉದ್ದಂಡಪ್ಪನವರು ಗುಲ್ಬರ್ಗ ನಗರದ ಯಾವಸ್ಥಳ ಕೇಳುವರೋ ಅಲ್ಲಿ ತಕ್ಷಣಕ್ಕೆ ವರ್ಗಾಯಿಸಬೇಕು.
5) ಬಂಡೆ ಕುಟುಂಬದ ಮಾದರಿಯಲ್ಲೇ ಎಲ್ಲಾ ರೀತಿಯ ಪರಿಹಾರಗಳನು ಉದ್ದಂಡಪ್ಪ ಕುಟುಂಬಕ್ಕೂ ನೀಡಲು ಯಾಕೆ ತೊಂದರೆ
ಸರ್ಕಾರ ತಕ್ಷಣ ಈ ಬೇಡಿಕೆಗಳಿಗೆ ಸ್ಪಂದಿಸಬೇಕು, ಇಲ್ಲದೆ ಹೋದಲ್ಲಿ ಸಂಘಟನೆ 1 ತಿಂಗಳ ನಂತರ ಮತ್ತೆ ಬೀದಿಗೆ ಬರುತ್ತದೆ ಎಂದು ಸಂಘದ ಪರವಾಗಿ ಮನವಿ ಪತ್ರದಲ್ಲಿ ಹಿರಿಯರು ಸಹಿ ಮಾಡಿ ಜಿಲ್ಲಾಡಳಿತಕ್ಕೆ, ಪೊಲೀಸ್ ಇಲಾಖೆಗೆ ಸಲ್ಲಿಸಿದ್ದಾರೆ.