ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂಗನವಾಡಿ ಕೇಂದ್ರಗಳ ಅವ್ಯವಸ್ಥೆಗೆ ಆಕ್ರೋಶ

Srinivasa Murthy VN
Updated On : 5 Feb 2014, 11:39 am

ಚಿಂಚೋಳಿ: ನನ್ನ ಸ್ವಂತ ಗ್ರಾಮದಲ್ಲಿಯೇ ಅಂಗನವಾಡಿ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಗುಂಡಪ್ಪಾ ಮಾಳಗೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯರಾದ ರಾಮರಾವ ಪಾಟೀಲ್, ಮಹೇಶಪ್ಪ ದೊಡ್ಡಿ ಮಾತನಾಡಿ, ತಾಲೂಕಿನ ಮೋಘಾ, ಜಟ್ಟೂರ, ಎಲಕಪಳ್ಳಿ ಅಂಗನವಾಡಿ ಕೇಂದ್ರಗಳ ಬಾಗಿಲು ಮುಚ್ಚಿಯೇ ಇರುತ್ತಿವೆ. ಸಿಡಿಪಿಒ ಮತ್ತು ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರ ಅಸಮಾಧಾನ: ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರದ ಸೌಲಭ್ಯಗಳನ್ನು ಮಕ್ಕಳಿಗೆ ನೀಡುತ್ತಿಲ್ಲ. ಕೆಲವು ಕಡೆ ಅಂಗನವಾಡಿ ಕೇಂದ್ರಗಳ ಬಾಗಿಲು ಮುಚ್ಚಿಯೇ ಇರುತ್ತಿವೆ. ಅಂಗನವಾಡಿ ಕೇಂದ್ರಗಳು ಅವ್ಯವಸ್ಥೆಯಿಂದ ಕೂಡಿವೆ ಎಂದು ತಾಪಂ ಸಾಮಾನ್ಯ ಸಭೆಯಲ್ಲಿ ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಮೀನುಗಾರಿಕೆ ಇಲಾಖೆ ಅಧಿಕಾರಿ ಚಿತಂಬರ ಮಾತನಾಡಿ, ರಾಷ್ಟ್ರೀಯ ಪ್ರೋಟೀನ್ ಪೂರೈಕೆ ಯೋಜನೆ ಅಡಿಯಲ್ಲಿ ಹೆಕ್ಟೇರ್ ಪ್ರದೇಶದಲ್ಲಿ ಮೀನು ಸಾಕಾಣಿಕೆಗೆ ಸಾಮಾನ್ಯ ರೈತರಿಗೆ 1.60 ಲಕ್ಷ ಸಹಾಯಧನ ಮತ್ತು ಪರಿಶಿಷ್ಟ ಜಾತಿ ಪಂಗಡದ ರೈತರಿಗೆ 2 ಲಕ್ಷ ಸಹಾಯ ಧನವನ್ನು ನೀಡಲಾಗುತ್ತಿದೆ. ಒಟ್ಟು ತಾಲೂಕಿನಲ್ಲಿ 2 ಹೆಕ್ಟೇರ್ ಪ್ರದೇಶದಲ್ಲಿ ಮೀನು ಸಾಕಾಣಿಕೆಗೆ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು.
ವಿವಿಧ ಇಲಾಖೆಗಳಿಂದ ಮಾಹಿತಿ: ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಪುಲಾರಿ, ಡಾ. ಧನರಾಜ ಬೊಮ್ಮ, ಕೃಷಿ ಇಲಾಖೆಯ ಪ್ರದೀಪ ದೇಶಪಾಂಡೆ, ಮಧ್ಯಾಹ್ನ ಬಿಸಿಯೂಟ ಯೋಜನಾಧಿಕಾರಿ ಅರ್ಜುನ ದೊಡ್ಡಮನಿ, ರೇಷ್ಮೆ ಇಲಾಖೆ, ಇನ್ನಿತರ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ತಾಪಂ ಸದಸ್ಯರಾದ ಮಲ್ಲಮ್ಮ ಪಾಟೀಲ್, ಬಸಯ್ಯಸ್ವಾಮಿ, ಮಹೇಶ ದೊಡ್ಡಿ, ಸುಜಾತಾ ಕೊಡದೂರ, ಶಶಿಕಲಾ ಪಾಟೀಲ್, ಅನುಸೂಯ ರಾಠೋಡ್, ಸುನೀತಾ ಪಡಶೆಟ್ಟಿ, ಶಿವಮ್ಮ ರಂಗನೂರ, ಮಾಣಿಕಮ್ಮ ಗೋಸುಲ್, ಕಮಲಮ್ಮ ಬೋವಿ, ಉಷಾ ಕಾಬಾ ಇದ್ದರು. ಪ್ರಭಾರಿ ತಾಪಂ ಅಧಿಕಾರಿ ಜಾನಕಿಬಾಯಿ ಬಳವಾಟ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement