ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳಕ್ಕೆ ಪ್ರಯತ್ನ: ಡಾ. ಜಾಧವ
ಚಿಂಚೋಳಿ: ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಮೇಲ್ವಿಚಾರಕಿಯರ ಮತ್ತು ಅಡುಗೆ ಸಹಾಯಕಿಯರ ವೇತನ ಹೆಚ್ಚಳ ಬಗ್ಗೆ ಬರುವ ರಾಜ್ಯ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಶಾಸಕ ಡಾ. ಉಮೇಶ ಜಾಧವ ಭರವಸೆ ನೀಡಿದರು.
ಪಟ್ಟಣದ ಚಂದಾಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ತಾಪಂ ಚಿಂಚೋಳಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಸರ್ಕಾರಿ, ಅನುದಾನಿತ ಶಾಲೆಗಳ ಅಡುಗೆ ಸಿಬ್ಬಂದಿಯವರ 2013- 14ನೇ ಸಾಲಿನ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರ್ಜುನರಾವ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೌಷ್ಟಿಕ ಅಂಶ ಮತ್ತು ಮಕ್ಕಳಲ್ಲಿ ಸ್ವಚ್ಛತೆ, ಅಡುಗೆಕೊಣೆ ಸ್ವಚ್ಛತೆ, ಗ್ಯಾಸ್ ಬಳಕೆ, ಕಾಯಿಪಲ್ಲೆ ಆಹಾರ ಧಾನ್ಯ ಸಂರಕ್ಷಣೆ ಮತ್ತು ಅಡುಗೆ ಮಾಡುವಾಗ ಅತಿ ಎಚ್ಚರದಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಇಒ ಎಚ್.ಎಸ್. ನಾಟೀಕಾರ, ಪ್ರಾಚಾರ್ಯ ಡಾ. ಶಿವರಾಜ ಕುಲಕರ್ಣಿ, ಮಲ್ಲಿಕಾರ್ಜುನ ಪಾಲಾಮುರ, ತುಳಸೀರಾಮ ಬೇಂದ್ರೆ, ಅಬ್ದುಲ್ ಬಾಸೀತ್ ಇತರರು ವೇದಿಕೆಯಲ್ಲಿದ್ದರು. ವೀರಣ್ಣ ಬೊಮ್ಮನಳ್ಳಿ ಸ್ವಾಗತಿಸಿದರು. ಅಮೃತಪ್ಪ ಕೆರೊಳ್ಳಿ ನಿರೂಪಿಸಿದರು. ರೇವಣಸಿದ್ದಪ್ಪ ದಂಡಿನ್ ವಂದಿಸಿದರು.