ಆರೋಗ್ಯ ತಪಾಸಣೆ ಶಿಬಿರ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ ಗುಲ್ಬರ್ಗ ಇವರ ನೇತೃತ್ವದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಜೇವರ್ಗಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಫೆ.5ರಂದು ಬೆ.9ರಿಂದ ಮ.4 ರವರೆಗೆ ಹಮ್ಮಿಕೊಳ್ಳಲಾಗಿದೆ. ಜೇವರ್ಗಿ ತಾಲೂಕಿನ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ರೋಗಿಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ. ಈ ಶಿಬಿರದಲ್ಲಿ ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಸುಟ್ಟಗಾಯ, ಅಪಘಾತ ಹಾಗೂ ನವಜಾತ ಶಿಶುಗಳ ಪರಿಣಿತ ವೈದ್ಯರು ಪಾಲ್ಗೊಂಡು ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ಮತ್ತು ಸಲಹೆ ನೀಡುವರು.
ಇಂದು ಸನ್ಮಾನ ಸಮಾರಂಭ
ಗುಲ್ಬರ್ಗ: ರಾಜ ಸ್ಪರ್ಧಾ ತರಬೇತಿ ಕೇಂದ್ರದ ವತಿಯಿಂದ ಫೆ.5ರಂದು ಮಧ್ಯಾಹ್ನ 12.30 ಗಂಟೆಗೆ ಚೇಂಬರ್ ಆಫ್ ಕಾಮರ್ಸ್ನಲ್ಲಿ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆರೂಢ ಮಠದ ಶಂಕರಾನಂದ ಮಹಾರಾಜ ಕಾರ್ಯಕ್ರಮ ಉದ್ಘಾಟಿಸುವರು. ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾಶಂಕರ ಜಿ. ತೆಗ್ಗಳ್ಳಿ, ಬಿ.ಎಚ್. ನಿರಗುಡಿ, ಮುಖ್ಯಗುರು ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸರೋಜಾ, ವಿಜಯಲಕ್ಷ್ಮೀ ಹಾಗೂ ಶಿವಕುಮಾರ ಪಾರಶೆಟ್ಟಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ರಾಜ ಸ್ಪರ್ಧಾ ತರಬೇತಿ ಕೇಂದ್ರದ ನಿರ್ದೇಶಕ ರಮೇಶ ಎ. ಜಿತ್ತಿ ತಿಳಿಸಿದ್ದಾರೆ.
ಇಂದು ಸಂಗೀತ ಕಾರ್ಯಕ್ರಮ
ಗುಲ್ಬರ್ಗ: ನೂತನ ವಿದ್ಯಾಲಯ ಸಂಸ್ಥೆಯ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಸಂಗೀತ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ದಿ.ಅನಂತರಾವ ದೇಶಮುಖ ಸಭಾಗೃಹದಲ್ಲಿ ಫೆ.5ರಂದು ಮ.3.30 ಗಂಟೆಗೆ ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ನೂತನ ವಿದ್ಯಾ ಸಂಸ್ಥೆಯ ಪ್ರಭಾರಿ ಅಧ್ಯಕ್ಷ ಆರ್.ಎನ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ದೇವರಾವ ದೇಶಮುಖ, ಶಾಮರಾವ ಖಣಗೆ, ಡಾ. ಸ್ವಾಮಿರಾವ ಕುಲ್ಕರ್ಣಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕುಮಾರ ಹೇಮಂತ ವಿ. ಜೋಷಿ ತಬಲಾ ಸಾಥ ನೀಡುವರು.
ಲೋಹ ಸಂಗ್ರಹ ಅಭಿಯಾನ
ಗುಲ್ಬರ್ಗ: ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲರ ಪುತ್ಥಳಿಗಾಗಿ ಫೆ.5ರಂದು ಸಾಯಂಕಾಲ 4 ಗಂಟೆಗೆ ಲೋಹ ಸಂಗ್ರಹಣದ ಜಿಲ್ಲಾ ಅಭಿಯಾನದ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಉದ್ಘಾಟಿಸಲಿದ್ದಾರೆ. ಶರಬಸವೇಶ್ವರ ಮಹಾ ಸಂಸ್ಥಾನದ ಬಸವರಾಜಪ್ಪ ಅಪ್ಪ ಹಾಗೂ ಜಿಲ್ಲೆಯ ರಾಜಕೀಯ ಮುಖಂಡರು, ವಿವಿಧ ಸಂಘಟನೆಯ ಮುಖಂಡರು, ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರರ ಪರಿವಾರದವರು ಕಾರ್ಯಕ್ರಮದಲ್ಲಿ ಇರುವರು.