'ಪೂರ್ಣಶಕ್ತಿ'ಗೆ 40 ಲಕ್ಷ ಮಂಜೂರು: ಜಾಧವ
ಚಿಂಚೋಳಿ: ರಾಷ್ಟ್ರೀಯ ಮಹಿಳಾ ಸಬಲೀಕರಣ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಹೊಸದಾಗಿ ಪೂರ್ಣಶಕ್ತಿ ಯೋಜನೆ ಜಾರಿಗೆ ತಂದಿದ್ದು, ಇದರಡಿಯಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಕುಂಚಾವರಂ ಗ್ರಾಮ ಪಂಚಾಯಿತಿ ಆಯ್ಕೆಗೊಂಡಿದೆ. 40 ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಡಾ. ಉಮೇಶ ಜಾಧವ ಹೇಳಿದರು.
ತಾಲೂಕಿನ ಶಾದೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡ ಪೂರ್ಣಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿ, ಕುಂಚಾವರಂ ಗ್ರಾಪಂ ವ್ಯಾಪ್ತಿಯಲ್ಲಿ 17 ತಾಂಡಗಳಿದ್ದು ಶೇ.90ರಷ್ಟು ಜನರು ಕೃಷಿ, ಕೃಷಿ ಪೂರಕ ಚಟುವಟಿಕೆ ಹಾಗೂ ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತರಾಗಿರುತ್ತಾರೆ. ಜನರು ಅನಕ್ಷರಸ್ಥರಾಗಿದ್ದು ಬಡತನ, ಅಜ್ಞಾನ ಮತ್ತು ಅಧುನಿಕ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ ಎಂದರು.
ಯೋಜನೆ ಮುಖ್ಯ ಉದ್ದೇಶ: ಲಿಂಗಾನುಪಾತ ಕಡಿಮೆಗೊಳಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯ ಹೋಗಲಾಡಿಸುವುದು ಮತ್ತು ಅಪೌಷ್ಟಿಕತೆ ನಿವಾರಣೆಗೊಳಿಸುವುದು. ಜಪಾನ್ ದೇಶದ ಸಾಮಾಜಿಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಅಪೌಷ್ಟಿಕ ಅಭಿಯಾನ ಯೋಜನೆಯಡಿ ತಾಲೂಕಿಗೆ 15 ಕೋಟಿ ಮಂಜೂರು ಮಾಡಿದೆ. ಕೇವಲ ಕಟ್ಟಡ ಮತ್ತು ರಸ್ತೆ ನಿರ್ಮಿಸಿ ಅಭಿವೃದ್ಧಿಗೊಳಿಸಿದರೆ ಸಾಲದು, ಮನುಷ್ಯನ ಆರೋಗ್ಯ ಅಭಿವೃದ್ಧಿ ಮುಖ್ಯವಾಗಿದೆ ಎಂದು ಶಾಸಕರು ಹೇಳಿದರು.
ಕುಂಚಾವರಂ ಗಡಿಭಾಗದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಹೊಸ ವಿದ್ಯುತ್ ಸ್ಥಾವರಕ್ಕಾಗಿ 1.15 ಕೋಟಿ ಅನುದಾನ ಮಂಜೂರಾಗಿದೆ. ಈ ಭಾಗದ ಸಮಗ್ರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚು ಅನುದಾನಕ್ಕಾಗಿ 9ರಂದು ನಡೆಯುವ ಎಚ್ಕೆಡಿಬಿ ಸಭೆಯಲ್ಲಿ ಪ್ರಸ್ತಾಪಿಸಲಾಗುವುದೆಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ಬಡತನ, ಅಜ್ಞಾನ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಧಾಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಂಚಾವರಂ ಗಡಿಭಾಗದಲ್ಲಿರುವ ತಾಂಡಗಳಲ್ಲಿ ಬಡತನ, ಮತ್ತು ಅಜ್ಞಾನದಿಂದಾಗಿ ಹೆಣ್ಣು ಶಿಶುಗಳ ಮಾರಾಟ ಪ್ರಕರಣ ನಡೆದಿದೆ. ಈ ಯೋಜನೆ ತಾಂಡಾದಲ್ಲಿ ಹೆಣ್ಣು ಮಗುವಿನ ಬಗ್ಗೆ ನಿರ್ಲಕ್ಷತನ ಹೆಚ್ಚಾಗಿತ್ತು. ಮಹಿಳೆಯರ ಆರೋಗ್ಯದ ಬಗ್ಗೆ ತಿಳಿವಳಿಕೆ ಮಕ್ಕಳ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವುದು ಮತ್ತು ಮಹಿಳೆಯರಿಗೆ ಜೇನು ಸಾಕಾಣಿಕೆ, ಲಂಬಾಣಿ ಕಸೂತಿ ತರಬೇತಿ, ಬುಟ್ಟಿ ನೇಯ್ಗೆ ಇನ್ನಿತರ ಹಣಕಾಸಿನ ಆದಾಯ ಹೆಚ್ಚಿಸಿಕೊಳ್ಳುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
10 ಗ್ರಾಮಗಳ ಆಯ್ಕೆ: ತಾಲೂಕಿನ ವೆಂಕಟಾಪೂರ, ಪೋಲಕಪಳ್ಳಿ, ಮಿರಿಯಾಣ, ಚಿಮ್ಮನಚೋಡ್, ಐನಾಪೂರ್, ಚಂದನಕೇರಾ, ಸಲಗರ ಬಸಂತಪುರ, ನಾಗಾಇದಲಾಯಿ, ಶಾದೀಪುರ, ಕುಂಚಾವರಂ, ಒಟ್ಟು 10 ಗ್ರಾಪಂಗಳು ಯೋಜನೆಯಲ್ಲಿ ಆಯ್ಕೆಗೊಂಡಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾದೀಪೂರ ಗ್ರಾಪಂ ಅಧ್ಯಕ್ಷ ತುಳಸೀರಾವ ಜಾಧವ್, ಉಪಾಧ್ಯಕ್ಷೆ ಇಂದಮ್ಮ,, ಜಿಲ್ಲಾ ಮಹಿಳಾ ಅಭಿವೃದ್ಧಿ ಅಧಿಕಾರಿ ಶಾಂತಲಾ ಬಿಲ್ಲವ್, ಸಿಡಿಪಿಓ ಮಹಮ್ಮದ ರಫಿ ಶಕಾಳೆ, ಭೀಮಶೇನ ಚವ್ಹಾಣ ಇನ್ನಿತರಿದ್ದರು. ಪರಿಮಳ ಸ್ವಾಗತಿಸಿದರು. ಕೃಷ್ಣ ನಿರೂಪಿಸಿದರು. ಸರೋಜ ವಂದಿಸಿದರು.