ಕೆ ಸೆಟ್ ಅವಾಂತರ; ಪರೀಕ್ಷೆ ಬರೆದೋರು ತತ್ತರ!
-ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕರ್ನಾಟಕ ಸ್ಟೇಟ್ ಎಲಿಜಿಬಲಿಟಿ ಟೆಸ್ಟ್- ಕೆ ಸೆಟ್) ಯ ರಾಜ್ಯಶಾಸ್ತ್ರ (ಪೊಲಿಟಿಕಲ್ ಸೈನ್ಸ್) ವಿಷಯದ ಪರೀಕ್ಷೆ ಬರೆದಿರುವ ಏಳು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಇದೀಗ ಕಂಗಾಲಾಗಿದ್ದಾರೆ.
ಏಕೆಂದರೆ ಯುಜಿಸಿ ಆದೇಶದಂತೆ ಕೆ ಸೆಟ್ ಪರೀಕ್ಷೆ ನಡೆಸಿರುವ ಮೈಸೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ 2 ಮತ್ತು 3ನೇ ಪತ್ರಿಕೆಗಳಲ್ಲಿ ಹತ್ತಕ್ಕೂ ಹೆಚ್ಚು ತಪ್ಪು ಉತ್ತರಗಳನ್ನೇ ಸರಿ ಎಂದು ಮಾದರಿ ಉತ್ತರ (ಕೀ ಆನ್ಸರ್ ಶೀಟ್) ಪತ್ರವನ್ನು ಅಂತಿಮವಾಗಿ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಈ ಬೆಳವಣಿಗೆಯೇ ಪರೀಕ್ಷೆ ಬರೆದ ಅಭ್ಯರ್ಥಿಗಳ ನೆಮ್ಮದಿಹರಣ ಮಾಡಿದೆ. ಮಾದರಿ ಉತ್ತರ ಪತ್ರಿಕೆಯಲ್ಲಿ ನಮೂದಾಗಿರುವ ಉತ್ತರಗಳಿಗೆ ಅನುಸಾರವಾಗಿಯೇ ಪತ್ರಿಕೆಗಳ ಮೌಲ್ಯಮಾಪನ ಸಾಗುವುದರಿಂದ ಕೀ ಉತ್ತರ ಪತ್ರಿಕೆಯಲ್ಲೇ ತಪ್ಪುಗಳಿದ್ದರೂ ಅವುಗಳನ್ನು ಸರಿಪಡಿಸಲು ಕೆ ಸೆಟ್ ಪರೀಕ್ಷೆ ನಡೆಸಿರುವ ಮೈಸೂರು ವಿವಿ ಯಾಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ.
2013ರ ಡಿ.8 ರಂದು ನಡೆದ ಕೆ ಸೆಟ್‌ನ ರಾಜ್ಯಶಾಸ್ತ್ರ ವಿಷಯದಲ್ಲಿ 7 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೀಗ ಅವರೆಲ್ಲರೂ ಯಾವ ಉತ್ತರ ಸರಿ, ಯಾವುದು ತಪ್ಪು ಎಂಬ ಗೊಂದಲದಲ್ಲಿದ್ದಾರೆ. ಏಕೆಂದರೆ ಕೆ ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣಕ್ಕೆ ಅಂಕ ನಿಗದಿಯಾಗಿಲ್ಲ. ಅತ್ಯಂತ ಹೆಚ್ಚಿನ ಅಂಕ ಪಡೆದ ಮೊದಲ 15 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಫಲಿತಾಂಶ ಘೋಷಿಸಲಾಗುತ್ತದೆ. ಹೀಗಾಗಿ ಈ ಪರೀಕ್ಷೆಗೆ ಹೆಚ್ಚಿನ ಮಹತ್ವ. ಇಲ್ಲಿ ಒಂದೊಂದು ಅಂಕವೂ ಅಭ್ಯರ್ಥಿಗೆ ಮಹತ್ವದ್ದಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೀ ಆನ್ಸರ್ ಶೀಟ್‌ನಲ್ಲಿ ತಪ್ಪುಗಳೇ ಕಂಡಿದ್ದರಿಂದ ಅದೆಲ್ಲಿ ಅಂಕಗಳು ಕೈತಪ್ಪಿ ಹೋಗುತ್ತವೆಯೋ ಎಂಬ ಭೀತಿ ಆವರಿಸಿದೆ.