ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಆರ್‌ಎಂಎನ್‌ಸಿಎಚ್‌ಎ ಯೋಜನೆಗೆ ಖಾದರ್ ಚಾಲನೆ

Srinivasa Murthy VN
Updated On : 14 Feb 2014, 12:38 pm

ಗುಲ್ಬರ್ಗ: ಬಾಣಂತಿಯರು, ನವಜಾತ ಶಿಶು ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಯುನಿಸೆಫ್ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ಆರಂಭಗೊಂಡಿರುವ ಆರ್‌ಎಂಎನ್‌ಸಿಎಚ್‌ಎ ಕಾರ್ಯಕ್ರಮಕ್ಕೆ ಗುರುವಾರ ಆರೋಗ್ಯ ಸಚಿವ ಯು.ಟಿ. ಖಾದರ್ ಗುಲ್ಬರ್ಗದಲ್ಲಿ ಚಾಲನೆ ನೀಡಿದರು.
ರಾಜ್ಯದ ಈಶಾನ್ಯ ಭಾಗದ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಬಿಜಾಪುರ, ಯಾದಗಿರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿರುವ ಜನರಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ.
ಅಲ್ಲದೆ, ಈ ಎಂಟು ಜಿಲ್ಲೆಗಳಲ್ಲಿ (ಆರ್‌ಎಂಎನ್‌ಸಿಎಚ್‌ಎ)ಸಂತಾನೋತ್ಪತ್ತಿ, ತಾಯಂದಿರು, ನವಜಾತ ಶಿಶು, ಮಕ್ಕಳು ಹಾಗೂ ಹದಿಹರೆಯದವರ ಆರೋಗ್ಯ ಅಭಿವೃದ್ಧಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ.
ದೇಶದಲ್ಲಿ 5 ವರ್ಷದೊಳಗಿನ ಮಕ್ಕಳ ಮರಣ ತಗ್ಗಿಸುವ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಿ ಎಂಬ ರಾಷ್ಟ್ರೀಯ ಕರೆಯ ಭಾಗವಾಗಿ ರೂಪಿತವಾಗಿರುವ ಈ ನೂತನ ಕಾರ್ಯಕ್ರಮ ಕರ್ನಾಟಕದ ಈಶಾನ್ಯ ಭಾಗದ 8 ಜಿಲ್ಲೆಗಳಲ್ಲಿ ಅನುಷ್ಠಾನವಾಗಿದೆ.
ಆರೋಗ್ಯ ಕ್ರಾಂತಿ ಅಭಿಯಾನ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಹೊಸ ಆಸ್ಪತ್ರೆಗಳನ್ನು ಹುಟ್ಟುಹಾಕುವ ಇರಾದೆ ಸರ್ಕಾರಕ್ಕಿಲ್ಲ. ಈಗಿರುವ ಆರೋಗ್ಯ ಜಾಲದಲ್ಲಿ ಶಕ್ತಿ ತುಂಬುವ ಹಾಗೂ ಜನಾರೋಗ್ಯ ಬಲಗೊಳಿಸುವ ಉದ್ದೇಶದೊಂದಿಗೆ ಬರುವ ದಿನಗಳಲ್ಲಿ ರಾಜ್ಯಾದ್ಯಂತ ಆರೋಗ್ಯ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಗ್ರಾಮೀಣ ಭಾಗದಲ್ಲಿ ಜನತೆ ಅರ್ಧಗಂಟೆ ನಡೆಯುವುದರೊಳಗೇ ಆಸ್ಪತ್ರೆ ಸೇವೆ ಹೊಂದುವಂತಾಗಬೇಕು. ಈಶಾನ್ಯ ಭಾಗದ 8 ಜಿಲ್ಲೆಗಳಲ್ಲಿ ಈ ರೀತಿಯ ಸೇವಾಜಾಲ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದರು. ಆರ್‌ಎಂಎನ್‌ಸಿಎಚ್ ಕಾರ್ಯಕ್ರಮ ಅನುಷ್ಠಾನದಲ್ಲಿರುವ ಈಶಾನ್ಯ ಭಾಗದ 8 ಜಿಲ್ಲೆಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಬರುವ ಅನುದಾನಕ್ಕಿಂತ ಶೇ.30 ರಷ್ಟು ಹೆಚ್ಚುವರಿ ಅನುದಾನ ದೊರಕಲಿದೆ. ಯುನಿಸೆಫ್ ಯೋಜನೆ ಅನುಷ್ಠಾನದಲ್ಲಿ ತಾಂತ್ರಿಕ ಬೆಂಬಲ ನೀಡಲಿದ್ದಾರೆ ಎಂದರು.
ಯುನಿಸೆಫ್ ಪ್ರತಿನಿಧಿ ಡೆವಿಡ್ ಮೆಕ್ಕಲಾಗಿನ್ ಮಾತನಾಡಿ, ರಾಜ್ಯದ ಮಾತೆಯರು ಮತ್ತು ಮಕ್ಕಳ ಮುಖದಲ್ಲಿ ನಗು ಸದಾ ಇರಬೇಕು. ತುಳಿತಕ್ಕೆ ಒಳಪಟ್ಟ ಸಮುದಾಯಗಳಿಗೆ ಆರೋಗ್ಯ ಸೇವೆ ದೊರಕುವಂತಾಗಬೇಕು. ಅಲ್ಲದೆ, ಬಡವರ ಆರೋಗ್ಯ ಕಾಳಜಿಗೆ ಇಂತಹ ಕಾರ್ಯಕ್ರಮಗಳಿದ್ದು ಬರುವ ದಿನಗಳಲ್ಲಿ ಸಾರ್ವಜನಿಕ ರಂಗದಲ್ಲಿ ಇದು ಹೊಸ ಸಂದೇಶ ರವಾನಿಸಲಿದೆ ಎಂದರು.
ಎಂಟು ಜಿಲ್ಲೆಗಳಲ್ಲಿ ಪರಿಸ್ಥಿತಿ ಕಳವಳ: ಕರ್ನಾಟಕ ಆರ್‌ಎಂಎನ್‌ಸಿಎಚ್ ಮಿಷನ್ ನಿರ್ದೇಶಕ ಡಾ.ಸುರೇಶ ಕೆ ಮೊಹಮದ್ ಮಾತನಾಡಿ, ಈಶಾನ್ಯದ 8 ಜಿಲ್ಲೆಗಳಲ್ಲಿನ ಆರೋಗ್ಯ ಸೂಚ್ಯಂಕ ಎಲ್ಲಾ 16 ಅಂಶಗಳಿಂದ ಇಳಿಮುಖವಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ಇಲ್ಲಿನ ಜಿಲ್ಲೆಗಳಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಅಂಕಿ- ಸಂಖ್ಯೆ ಸಹಿತ ಮಾಹಿತಿ ನೀಡಿ ಗಮನ ಸೆಳೆದರು.
ಭಾರತ ಸರ್ಕಾರದ ಪ್ರತಿನಿಧಿ ಡಾ.ರಾಕೇಶ ಕುಮಾರ್, 8 ಜಿಲ್ಲೆಗಳ ಆರೋಗ್ಯಾಧಿಕಾರಿಗಳು, ತಾಲೂಕು ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಿದ್ದರು.

ಮುಖ್ಯಾಂಶಗಳು

-  ಸಂತಾನೋತ್ಪತ್ತಿ ಆರೋಗ್ಯ
-  ತಾಯಿಯ ಆರೋಗ್ಯ
-  ನವಜಾತ ಶಿಶುವಿನ ಆರೋಗ್ಯ
-  ಮಕ್ಕಳ ಆರೋಗ್ಯ
-  ಹದಿಹರೆಯದವರ ಆರೋಗ್ಯ
-  ರೋಗಿ ಸಂಖ್ಯಾಧಾರಿತ ಮಾನವ ಸಂಪನ್ಮೂಲ ನಿಯೋಜನೆ
-  ಆರೋಗ್ಯ ಪರಿಕರ ಒದಗಿಸುವುದು
-  ಆರೋಗ್ಯ ಶಿಕ್ಷಣ, ಜಾಗೃತಿ
-  ಕಷ್ಟಕರ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ಆಧಾರಿತ ಪ್ರೋತ್ಸಾಹಧನ
-  ಸೇವಾರಹಿತ, ಸೇವಾ ಕೊರತೆಯ ಗ್ರಾಮ, ನಗರ ಪ್ರದೇಶಗಳತ್ತ ಗಮನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement