ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಂಚಾರಕ್ಕೆ ಸಿದ್ಧ ಸ್ನೇಹಕ್ಕೂ ಬದ್ಧ

Srinivasa Murthy VN
Updated On : 16 Jul 2014, 10:38 am

-ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಪೊಲ್ಯೂಶನ್ ಸರ್ಟಿಫಿಕೇಟ್ ಎಲ್ಲಿ, ಗಾಡಿ ಆರ್‌ಸಿ ಬುಕ್ ಕೊಡಿ, ಡ್ರೈವಿಂಗ್ ಲೈಸನ್ಸ್ ಇಟ್ಟಿಲ್ವಾ, ಹೆಲ್ಮೆಟ್ ಹಾಕಿಲ್ವಾ.. ಇನ್‌ಶ್ಯೂರನ್ಸ್ ರಿನ್ಯೂ ಮಾಡಿಸಿಲ್ವಾ...?
ಅಪಘಾತ ಘಟಿಸಿದಾಕ್ಷಣ ಗಾಯಾಳುಗಳತ್ತ ಗಮನ ಕೊಡದೆ ಸಂಬಂಧಿಸಿದವರನ್ನ ಅಡ್ಡಗಟ್ಟಿ, ಈ ಮೇಲಿನಂತೆ ರಸಪ್ರಶ್ನೆ ನಡೆಸುತ್ತ ಕಾಲಹರಣ ಮಾಡುತ್ತಿದ್ದ ಗುಲ್ಬರ್ಗ ಸಂಚಾರಿ ಪೊಲೀಸರೀಗ ಈಗ ಬದಲಾಗಿದ್ದಾರೆ.
ರಸ್ತೆ ದುರಂತಗಳು ಸಂಭಿವಿಸಿದರೆ ತಕ್ಷಣ ಅಲ್ಲಿಗೆ ಧಾವಿಸುತ್ತಾರೆ. ಗಾಯಾಳುವಿನ ದೇಹಸ್ಥಿತಿ ಗಮನಿಸುತ್ತಾರೆ. ಸಂಬಂಧಿಗಳಾರೂ ಕಾಣದಿದ್ದಲ್ಲಿ ತಾವೇ ವಾಹನ ಸೌಕರ್ಯ ಕಲ್ಪಿಸಿ ಹತ್ತಿರದ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ದೊರಕೋ ಹಾಗೆ ವ್ಯವಸ್ಥೆ ಮಾಡುತ್ತಿದ್ದಾರೆ.
ಗುಲ್ಬರ್ಗ ಸಂಚಾರಿ ಪೊಲೀಸರ ಈ ಕೆಲಸ ಒಂಥರಾ ಕೆರೆಯ ನೀರನು ಕೆರೆಗೆ ಚೆಲ್ಲಿ ಅಂತಾರಲ್ಲಾ ಹಾಗಿದೆ. ಸಾರ್ವಜನಿಕರು ಕೊಡುವ ತೆರಿಗೆ ಹಣದಿಂದಲೇ ಅಲ್ಲವೇ ಸಂಬಳ ಪಡೆಯೋದು, ಸಂಬಳದ ಹಣದಲ್ಲಿ ಒಂದಿಷ್ಟನ್ನು ಕಷ್ಟದಲ್ಲಿರುವ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟರೆ ತಪ್ಪೇನು ಎಂದು ಅಪಘಾತಕ್ಕೀಡಾಗುವ ಗಾಯಾಳುಗಳತ್ತ ಸಂಚಾರ ಪೊಲೀಸರೇ ಸ್ನೇಹ- ನೆರವಿನ ಹಸ್ತ ಚಾಚುತ್ತಿದ್ದಾರೆ.
ಸಿಪಿಐ ಚಿಂತನೆಯ ಫಲ: ಸಂಚಾರ ಸಿಪಿಐ ಪ್ರಭು ಡಿ.ಟಿ. ಅವರ ವಿನೂತನ ಚಿಂತನೆಯ ಫಲವೇ ಈ ಸ್ನೇಹ ಸಂಚಾರ ಯೋಜನೆ. ಪೊಲೀಸರು ಜನರಿಗಾಗಿ ಇರೋರು, ಜನರ ನಡುವಿದ್ದು ಸೇವೆ ಸಲ್ಲಿಸುವ ಪೊಲೀಸರೂ ಕಷ್ಟದಲ್ಲಿರುವ ಜನರಿಗಾಗಿ ಸಂಬಳದ ಹಣದಲ್ಲಿ ಒಂದಿಷ್ಟು ವೆಚ್ಚ ಮಾಡಿದರೆ ತಪ್ಪೇನು ಎಂಬ ವಿಚಾರ ಹೊಳೆಯಿತು. ಅದನ್ನೇ ಸಿಬ್ಬಂದಿಗೆ ತಿಳಿಸಿದೆ.
ಮಾಸಿಕ 10 ರುಪಾಯಿ ಸಂಗ್ರಹಿಸೋಣ, ಈ ಕೆಲಸಕ್ಕೆ ಬಳಸೋಣ ಎಂದಾಗ ಅವರೆಲ್ಲ 10 ತುಂಬ ಕಮ್ಮಿ ಆಯ್ತು, ರಸ್ತೆ ದುರಂತಗಳಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಜನರ ಸಂಕಷ್ಟಗಳು ಸಾಕಷ್ಟಿವೆ. ಮಾಸಿಕ 50 ಕಲೆ ಹಾಕಿ ಜನರ ನೆರವಿಗೆ ನಿಲ್ಲೋಣ ಎಂದಾಗ ತುಂಬ ಖುಷಿಯಾಯ್ತು ಎನ್ನುತ್ತಾರೆ ಸಿಪಿಐ ಪ್ರಭು.
ನಗರದ ಸಂಚಾರದ 2 ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿ 120 ಸಂಖ್ಯಾಬಲವಿದೆ. ಎಲ್ಲರೂ ಸಂಬಳದಿಂದ ಮಾಸಿಕ 50ನ್ನು ಸ್ನೇಹ ಸಂಚಾರ ನಿಧಿಗೆ ದೇಣಿಗೆ ಕೊಡುತ್ತಿದ್ದಾರೆ. ಅಧಿಕಾರಿಗಳು 100- 200ರ ವರೆಗೂ ನೀಡುತ್ತಿದ್ದಾರೆ. ಮಾಸಿಕ 6,000ಕ್ಕೂ ಹೆಚ್ಚು ಹಣ ಸಂಗ್ರಹವಾಗುತ್ತಿದ್ದು ಇದನ್ನು ರಸ್ತೆ ಅಪಘಾತದಿಂದ ಸಂಕಷ್ಟ ಎದುರಿಸುವವರಿಗೆ ತುರ್ತು ಚಿಕಿತ್ಸೆಗೇ ವೆಚ್ಚ ಮಾಡಲಾಗುತ್ತಿದೆ.
ತೀವ್ರ ಗಾಯಗೊಂಡಿದ್ದವರಿಗೆ ಆಸ್ಪತ್ರೆಗೆ ತುರ್ತಾಗಿ ಸಾಗಿಸಿದರೆ ತೊಂದರೆಗಳು ಬೇಗ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಆ್ಯಂಬುಲನ್ಸ್ ತರಿಸಲು ಸ್ವಲ್ಪ ತಡವಾಗುತ್ತದೆ. ಆಗ ಸ್ಥಳದಲ್ಲಿರುವ ಕರ್ತವ್ಯನಿರತ ಪೇದೆಗಳೇ ಆಸ್ಪತ್ರೆಗೆ ಸಾಗಿಸುತ್ತಾರೆ. ಆ ಕ್ಷಣದಲ್ಲಿ ಮಾಡುವ ಖರ್ಚು, ವೆಚ್ಚವನ್ನು ಠಾಣೆಗೆ ಬಂದು ವಿವರಿಸುತ್ತಾರೆ. ಪ್ರಕರಣ ದಾಖಲಾಗಿದ್ದರೆ ಅದರ ನಂಬರ್ ಸಮೇತ ನೋಂದಣಿ ಮಾಡಿಕೊಂಡು ಸದರಿ ಪೊಲೀಸ್ ಸಿಬ್ಬಂದಿಗೆ ನಿಧಿಯಿಂದ ಹಣ ಪಾವತಿಸಲಾಗುತ್ತದೆ.

ಪೊಲೀಸರ ಸಮಾಜಸೇವೆ
ಸಂಚಾರ ಪೊಲೀಸರು ರಸ್ತೆ ಮೇಲೆಯೇ ಕೆಲಸದಲ್ಲಿರೋರು. ಹಾಗಂತ ಅಲ್ಲಿನ ಕಷ್ಟಗಳನ್ನೆಲ್ಲ ನೋಡುತ್ತ ಸುಮ್ಮನಿರಬೇಕು ಅಂತೇನಿಲ್ಲ. ಕಷ್ಟದಲ್ಲಿರುವವರಿಗಾಗಿ ಮಿಡಿಯುವುದಕ್ಕೆ ಕಾನೂನು ಸಹಿತ ಯಾರೂ ಅಡ್ಡಿಯಾಗೋದಿಲ್ಲ. ಅದಕ್ಕೇ ಸಹಸಿಬ್ಬಂದಿ ಬೆಂಬಲದಿಂದ ಈ ಯೋಜನೆ ಶುರುವಾಗಿದೆ. ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಸಿಬ್ಬಂದಿಗಳೇ ನಿರ್ವಹಿಸುತ್ತಾರೆ. ಇದರಲ್ಲಿನ ವ್ಯವಹಾರವೆಲ್ಲವೂ ಪಾರದರ್ಶಕವಾಗಿರುತ್ತದೆ ಎಂದು ಸಿಪಿಐ ಪ್ರಭು ಹೇಳುತ್ತಾರೆ. ಪೊಲೀಸರೂ ತಮ್ಮ ಸುತ್ತಲಿನ ಸಮಾಜದ ಆಗುಹೋಗುಗಳೊಂದಿಗೆ ಸ್ಪಂದಿಸಬೇಕು. ಅಂತಹ ಗುಣ ಬೆಳೆಸಿಕೊಳ್ಳಬೇಕೆಂಬ ಸದುದ್ದೇಶವೂ ಇದರ ಹಿಂದಡಗಿದೆ. ಅನಾಥರು ಅಪಘಾತದಲ್ಲಿ ಮಡಿದರೆ ಅಂತಹ ಶವಗಳ ಸಂಸ್ಕಾರಕ್ಕೂ ಹಣ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

'ಕನ್ನಡಪ್ರಭ' ಆಶಯ
ಜನರ ಕಷ್ಟ ನಷ್ಟಗಳಾವುದನ್ನೂ ನೋಡದೆ ಸಂದರ್ಭ ಸಿಕ್ಕಾಗ 'ಸಿಕ್ಕಷ್ಟು ಶಿವಾಯನಮಃ' ಎನ್ನುತ್ತಿದ್ದ ಗುಲ್ಬರ್ಗ ಟ್ರಾಫಿಕ್ ಪೊಲೀಸರ ಠೀಕು- ಠಾಕು ಇಲ್ಲಿನ ವಾಹನ ಸವಾರರಿಗೆ ಚಿರಪರಿಚಿತ. ಆದರೀಗ ಬದಲಾದ ಗಳಿಗೆಯಲ್ಲಿ ಪೊಲೀಸರು ಸ್ನೇಹ ಸಂಚಾರ ಎಂದು ಸಂಕಷ್ಟದಲ್ಲಿರುವ ಜನರತ್ತ ಕೈ ಚಾಚಿರುವ 'ಸ್ನೇಹ ಹಸ್ತ' ಸದಾ ಗಟ್ಟಿಯಾಗಿರಲೇಬೇಕು. ಅಂದಾಗ ಸಂಚಾರ ವ್ಯವಸ್ಥೆಯಲ್ಲಿ ಸ್ನೇಹ- ಪ್ರೀತಿ ಮೂಡುವುದಲ್ಲದೆ ಬೇಕಾಬಿಟ್ಟಿ ವಾಹನ ಸವಾರರಿಗೆ ಸಂಚಾರ ಪೊಲೀಸರು ಮಾದರಿಯಾಗಿ ಶಿಸ್ತು ರೂಢಿಸಿಕೊಂಡಾರು. ಈ ಯೋಜನೆ ಬರುವ ದಿನಗಳಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗಲಿ, ಸಂಚಾರ ಪೊಲೀಸರ ಇಮೇಜ್ ಹೆಚ್ಚಿಸಲಿ.

ಶ್ರೀಗಳ ಅಭಯ ಹಸ್ತ
ಈ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಭು ಅವರು ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವಾರಾಧ್ಯ ಸ್ವಾಮಿಗಳ ಮಠಕ್ಕೆ ಹೋದಾಗ ಡಾ. ಗಂಗಾಧರ ಶಿವಾಚಾರ್ಯರು ಪೊಲೀಸರೇ ರೂಪಿಸಿ ಜಾರಿಗ ತಂದಿರುವ ಯೋಜನೆ ವಿಚಾರ ಕೇಳಿ ಮೆಚ್ಚುಗೆ ಸೂಚಿಸಿದ್ದಾರೆ. ತಕ್ಷಣ 501 ಹಣವನ್ನು ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಗುರುಗಳಿಂದ ಆಶೀರ್ವಾದ ದೊರಕಿದಾಗ ನಾವು ಅದನ್ನು ಭಕ್ತಿಯಿಂದ ಸ್ವೀಕರಿಸಿದ್ದೇವೆ. ಉತ್ತಮ ಕೆಲಸಗಳಿಗೆ ಹರ, ಗುರುಗಳ ಪ್ರೇರಣೆಯೂ ಇರುತ್ತದಲ್ಲವೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement