ಅಚ್ಚುಕಟ್ಟು ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ
ಹುಣಸಗಿ: ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದ ಎಡದಂಡೆ ಗೇಟ್ ಬಳಿ ಪೂಜೆ ಸಲ್ಲಿಸಿ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನವೀಕರಣಗೊಂಡ ಮುಖ್ಯ ಕಾಲುವೆಗೆ ಬುಧವಾರ 300 ಕ್ಯೂಸೆಕ್ ನೀರು ಹರಿಬಿಡಲಾಯಿತು. ಇದರಿಂದ ಕಾಲುವೆ ನೀರನ್ನೇ ನಂಬಿ ಬಿತ್ತನೆ ಮಾಡಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಸುರಪುರ ಶಾಸಕ ರಾಜಾವೆಂಕಟಪ್ಪ ನಾಯಕ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನಂತರ ಗೇಟ್ನ ಗುಂಡಿ ಒತ್ತುವ ಮೂಲಕ ನವೀಕರಣಗೊಂಡ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ಪಾತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರದ ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದ್ದು, ಅಲ್ಲಿಂದ ಬಸವಸಾಗರ ಜಲಾಶಯಕ್ಕೂ ನೀರು ಹರಿದು ಬಂದಿದೆ. ಈಗ ಜಲಾಶಯ ಭರ್ತಿಯಾಗಿದ್ದು, ಇದು ನಮ್ಮ ಭಾಗದ ರೈತರಿಗೆ ಸಂತಸ ವಿಷಯವಾಗಿದೆ ಎಂದರು.
ರೈತರ ಕಷ್ಟಕ್ಕೆ ಸ್ಪಂದನೆ: ನೀರಾವರಿ ಸಲಹಾ ಸಮಿತಿ ಸಭೆ ನಡೆಯದೆ ಕಾಲುವೆಗೆ ನೀರು ಹರಿಸುವಂತಿಲ್ಲ. ಆದರೂ ಈ ಭಾಗದ ರೈತರು ಪಡುತ್ತಿರುವ ಬವಣೆಯನ್ನು ಸಲಹಾ ಸಮಿತಿಯ ಅಧ್ಯಕ್ಷ ಎಸ್.ಆರ್. ಪಾಟೀಲ್ ಅವರೊಂದಿಗೆ ಚರ್ಚಿಸಿ ರೈತರ ತೊಂದರೆಯನ್ನು ಮನವರಿಕೆ ಮಾಡಿ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಇದಕ್ಕೆ ನಮ್ಮ ಭಾಗದ ಯಾವ ಶಾಸಕರೂ ಕಾಲುವೆಗೆ ನೀರು ಹರಿಸಲು ಒತ್ತಾಯ ಮಾಡದೇ ಇರುವುದು ಬೇಸರ ತಂದಿದೆ ಎಂದು ಹೇಳಿದರು.
ಎಡದಂಡೆ ಕಾಲುವೆ ನವೀಕರಣ ಕಾಮಗಾರಿ ಮುಗಿದಿದೆ. ನೀರು ಕಾಲುವೆ ಮೂಲಕ ಪೋಲಾಗುವುದು ತಪ್ಪಿದೆ. ಅದರಂತೆ ರೈತರು ಸಹ ನೀರನ್ನು ವ್ಯರ್ಥಪೋಲು ಮಾಡದೇ ಸರಿಯಾಗಿ ಬಳಸಿಕೊಳ್ಳಿ ಎಂದು ತಿಳಿಸಿದರು. ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರಾದ ಡಿ.ಆರ್.ಕೃಷ್ಣಮೂರ್ತಿ, ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರಾದ ಡಿ.ಆರ್. ಕೃಷ್ಣಮೂರ್ತಿ, ಶಿವಣ್ಣ ಮಂಗಿಹಾಳ, ಸೂಲಪ್ಪ ಕಮತಗಿ, ರಾಜಶೇಖರ ಗೌಡ, ವಿಠ್ಠಲ್ ಯಾದವ, ವೆಂಕೂಬ ಸಾಹುಕಾರ, ಪ್ರಭುಗೌಡ, ರಾಜಾ ವೇಣುಗೋಪಲನಾಯಕ, ಗೋಪಾಲ್ ಸೇಠ ಲಡ್ಡಾ, ಅಮರಣ್ಣ ಕುಂಬಾರ ಮತ್ತಿತರರು ಇದ್ದರು.