ಪತ್ರಕರ್ತನ ಬಂಧನಕ್ಕೆ ಆಂದೋಲಾ ಶ್ರೀ ಆಗ್ರಹ
ಗುಲ್ಬರ್ಗ: ಪಂಚಪೀಠಾಧೀಶರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತವಿಶ್ವಾರಾಧ್ಯ ಸತ್ಯಂಪೇಟೆ ಅವರು ಅಡ್ನಾಡಿಗಳು ಎಂಬ ಅವಹೇಳಕಾರಿ ಶಬ್ದ ಬಳಸಿದ್ದಾರೆ. ಇದರಿಂದ ಪಂಚಪೀಠಾಧೀಶರ ಭಕ್ತರಿಗೆ ನೋವಾಗಿದ್ದು, ಪತ್ರಕರ್ತನನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಮುಖ್ಯಸ್ಥ, ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡ್ನಾಡಿಗಳು ಎಂಬ ಪದ ಪೀಠಾಧೀಶರ ವಿರುದ್ಧ ಬಳಸಿದ್ದು, ಅಪರಾಧ. ಅಂತಹವರು ಯಾರೇ ಆಗಿರಲಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಈ ಕೆಲಸಗಳನ್ನು ಮಾಡಿದ್ದರೆ ಅವರನ್ನು ಸೈಬರ್ ಅಪರಾಧ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಪಂಚಪೀಠಗಳ ಬಗ್ಗೆಯಾಗಲಿ, ಬಸವಾದಿ ಶರಣರ ಬಗ್ಗೆಯಾಗಲಿ, ಯಾವುಪೇ ಧಾರ್ಮಿಕ ಮಹಾತ್ಮಾರ ವಿರುದ್ಧವೇ ಆಗಲಿ ಇಂತಹ ಪದಗಳ ಬಳಕೆ ಸರಿಯಾದದ್ದಲ್ಲ. ಇದು ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಯತ್ನ ಎಂದು ಆಂದೋಲಾ ಶ್ರೀಗಳು ಹೇಳಿದರು. ತಕ್ಷಣ ಪತ್ರಕರ್ತನನ್ನು ಬಂಧಿಸಬೇಕು.
ಇಲ್ಲದಿದ್ದಲ್ಲಿ ಬರುವ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಪಂಚ ಜಿಲ್ಲೆಗಳ ಜನಪರ ಹೋರಾಟ ಸಮಿತಿಯ ಎಂ.ಎಸ್. ಪಾಟೀಲ್ ನರಿಬೋಳ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಪತ್ರಕರ್ತರ ಪ್ರಶಸ್ತಿ ಪ್ರದಾನ ಇಂದು
ಗುಲ್ಬರ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಜು.31ರಂದು ಬೆಳಗ್ಗೆ 10.30 ಗಂಟೆಗೆ ಸೂಪರ್ ಮಾರ್ಕೆಟಿನ ಚೇಂಬರ್ ಕಟ್ಟಡದ ಎಸ್.ಆರ್. ರಘೋಜಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಶಹಾಬಜಾರ್ ಸುಲಫಲ ಮಠದ ಮಹಾಂತ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕಾರ್ಯಕ್ರಮ ಉದ್ಘಾಟಿಸುವರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಡಾ. ಅಜಯಸಿಂಗ್, ದತ್ತಾತ್ರೇಯ ಪಾಟೀಲ್ ರೇವೂರ್, ಡಿಸಿ ಡಾ. ಎನ್.ವಿ. ಪ್ರಸಾದ್, ಎಸ್ಪಿ ಅಮಿತ್ ಸಿಂಗ್ ಆಗಮಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಶ್ರೀನಿವಾಸ ಸಿರನೂರಕರ ವಿಶೇಷ ಉಪನ್ಯಾಸ ನೀಡುವರು. ಹಿರಿಯ ವರದಿಗಾರ ಎಸ್.ಬಿ. ಜೋಷಿ, ವಿ.ಎನ್. ಕಾಗಲ್‌ಕರ್ ಪ್ರಶಸ್ತಿ ಸೇರಿ 14 ಜನ ವರದಿಗಾರರಿಗೆ ವಿವಿಧ ಪ್ರಶಸ್ತಿ ವಿತರಣೆ ನಡೆಯಲಿದೆ.