ಮರ ಬಿದ್ದು ವಿದ್ಯಾರ್ಥಿನಿಗೆ ಗಾಯ: ಸಹಾಯಕ್ಕೆ ಮನವಿ
ಜೇವರ್ಗಿ: ತಾಲೂಕಿನ ಹಿಪ್ಪರಗಾ (ಎಸ್.ಎನ್.) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿ ಮೇಲೆ ಮರ ಉರುಳಿ ಗಂಭೀರವಾಗಿ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು 5ನೇ ತರಗತಿಯ ಕಲಾವತಿ ಮಲ್ಲಪ್ಪ ಉಮ್ಮರಗಿ ಎಂದು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಬಾಲಕಿಯನ್ನು ಮರಳಿ ಗ್ರಾಮಕ್ಕೆ ಕರೆತರಲಾಗಿದೆ. ಆಕಸ್ಮಿಕವಾಗಿ ಜರುಗಿದ ಘಟನೆಗೆ ಯಾರು ಹೊಣೆಗಾರರಲ್ಲ. ಆದರೂ ಮಾನವೀಯ ದೃಷ್ಟಿಯಿಂದ ಶಿಕ್ಷಣ ಇಲಾಖೆ ಬಾಲಕಿಯ ಚಿಕಿತ್ಸೆಗೆ ವೆಚ್ಚ ಭರಿಸಬೇಕಾಗಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಗಾಯಗೊಂಡ ಬಾಲಕಿಗೆ ಪೂರ್ಣ ಪ್ರಮಾಣದ ಚಿಕಿತ್ಸೆಗಾಗಿ ಸ್ಪಂದಿಸುವುದು ಅಗತ್ಯವಾಗಿದೆ.
ಬಾಲಕಿ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಬಾಲಕಿ ತಂದೆ ಮಲ್ಲಪ್ಪ ಉಮ್ಮರಗಿ ತಿಳಿಸಿದ್ದಾರೆ.
ಹೆದ್ದಾರಿ ತಡೆ ನಾಳೆ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಭೈರಾಮಡಗಿ ಗ್ರಾಮಕ್ಕೆ ಬರುತ್ತಿರುವ ಅಸಮರ್ಪಕ ಬಸ್ ಸೇವೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಆ.1ರಂದು ಗೊಬ್ಬುರ ಬಿ. ರಾಜ್ಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಂಡಿದ್ದಾರೆ.
ಗ್ರಾಮಕ್ಕೆ ಬರುವ ಬಸ್ ಈ ಮುಂಚೆ ಗ್ರಾಮದಿಂದ ಸ್ಟೇಷನ್ ಗಾಣಗಾಪುರಕ್ಕೆ ಮಾತ್ರ ಹೋಗಿ ಬರುತ್ತಿತ್ತು. ಆದರೆ ಈಗ ಬಸ್ಸನ್ನು ಆಳಂದ ತಾಲೂಕಿನ ನಿಂಬರ್ಗಾವರೆಗೂ ವಿಸ್ತರಿಸಿರುವುದು ತೊಂದರೆಗೆ ಕಾರಣವಾಗಿದೆ. ಇದರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ. ಹೀಗಾಗಿ ಬಸ್ ಸೇವೆ ಇದ್ದೂ ಇಲ್ಲದಂತಾಗಿದೆ.
ಈ ಬಗ್ಗೆ ಮೇಲಧಿಕಾರಿಗಳು ಗಮನ ಹರಿಸಿ ಭೈರಾಮಡಗಿ ಬಸ್ ಮೊದಲಿನ ಹಾಗೆ ಸಂಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಚ್ಚರಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೂ ಗ್ರಾಮಸ್ಥರು ದೂರು ನೀಡಿದ್ದಾರೆ.
ಸನ್ಮಾನ ಸಮಾರಂಭ ಇಂದು
ಗುಲ್ಬರ್ಗ: ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾ ಮಂಡಳ, ಈಶಾನ್ಯ ವಲಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ, ಈಶಾನ್ಯ ವಲಯ ಕೇಂದ್ರ ಸಮಿತಿಆ್ತಶ್ರಯದಲ್ಲಿ ಜು.31ರಂದು ಬೆಳಗ್ಗೆ 11 ಗಂಟೆಗೆ ಈಶಾನ್ಯ ಸಾರಿಗೆ ರಂಗ ಮಂದಿರದಲ್ಲಿ ಜಿ.ಎನ್. ಶಿವಮೂರ್ತಿರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ಹರಿದಾಸ ವಾಣಿ ನಾಳೆಯಿಂದ
ಗುಲ್ಬರ್ಗ: ಗುಲ್ಬರ್ಗ ಆಕಾಶವಾಣಿ ಕೇಂದ್ರವು ಆ.1ರಿಂದ 20ರವರೆಗೆ(ಆ.15ರಂದು ಹೊರತುಪಡಿಸಿ) ಪ್ರತಿದಿನ ಬೆಳಗ್ಗೆ 6.37ಕ್ಕೆ ಒಂದು ಹೊಸ, ವಿಶಿಷ್ಟವಾದ ಹರಿದಾಸ ವಾಣಿ ಎಂಬ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಈ ಕಾರ್ಯಕ್ರಮದಲ್ಲಿ ಆಯ್ದ ಹರಿದಾಸರ ಪರಿಚಯದ ಜೊತೆಗೆ ಅವರ ಕೀರ್ತನೆ, ಅದಕ್ಕೆ ವ್ಯಾಖ್ಯಾನ ಹೀಗೆ 15 ನಿಮಿಷಗಳ ಅವಧಿಯಲ್ಲಿ ಒಂದು ಸಮಗ್ರ ಕಾರ್ಯಕ್ರಮವನ್ನು ರೂಪಿಸಿದ್ದು, ಖ್ಯಾತ ಗಾಯಕರು ಹಾಗೂ ಲೇಖಕರು ಪ್ರಸ್ತುತಪಡಿಸಲಿದ್ದಾರೆ.
ಮತ್ತೆ ಸರಗಳ್ಳರ ಹಾವಳಿ
ಗುಲ್ಬರ್ಗ: ಲಾಲಗೇರಿ ಕ್ರಾಸ್-ಮಹಾಲಕ್ಷ್ಮೀ ಲೇಔಟ್ನಲ್ಲಿ ಬುಧವಾರ ಸರಗಳ್ಳರು ಎಲ್ಐಸಿ ಉದ್ಯೋಗಿ ಸುಧಾ ನಾರಾಯಣರಾವ ಕುಲಕರ್ಣಿ ಇವರ ಕೊರಳಲ್ಲಿದ್ದ 25 ಗ್ರಾಂ. ಚಿನ್ನದ ಸರ ಅಪರಿಸಿ ಪರಾರಿಯಾಗಿದ್ದಾರೆ. ಬೈಕ್ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ನ್ಯೂ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಲಕುಂದಿ ಶಾಲೆ ಎಸ್ಡಿಎಂಸಿಗೆ ಆಯ್ಕೆ
ಶಹಾಬಾದ್: ಕುಲಕುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸುಧಾರಣಾ ಸಮಿತಿ ರಚನೆಯಾಯಿತು. 2014-15ನೇ ಸಾಲಿನ ಎಸ್ಡಿಎಂಸಿ ಅಧ್ಯಕ್ಷರಾಗಿ ಶಿವುಬಾಯಿ ಸಾಬಣ್ಣ ಕಾರಿ ಮತ್ತು ಗುರುಬಾಯಿ ಮಲ್ಲಿಕಾರ್ಜುನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ತಿಮ್ಮಣ್ಣ, ಶಿವಶರಣಪ್ಪ, ಪಾರ್ವತಿ, ಬೀರಪ್ಪ, ಮರೆಮ್ಮ, ದೌವಲಸಾಬ, ಬಸವರಾಜ, ಮೌನೇಶ, ವಜ್ರಮ್ಮ, ಶರಣಮ್ಮ, ಚಂದ್ರಶೇಖರ ಸದಸ್ಯರಾಗಿ ಆಯ್ಕೆ ಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.