16 ಜೀವ ಬಲಿ ಪಡೆದ ಚಾಲಕ ಸತತ ಮೂರನೇ ಪಾಳಿಯಲ್ಲಿದ್ದ!
ಆಳಂದದಲ್ಲಿ 16 ಮಂದಿ ಜೀವ ಬಲಿ ಪಡೆದ ಅಪಘಾತಕ್ಕೆ ಸಾರಿಗೆ ಸಂಸ್ಥೆಯಲ್ಲಿನ ಸಿಬ್ಬಂದಿ ಕೊರತೆಯೇ ಕಾರಣ!
-ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಆಳಂದದಲ್ಲಿ 16 ಮಂದಿ ಜೀವ ಬಲಿ ಪಡೆದ ಅಪಘಾತಕ್ಕೆ ಸಾರಿಗೆ ಸಂಸ್ಥೆಯಲ್ಲಿನ ಸಿಬ್ಬಂದಿ ಕೊರತೆಯೇ ಕಾರಣ!
ಹೌದು. ಸೋಮವಾರ ಟೆಂಪೋಗೆ ಡಿಕ್ಕಿ ಹೊಡೆದ ಈಶಾನ್ಯ ಸಾರಿಗೆ ಸಂಸ್ಥೆಯ ಚಾಲಕ ರವಿ ಟ್ರಿಪಲ್ ಡ್ಯೂಟಿಯಲ್ಲಿದ್ದ! ನಿದ್ರೆ ಮಂಪರಿನಲ್ಲಿ ಹಿಡಿತ ತಪ್ಪಿ ಅಪಘಾತ ಸಂಭವಿಸಿದೆ.
ಎನ್ಇಕೆಆರ್ಸಿ ಹೊಸಪೇಟೆ ವಿಭಾಗದ ಸಂಡೂರು ಘಟಕದ ಬಸ್ನ ಚಾಲಕನಾಗಿರುವ ರವಿ ಮೊದಲ ಡ್ಯೂಟಿ ಪೂರೈಸಿ ಮನೆಗೆ ತೆರಳುತ್ತಿದ್ದ. ಸಿಬ್ಬಂದಿ ಕೊರತೆಯಿಂದ ಡಬ್ಬಲ್ ಡ್ಯೂಟಿಯಾಗಿ ದಾವಣಗೆರೆ ಹೋಗಿ ಬರುವಂತೆ ಮೇಲಧಿಕಾರಿಗಳು ಸೂಚಿಸಿದ್ದರು. ಅದನ್ನು ಯಶಸ್ವಿಯಾಗಿ ಮುಗಿಸಿದ್ದ ರವಿ ಇನ್ನೇನು ಮನೆಗೆ ಹೊರಡಲು ಸಿದ್ಧವಾಗಿದ್ದ. ಅಷ್ಟರಲ್ಲೇ ಹಿರಿಯ ಅಧಿಕಾರಿಗಳು ಮತ್ತೆ ಸಿಬ್ಬಂದಿ ಇಲ್ಲ ಎಂಬ ನೆಪವೊಡ್ಡಿ ವಿಶ್ರಾಂತಿಗೂ ಬಿಡದೆ ಸಂಡೂರಿನಿಂದ ಜಿಡಗಾಗೆ ತೆರಳುವ ಬಸ್ ಹತ್ತಿಸಿದ್ದರು. ಇದು ಚಾಲಕ ರವಿಯ ನಿರಂತರ ಮೂರನೇ ಡ್ಯೂಟಿಯಾಗಿತ್ತು. ನಿರಂತರ ಕೆಲಸದಿಂದ ದಣಿದಿದ್ದ ರವಿಗೆ ಬೆಳಗಿನ ಜಾವ ನಿದ್ರೆ ಮಂಪರು ಕಾಡಿದೆ. ಈ ವೇಳೆ ಎದುರುಗಡೆಯಿಂದ ಬರುತ್ತಿದ್ದ ಟೆಂಪೋಗೆ ಬಸ್ ಗುದ್ದಿದ್ದಾನೆ.
ಸತತ ಡ್ಯೂಟಿ ಮೇಲಿದ್ದೆ, ನಿದ್ದೆಗಣ್ಣೇ ಈ ದುರಂತಕ್ಕೆ ಕಾರಣ ಎಂದು ಆಸ್ಪತ್ರೆಯಲ್ಲಿರುವ ಚಾಲಕ ರವಿಯೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದಾನೆ.
ವಿಶ್ರಾಂತಿ ಇಲ್ಲದ ಕೆಲಸ ತರವೆ?
45ರಿಂದ 50 ಜನರ ಜೀವದ ಜವಾಬ್ದಾರಿ ಹೊತ್ತ ಬಸ್ ಚಾಲಕರಿಗೆ ವಿಶ್ರಾಂತಿ ಅನಿವಾರ್ಯ. ಇಷ್ಟಾದರೂ ಈ ಕುರಿತು ನಿರ್ಲಕ್ಷ್ಯ ತೋರುವ, ಸಿಬ್ಬಂದಿಯನ್ನು ಸತತ ಕೆಲಸಕ್ಕೆ ಹಚ್ಚುವ, ಶೋಷಿಸುವ, ಈ ಮೂಲಕ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳುವ ಕೆಲಸವನ್ನು ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡುವುದು ಸರಿಯೇ?
ಸಾರಿಗೆ ಸಂಸ್ಥೆಯಲ್ಲಿ ಚಾಲಕರಿಗೆ ಡಬ್ಬಲ್ ಡ್ಯೂಟಿ ಹೆಸರಲ್ಲಿ ನಿರಂತರ ಬಸ್ ಓಡಿಸುವಂತೆ ಸೂಚಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ. ಸಿಬ್ಬಂದಿ ಕೊರತೆ ಇದ್ದರೂ ಪಾಳಿ ಪ್ರಕಾರ ಚಾಲಕರಿಗೆ ಕೆಲಸ ನೀಡಬೇಕು. ವಿಶ್ರಾಂತಿ ಇಲ್ಲದ ಚಾಲನೆಯಿಂದ ಏನೆಲ್ಲಾ ಅವಾಂತರವಾಗುತ್ತದೆ ಎಂಬುದಕ್ಕೆ ಆಳಂದ ದುರಂತ ಕನ್ನಡಿ. ಸಾರಿಗೆ ಸಚಿವರ ಜತೆ ಚರ್ಚಿಸುವೆ.
-ಖಮರುಲ್ ಇಸ್ಲಾಂ, ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ
ಸಿಬ್ಬಂದಿ ಕೊರತೆ ನೀಗಿಸಲು ಡಬ್ಬಲ್ ಡ್ಯೂಟಿ ಹಾಕುವುದು ಇದೆ. ಬೆಳಗಿನ ಜಾವ ಅದೆಷ್ಟು ಬಸ್ಗಳು ಅಪಘಾತಕ್ಕೀಡಾಗಿವೆ ಎಂಬುದನ್ನು ಸಮೀಕ್ಷೆ ಮಾಡುತ್ತೇವೆ. ಚಾಲಕರ ದೈಹಿಕ ಸಾಮರ್ಥ್ಯದ ಬಗ್ಗೆಯೂ ತಪಾಸಣೆ ನಡೆಸುತ್ತೇವೆ. ಚಾಲಕ ರವಿ ಕೆಲಸ ನಿರ್ವಹಣೆ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.
-ಡಾ. ಜಿಎನ್. ಶಿವಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಗುಲ್ಬರ್ಗ