ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸ್ವಾಮಿಗಳ ಬದುಕು ಆದರ್ಶಪ್ರಾಯವಾಗಲಿ'

Srinivasa Murthy VN
Updated On : 5 Jun 2014, 12:47 pm

ಶಹಾಬಾದ್: ಸ್ವಾಮೀಜಿಗಳ ಬದುಕು ಆದರ್ಶಮಯವಾಗಿರಬೇಕು ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು. ಅವರು ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಭಕ್ತರು ಏರ್ಪಡಿಸಿದ್ದ ಕಟ್ಟಿಮನಿ ಹಿರೇಮಠದ ಅಭಿನವ ಮುನೀಂದ್ರ ಶಿವಾಚಾರ್ಯರ 34ನೇ ಹುಟ್ಟುಹಬ್ಬದ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಪ್ರಶಸ್ತಿ: ಸಾನ್ನಿಧ್ಯ ವಹಿಸಿದ್ದ ಕಲಕೇರಿ ಸಿದ್ದರಾಮ ಶರಣರು, ದಂಡಗುಂಡ ಸಂಗನಬಸವ ಶರಣರು, ಮಾಲಗತ್ತಿ ಚನ್ನಬಸವ ಶರಣರು ಹಾಗೂ ಯರಗೋಳ ಶರಣರು, ಮುನೀಂದ್ರ ಶ್ರೀಗಳನ್ನು ಸನ್ಮಾನಿಸಿದರು. ಕೃಷಿ ಮತ್ತು ಧರ್ಮಕಾರ್ಯಕ್ಕಾಗಿ ದುಡಿದ ಗ್ರಾಮದ ನಿವೃತ್ತ ಶಿಕ್ಷಕ ಶರಣಯ್ಯ ಮಾಸ್ತರ ಬೆಲ್ಲದ ಅವರಿಗೆ 'ಧರ್ಮಶಿರೋಮಣಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಮದ ಮುಖಂಡರಾದ ಸಿದ್ದಣ್ಣಸಾಹು ಜೀವಣಗಿ, ರಾಜುಗೌಡ ಪೊಲೀಸ್ ಪಾಟೀಲ, ವೀರೇಶ ಚಾಗಿ ಮತ್ತಿತರರು ಪಾಲ್ಗೊಂಡಿದ್ದರು.

25ರಂದು ಧರಣಿ ಸತ್ಯಾಗ್ರಹ
ಗುಲ್ಬರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಜೂನ್ 25ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ನಿರ್ಧರಿಸಿದೆ. ಒಂದು ವೇಳೆ ತಮ್ಮ ಬೇಡಿಕೆಗಳನ್ನು ಜೂನ್ 16ರೊಳಗೆ ಸ್ಪಂದಿಸದಿದ್ದಲ್ಲಿ ಧರಣಿ ಸತ್ಯಾಗ್ರಹ ಅನಿವಾರ್ಯವಾಗಲಿದೆ ಎಂದು ಮಹಾಮಂಡಲದ ಅಧ್ಯಕ್ಷ ಡಾ.ಕೆ.ಎಸ್. ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012ರ ಅನ್ವಯ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವ ಸರ್ಕಾರಿ ಇಲಾಖೆ, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ದಿನಗೂಲಿ ನೌಕರರ ಹೆಸರುಗಳನ್ನು ಫೆಬ್ರವರಿ 15, 2014ರೊಳಗೆ ಅಧಿಸೂಚಿಸಲು ನಿಗದಿಪಡಿಸಲಾಗಿತ್ತು. ಆದರೆ ಗಡವು ಮುಗಿದು 4 ತಿಂಗಳು ಕಳೆದರೂ, ಹೆಸರುಗಳನ್ನು ಅಧಿಸೂಚಿಸಿಲ್ಲ ಮತ್ತು ನೌಕರರ ವೇತನದ ಆಧಾರದ ಮೇಲೆ ಬಾಕಿ ವೇತನ ತಕ್ಷಣವೇ ವಿತರಿಸುವುದಕ್ಕೆ ಆದೇಶ ನೀಡಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

'ಪರಸ್ಪರ ಸಹಕಾರ ಮನೋಭಾವ ಅಗತ್ಯ'
ಆಳಂದ: ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪರಸ್ಪರ ಪ್ರೀತಿ, ಸಹಕಾರ ತಂದುಕೊಳ್ಳುವುದು ಅಗತ್ಯವಾಗಿದೆ ಎಂದು ಮುಖಂಡ ದಿಲೀಪ ಕ್ಷೀರಸಾಗರ ಹೇಳಿದರು. ತಾಲೂಕಿನ ಕೋತನಹಿಪ್ಪರಗಾ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವೈಮನಸ್ಸು ದೂರವಾದರೆ ಮಾತ್ರ ಗ್ರಾಮೀಣ ಭಾಗದಲ್ಲಿ ತಂಟೆ ಮುಕ್ತ ಗ್ರಾಮಗಳಾಗಿ ಪರಿವರ್ತನೆ ಆಗುತ್ತವೆ. ಸಂಕಷ್ಟದಲ್ಲಿದ್ದವರಿಗೆ ಆರ್ಥಿಕ ಸಹಕಾರ, ಬದುಕಿನ ಗುರಿ ತೋರಿಸುವುದೇ ಸನ್ಮಾರ್ಗವಾಗಿದೆ ಎಂದರು. ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಮೆರವಣಿಗೆ ಉದ್ಘಾಟಿಸಿದರು. ಪಿಆರ್‌ಪಿ ರಾಜ್ಯ ಅಧ್ಯಕ್ಷ ಪ್ರಕಾಶ ಮೂಲಭಾರತಿ, ಗ್ರಾಮದ ಪರುತಪ್ಪಾ ಇಸರಾಜಿ, ಸಿಪಿಐ ಕೆ.ಎಸ್. ಹಟ್ಟಿ, ಶ್ರೀಚಂದ ಗ್ರಾಪಂ ಅಧ್ಯಕ್ಷ ದೀಪಕ್ ಹೊಡಲ್, ಡಿಎಲ್‌ಎ ರಾಜ್ಯ ಕಾರ್ಯದರ್ಶಿ ಸುರೇಂದ್ರ ತವಡೆ, ರಮೇಶ ಮೂಲಭಾರತಿ, ಕರುಣ ಗಾಯಕವಾಡ, ಶಾನೂರ ಅನ್ಸಾರಿ, ಶ್ರೀಧರ್ ಪೊಲೀಸ್ ಪಾಟೀಲ, ದಲಿತ ಸೇನೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಉಪನ್ಯಾಸಕ ಮರೆಪ್ಪಾ ಬಡಿಗೇರ, ಸಂತೋಷ ಶಿಂಧೆ, ತುಕಾರಾಮ ಹೆಬಳಿ, ಪಿಎಸ್‌ಐ ಮಹಾದೇವ ಪಂಚಮುಖಿ, ನಿಂಬರಗಾ ಪಿಎಸ್‌ಐ ಸಂತೋಷ ಆಗಮಿಸಿದ್ದರು. ಅಂಬದಾಸ ಕಾಂಬಳೆ ಸ್ವಾಗತಿಸಿ, ಬಾಬು ಕಾಂಬಳೆ ನಿರೂಪಿಸಿದರು. ಜಯ ಬಾದ್ಧೂರ ಕ್ಷೀರಸಾಗರ ವಂದಿಸಿದರು.

ಮಾಂಗಲ್ಯ ಸರ ಕಿತ್ತು ಪರಾರಿ
ಗುಲ್ಬರ್ಗ: ಬಸವೇಶ್ವರ ನಗರದಲ್ಲಿ ಹಾಲು ತರಲು ಹೋಗಿದ್ದ ಮಹಿಳೆಯ ಕೊರಳಲ್ಲಿದ್ದ 5 ತೊಲೆ ಬಂಗಾರದ ಆಭರಣ ಕಿತ್ತುಕೊಂಡು ಹೋದ ಪ್ರಕರಣದ ಬೆನ್ನಲ್ಲೇ ಇಲ್ಲಿನ ಪ್ರಶಾಂತ ನಗರದಲ್ಲಿ ಸರಗಳ್ಳರು ಬುಧವಾರ ವಾಯುವಿಹಾರಕ್ಕೆ ಹೊರಟ್ಟಿದ್ದ ಪುಷ್ಪಾ ಆವಂಟಿ ಅವರ ಕೊರಳಿಗೆ ಕೈಹಾಕಿ 95 ಸಾವಿರ ರುಪಾಯಿ ಬೆಲೆಬಾಳುವ 4 ತೊಲೆ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಷ್ಪಾ ಅವರು ಪತಿ ವಿಶ್ವನಾಥ ಜತೆ ಜೂ. 3ರ ಮಂಗಳವಾರ ರಾತ್ರಿ 10 ಗಂಟೆಗೆ ಮನೆಯ ಮುಂದೆ ವಾಯುವಿಹಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಇಬ್ಬರು ಬೈಕ್ ಸವಾರರು ಪುಷ್ಪಾ ಅವರ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಖರ್ಗೆ ಆಯ್ಕೆ: ಸಂತಸ
ಗುಲ್ಬರ್ಗ: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ಸಂತಸ ವ್ಯಕ್ತಪಡಿಸಿದೆ. ಕೇಂದ್ರ ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿ ಗುಲ್ಬರ್ಗ ಜಿಲ್ಲೆ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ  ಖರ್ಗೆ ಅವರನ್ನು ಹೈಕಮಾಂಡ್ ಸಂಸದೀಯ ನಾಯಕರನ್ನಾಗಿ ಆಯ್ಕೆ  ಮಾಡುವ ಮೂಲಕ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದೆ ಎಂದು ಅಧ್ಯಕ್ಷ ಶೌಕತ್ ಅಲಿ ಆಲೂರ್ ತಿಳಿಸಿದ್ದಾರೆ.

ಮೂಲ ಸೌಕರ್ಯ ವಂಚಿತ ಕಾಮನಟಗಿ
ಹುಣಸಗಿ: ಕಾಮನಟಗಿ ಗ್ರಾಮ ಪಂಚಾಯಿತಿ ಸಮೀಪದ ಲಕ್ಷ್ಮೀನಗರವು ಮೂಲ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಇಲ್ಲಿರುವ 100ಕ್ಕೂ ಹೆಚ್ಚು ಮನೆಗಳವರು ಕುಡಿವ ನೀರು, ಅನಿಯಮಿತ ವಿದ್ಯುತ್ ಸರಬರಾಜಿನಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಿಪಂ ಸದಸ್ಯ, ತಾಪಂ ಸದಸ್ಯ, ಗ್ರಾಪಂ.ನಿಂದ ಯಾವುದೇ ಸ್ಪಂದನೆ ಇಲ್ಲವೆಂದು ನಾಗರಿಕರು ದೂರಿದ್ದಾರೆ. ಇಲ್ಲಿರುವ ಮಹಿಳೆಯರು ಇನ್ನು ಬಯಲು ಶೌಚಾಲಯವನ್ನೆ ಅವಲಂಬಿಸಿದ್ದಾರೆ. ಇಲ್ಲಿ ನಿರ್ಮಾಣ ಮಾಡಿರುವ ಕಿರು ನೀರು ಸರಬರಾಜು ಯೋಜನೆಗೆ ಇನ್ನ ವಿದ್ಯುತ್ ಸಂಪರ್ಕ ನೀಡಿಲ್ಲ. ಮಳೆ-ಗಾಳಿಗೆ ಇಲ್ಲಿ 11 ಕೆವಿ, ಗ್ರಾಮದ ಲೈನ್ ಸದಾ ತುಂಡರಿಸಿ ಬಿದ್ದರೂ ಕೇಳೋರಿಲ್ಲವೆಂದು ಗ್ರಾಮಸ್ಥರು ಚುನಾವಣೆ ನಿಮಿತ್ತ ಆಗಮಿಸಿದ್ದ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರಿಗೆ ಲಿಖಿತ ದೂರು ನೀಡಿದರು. ತಹಸೀಲ್ದಾರ್ ಅವರು ಈ ಕುರಿತು ಪಿಡಿಒಗೆ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಸರ್ಕಾರ ಕೊಡ ಮಾಡುವ ಶೌಚಾಲಯ ಸೌಲಭ್ಯ ಪಡೆದು ಬಯಲು ಶೌಚಾಲಯಕ್ಕೆ ಮುಕ್ತಾಯ ಹಾಡಿ ಎಂದು ತಹಸೀಲ್ದಾರ್ ಮನವಿ ಮಾಡಿದರು. ರಾಜು ಹೀರೂರು, ಪೀರಸಾ ನದಾಫ, ಬಸವರಾಜ ಮನವಿ ನೀಡಿದರು.

ಮಹಾಮಂಡಳ ನಿರ್ದೇಶಕರ ಆಯ್ಕೆ
ಹುಣಸಗಿ: ಕಕ್ಕೇರಾ ಸೌರಾಷ್ಟ್ರ ಮಹಾಮಂಡಳದ ಚುನಾವಣೆ ಮೇ 24ರಂದು ನಡೆದು ಈ ಕೆಳಗಿನ 18 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸೌರಾಷ್ಟ್ರ ಸೋಮನಾಥ ಸಿದ್ದಾಪುರ ವಿತರಣಾ ಕಾಲುವೆ ಮಟ್ಟದ ನೀರು ಬಳಕೆದಾರ ಸಹಕಾರ ಸಂಘಗಳ ಮಹಾಮಂಡಳ ನಿ. ಕಕ್ಕೇರಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಇಸ್ಮಾಯಿಲ್ ಸಾಬ್, ಚಿದಾನಂದ ಕಮತಗಿ, ದೇವಿಂದ್ರಪ್ಪ ಹಾಲಭಾವಿ, ನಂದಪ್ಪ ವಾರಿ, ನಂದಪ್ಪ ಕಕ್ಕೇರಿ, ಪೀರಾನಾಯಕ, ಬಸರವರಾಜ ಭೀಮಣ್ಣ, ಭೀಮರಾಯ ಸಿದ್ದಾಪುರ, ಮಲ್ಲಣ್ಣ ಅಸ್ಕಿ, ಯಂಕಣ್ಣ ಗೌಡ, ರಂಗಪ್ಪ ಢಂಗಿ, ಶರಣಗೌಡ, ರಾಜೇಸಾಬ, ಶರಣಗೌಡ ಸಿದ್ದಾಪುರ, ಸಿದ್ದಪ್ಪ ನಿಂಗಪ್ಪ. ಮಲ್ಲನಗೌಡ ಮೇಟಿ, ಬಂದಗಿಸಾಬ ಚುನಾಯಿತರಾಗಿದ್ದಾರೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಿನ ವಿತರಣೆ, ಕರ ಸಂಗ್ರಹ, ರೈತರಲ್ಲಿ ಸಹಕಾರ ಬಲಗೊಳಿಸುವುದು ಮಹಾಮಂಡಳದ ಉದ್ದೇಶ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇದೇ ಮಹಾಮಂಡಳದ ಕಚೇರಿ ಕಕ್ಕೇರಿಯಲ್ಲಿ ನಡೆಯಲಿದೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಬಿ. ಕೊಂಗವಾಡ ತಿಳಿಸಿದ್ದಾರೆ.

ತಡೆಗೋಡೆ ನಿರ್ಮಾಣಕ್ಕೆ ಆಗ್ರಹ
ಯಾದಗಿರಿ: ಶಹಾಪುರ ತಾಲೂಕಿನ ಕನ್ಯಾಕೊಳ್ಳುರು ಸಮೀಪದ ಟೋಕಾಪುರ ರಸ್ತೆಯ ಹಳ್ಳದ ಸೇತುವೆಗೆ ತಡೆಗೋಡೆ ಇಲ್ಲದೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಭಗೀರಥ ಉಪ್ಪಾರ ಸಂಘದ ತಾಲೂಕು ಯುವ ಘಟಕದ ಅಧ್ಯಕ್ಷ ಡಿ.ಎಸ್. ಮಾಳಿಂಗರಾಯ ತಿಳಿಸಿದ್ದಾರೆ. ಸವಾರರು ಸೇತುವೆಯ ಕೆಳಗಡೆ ಬಿದ್ದರೆ ಮೇಲೆ ಎತ್ತಲು ಆಗಲಾರದಂತ ಪರಿಸ್ಥಿತಿ ಉಂಟಾಗಿದೆ. ಇದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಸೇತುವೆಗೆ ತಡೆಗೋಡಿ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಮುಂದೆ ಪ್ರತಿಭಟಿಸಲಾಗುವುದು. ಶ್ರೀನಿವಾಸ ಕನ್ಯಾಕೌಳೂರ, ಭಾಗಣ್ಣ ಕನ್ಯಾಕೌಳೂರ, ದೇವಿಂದ್ರಪ್ಪ ತಡಿಬಿಡಿ, ತಿಮ್ಮಣ್ಣ ಪೂಜಾರಿ, ಸಣ್ಣ ಭೀಮಣ್ಣ ಕೋಟಗೇರಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ನಾಲೆ ನವೀಕರಣ ಪುನರಾರಂಭ
ಹುಣಸಗಿ: ಕಳೆದ ಒಂದು ವಾರದಿಂದ ನಾರಾಯಣಪುರ ಎಡದಂಡೆ ಮುಖ್ಯ ನಾಲೆಯ ಸಮೀಪ ಕಾಲುವೆಯು ಗುಡ್ಡವನ್ನು ಸುತ್ತುಬಳಸಿ  ಸಾಗುವುದು. ನವೀಕರಣಕ್ಕೂ ಮೊದಲು 20 ವರ್ಷಗಳಲ್ಲಿ ಇದೇ ಸ್ಥಳದಲ್ಲಿ ಸಾಕಷ್ಟು ಬಾರಿ ಕಾಲುವೆ ಕುಸಿತದಿಂದ ರೈತರ ಫಸಲಿಗೆ ಹಾನಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
 ಕಾಲುವೆಯ ನವೀಕರಣ ಮಾಡಲು ಕೆಬಿಜೆಎನ್‌ಎಲ್ ಮುಂದಾದಾಗ ಅಲ್ಲಿರುವ ಹಳೆಯ ಬಿರುಕುಗಳು ನೀರಾವರಿ ಇಲಾಖೆಯ ಇಂಜನಿಯರಗಳ, ತಂತ್ರಜ್ಞರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ದಿಸೆಯಲ್ಲಿ ನೀರಾವರಿ
  ತಂತ್ರಜ್ಞರಾದ ಅರವಿಂದ ಗಲಗಲಿ, ಸುಬ್ಬಾರಾವ, ಅವರ ಸಲಹೆ ಪಡೆದು ಕಾಲುವೆ ನವಿಕರಣ ಮಾಡುವ ತೀರ್ಮಾನಕ್ಕೆ ಬರಲಾಯಿತು. ಅದರಂತೆ ಬುಧವಾರ 60 ನೇ ಕಿ.ಮೀ. ಸ್ಥಳಕ್ಕೆ ನಾರಾಯಣಪುರ ಕೆಬಿಜೆಎನ್‌ಎಲ್ ಅಭಿಯಂತರರಾದ ಎಸ್.ಕೃಷ್ಣಮೂರ್ತಿ ಅವರು ಭೇಟಿ ನೀಡಿ ತಂತ್ರಜ್ಞರ ಸಲಹೆಯಂತೆ ನವೀಕರಣ ಮಾಡಲು ಸೂಚಿಸಿದರು. 60ನೇ ಕಿ.ಮೀ.ನಲ್ಲಿ ನವೀಕರಣ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಈ ಹಿಂದೆ ಪತ್ರಿಕೆ ವರದಿ ಮಾಡಿದ್ದನ್ನು ಸ್ಮರಿಸಬಹುದು.

'ಐಟಿಐ' ಫಲಿತಾಂಶ
ಗುರುಮಠಕಲ್: ನಗರದ ಎಂಎಂ ಗಾರಂಪಲ್ಲಿ ಐಟಿಐ ಕಾಲೇಜಿಗೆ ಪ್ರಥಮ ಸೆಮಿಸ್ಟರ್‌ನಲ್ಲಿ ಶೇ.100 ಫಲಿತಾಂಶ ಬಂದಿದೆ. ಫಿಟ್ಟರ್ ವಿಭಾಗದ 19 ವಿದ್ಯಾರ್ಥಿಗಳು, ಎಲೆಕ್ಟ್ರಿಷಿಯನ್ ವಿಭಾಗದ 20 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು, ಫಿಟ್ಟರ್ ವಿಭಾಗದಲ್ಲಿ 17 ಉನ್ನತ ಶ್ರೇಣಿ, 2 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಲೆಕ್ಟ್ರಿಷಿಯನ್ ವಿಭಾಗದಲ್ಲಿ 8 ಉನ್ನತ ಶ್ರೇಣಿ, 12 ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement