ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಾಕಿ ಪಾವತಿ:10ರಂದು ಹೆದ್ದಾರಿ ತಡೆ ಚಳವಳಿ

Srinivasa Murthy VN
Updated On : 8 Jun 2014, 11:11 am

ಆಳಂದ: ಭೂಸನೂರು ಸಕ್ಕರೆ ಕಾರ್ಖಾನೆಯ ರೈತರಿಗೆ ಕಬ್ಬಿನ ಬಾಕಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡದಿದ್ದರೆ ಜೂ. 10ರಂದು ವಾಗ್ದರಿ-ರಿಬ್ಬನಪಲ್ಲಿ ಹೆದ್ದಾರಿ ತಡೆ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಹಾಗೂ ರಾಜ್ಯ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ್  ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಎನ್‌ಎಸ್‌ಎಲ್ ಕಂಪೆನಿಯವರು ರೈತರ ಬಾಕಿ ಹಣವನ್ನು ಅವರ ಖಾತೆಗೆ ಹಾಕಿದ ನಂತರವೇ ಕಾರ್ಖಾನೆಗೆ ಹಾಕಿದ ಬೀಗವನ್ನು ತೆಗೆಯುವುದಾಗಿ ಸ್ಪಷ್ಟಪಡಿಸಿದರು.
ಆಡಳಿತ ಮಂಡಳಿ ರಾಜಕಾರಣ:  ಕಾರ್ಖಾನೆಯ ಆಡಳಿತ ಮಂಡಳಿ ರಾಜಕಾರಣ ಮಾಡುತ್ತಿದೆ. ಅವರಿಗೆ ಜಿಲ್ಲೆಯ ಕಬ್ಬು ಬೆಳೆಗಾರರ ಹಿತವನ್ನು ರಕ್ಷಿಸುವುದು ಬೇಕಾಗಿಲ್ಲ.
  ಅವರಿಗೆ ಸೇವಾಮನೋಭಾವನೆ ಇಲ್ಲ. ವಾಣಿಜ್ಯೀಕರಣ ಹಾಗೂ ವ್ಯಾಪಾರೀಕರಣದ ಉದ್ದೇಶ ಇಟ್ಟುಕೊಂಡು ಕಾರ್ಖಾನೆಯನ್ನು ಗುತ್ತಿಗೆ ಮೇಲೆ ಪಡೆದುಕೊಂಡಿದ್ದಾರೆ.
  ಕೂಡಲೇ ಆಡಳಿತ ಮಂಡಳಿ ಇಂತಹ ರಾಜಕಾರಣ ಹಾಗೂ ರೈತ ವಿರೋಧಿ ನೀತಿಯನ್ನು ಕೈಬಿಟ್ಟು, ರೈತರ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಎಂದು  ಸಲಹೆ ಮಾಡಿದರು.
ದಲ್ಲಾಳಿಯಂತೆ ವರ್ತನೆ: ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಹಾಗೂ ಜೈ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಅವರು ಮಾತನಾಡಿ, ಕಾರ್ಖಾನೆಯ ಆಡಳಿತ ಮಂಡಳಿ ದಲ್ಲಾಳಿಯಂತೆ ವರ್ತಿಸುತ್ತಿದೆ. ರೈತರ ಹೋರಾಟವನ್ನು ವಿಭಜಿಸಿ, ಕಂಪೆನಿಗೆ ಲಾಭ ಮಾಡಿಕೊಡುವ ದುರುದ್ದೇಶಪೂರಿತ ಹೇಳಿಕೆಯನ್ನು ಕೊಡುತ್ತಿದ್ದಾರೆ. ಅವರ ಹೇಳಿಕೆಗೆ ಯಾರೊಬ್ಬ ರೈತರು ಕಿವಿಗೊಡಬಾರದು ಎಂದರು.
ಅಸಹಾಯಕರು: ರಾಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಅವರು ಸಹ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳದೇ ಅಸಹಾಯಕರಾಗಿದ್ದಾರೆ.
  ರಾಜ್ಯ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ರೈತರ ಬಾಕಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಅವರು, ಕೂಡಲೇ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಜೂ. 10ರಂದು ಹೆದ್ದಾರಿ ರಸ್ತೆ ತಡೆ ಚಳುವಳಿ ನಡೆಸುವುದಾಗಿ ಎಚ್ಚರಿಸಿದರು.

ನಿರ್ಮಲ ಗ್ರಾಮವಾಗಿಸಲು ಮನವಿ
ಲಿಂಗಸ್ಗೂರು: ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಅನೇಕ ಸವಲತ್ತು ನೀಡಿದ್ದು, ಪ್ರತಿಯೊಬ್ಬರೂ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ನಿರ್ಮಲ ಗ್ರಾಮವನ್ನಾಗಿ ಮಾಡಬೇಕೆಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಕರೆ ನೀಡಿದರು.
ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಚೆಕ್ ವಿತರಿಸಿ, ನಿರ್ಮಲ ಭಾರತ ಯೋಜನೆಯಡಿ ಫಲಾನುಭವಿಗಳಿಗೆ ರು. 4700, ಉದ್ಯೋಗ ಖಾತ್ರಿ ಯೋಜನೆಯಡಿ ರು. 5400 ಸೇರಿ ಒಟ್ಟು 10 ಸಾವಿರ ರು. ಪಾವತಿಸಲಾಗುವುದು. ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರು. 5 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದೆಂದು ತಿಳಿಸಿದರು. ಫೀಡ್‌ಬ್ಯಾಕ್ ಫೌಂಡೇಷನ್ ಯೋಜನಾ ನಿರ್ದೇಶಕ ಶಿವಕುಮಾರ ಶರ್ಮ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement