ಕಾಗದದಲ್ಲಿ ಬಿಸಿಯೂಟ: ಅಧಿಕಾರಿಗಳಿಂದ ಪರಿಶೀಲನೆ
ಆಳಂದ: ಕಾಗದದಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಿದ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ ಯೋಜನೆಯ ಹಿರಿಯ ಶಿಕ್ಷಣಾಧಿಕಾರಿ, ಸಹಾಯಕ ನಿರ್ದೇಶಕರು ತಾಲೂಕಿನ ನಿಂಬರ್ಗಾ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಪರಿಶೀಲಿಸಿದರು.
ಹಠಾತ್ ಭೇಟಿ ನೀಡಿದ ಜಿಲ್ಲಾ ಸಹಾಯಕ ನಿರ್ದೇಶಕ ಸೂರ್ಯಕಾಂತ ಮದಾನೆ ಮಾತನಾಡಿ, ಶಾಲೆಗಳು ಆರಂಭವಾಗಿ ತಿಂಗಳಾದರು , ಬಿಸಿಯೂಟದಲ್ಲಿ ಗುಣಮಟ್ಟದ ಆಹಾರ ತಯಾರಿಸುವುದು ಹಾಗೂ ಶುಚಿತ್ವ ಕಾಪಾಡಲು ಸಂಬಂಧಿಸಿದ ಶಿಕ್ಷಕರು ಹೆಚ್ಚು ಮುತುವರ್ಜಿ ವಹಿಸಬೇಕು. ಅಕ್ಷರ ದಾಸೋಹ ಯೋಜನೆಯ ಶಿಕ್ಷಕರು ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಕಾಗದದಲ್ಲಿ ಊಟ ನೀಡಬಾರದು. ಅಡುಗೆ ಸಿದ್ಧಗೊಂಡ ಮೇಲೆ ಮೊದಲು ಶಿಕ್ಷಕರು ಸೇವಿಸಿದ ನಂತರವೇ ಮಕ್ಕಳಿಗೆ ನೀಡಬೇಕು. ಹಾಗೂ ಆ ಅಡುಗೆಯ ಪದಾರ್ಥ ಹಾಗೂ ಆಹಾರ ಧಾನ್ಯಗಳ ಶಾಂಪಲ್‌ನ್ನು ತೆಗೆದಿಡಬೇಕು. ಒಂದು ವೇಳೆ ಏನಾದರೂ ಆಹಾರದಲ್ಲಿ ಅವಘಡ ಸಂಭವಿಸಿದರೆ ಶಾಂಪಲ್ ಧಾನ್ಯಗಳನ್ನು ಪರಿಶೀಲಿಸಬಹುದು. ಇಲ್ಲದಿದ್ದರೇ ಶಿಕ್ಷಕರೇ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಂದಾರ ಮಾತನಾಡಿ, ತಾಲೂಕಿನಲ್ಲಿ ಆರು ನೂರಏಪ್ಪತ್ತೋಬತ್ತು ಕ್ವೀಂಟಲ್ ಅಕ್ಕಿಯನ್ನು ಪೂರೈಸಲಾಗಿದೆ. ಬೇಸಿಗೆ ಅವಧಿಯಲ್ಲಿ ಕೆಲ ಶಾಲೆಗಳಲ್ಲಿ ಬಿಸಿಯೂಟ ಮಕ್ಕಳಿಗೆ ನೀಡಲಾಗಿದೆ. ಕೆಲವು ಕಡೆ ನೀಡಲಾಗಿಲ್ಲ. ಆದರೆ ನೀಡದ ಶಾಲೆಗಳಲ್ಲಿ ಆಹಾರ ಧಾನ್ಯಗಳು ಎಲ್ಲಿ ಪೋಲಾಗಿವೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ನಿಂಬರ್ಗಾ ಶಾಲೆಯಲ್ಲಿ ನೀರಿನ ಕೊರತೆಯಿಂದಾಗಿ ಮಕ್ಕಳಿಗೆ ಕಾಗದದ ಮೇಲೆ ಬಿಸಿಯೂಟ ನೀಡಲಾಗುತ್ತಿತ್ತು. ಇನ್ನೂ ಮುಂದೆ ಈ ರೀತಿಯಾಗದಂತೆ ತಟ್ಟೆಗಳನ್ನು ಉಪಯೋಗಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಬಿಸಿಯೂಟ ನಿರ್ವಹಣೆಯಲ್ಲಿ ಶಿಕ್ಷಕರ ಕರ್ತವ್ಯ ಲೋಪ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದರು. ಸಿದ್ದರಾಮ ಚನ್ನಗುಂಡ, ಮುಖ್ಯೋಪಾದ್ಯಾಯಿನಿ ನಿರಂಜನಾ ಹೊಸಮನಿ, ಗ್ರಾ.ಪಂ ಅಧ್ಯಕ್ಷ ಬಸಣ್ಣ ನಡುಗಡ್ಡಿ, ಪಿಡಿಓ ಬಾಬುಗೌಡ ಪಾಟೀಲ್, ಸಿಆರ್‌ಪಿ ದೊಂಡಿರಾಮ ಹಾಜರಿದ್ದರು.