27 ಗಣಿ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್
ಮುದಗಲ್: ಪಟ್ಟಣ ಸೇರಿದಂತೆ ಮಾಕಾಪುರ, ಆದಾಪುರ, ವ್ಯಾಸನಂದಿಹಾಳ ಸಿವಾರದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ ಮುದಗಲ್ ಮತ್ತು ಮಸ್ಕಿ ಠಾಣೆಯಲ್ಲಿ 27 ಜನರ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅಕ್ರಮ ಗಣಿಗಾರಿಕೆ ಬಗ್ಗೆ ತಾಲೂಕಿನ ವಿವಿಧ ಸಂಘಟನೆಗಳು ಮಾಡಿದ ಆರೋಪ ಮತ್ತು ಪ್ರತಿಭಟನೆ ಹಕ್ಕೊತ್ತಾಯಕ್ಕೆ ಮಣಿದ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ನಿರ್ದೇಶನದಂತೆ ಕಂದಾಯ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಸರ್ವೆ ಇಲಾಖೆ, ಜಂಟಿ ತಂಡ ಸೆಟ್‌ಲೈಟ್ ಸರ್ವೆ ನಡೆಸಿದ್ದರು.
ಸಹಾಯಕ ಆಯುಕ್ತರ ಸೂಚನೆ: ಆಗ ಪಟ್ಟಾ ಜಮೀನು ಬದಲಿಗೆ ಸರ್ಕಾರಿ ಜಮೀನಿನಲ್ಲಿ ಗಣಿಗಾರಕೆ ನಡೆಸಿದ್ದಲ್ಲದೆ, ರಾಜ್ಯ ಧನ ವಂಚಿನೆ, ತ್ಯಾಜ್ಯ ವಸ್ತು ವಿಲೇವಾರಿಯಲ್ಲಿ ಲೋಪದೋಷ ಮುಂತಾದ ಅಕ್ರಮ ಗಣಿಗಾರಿಕೆ ಬೆಳಕಿಗೆ ಬಂದಿದೆ. ಈ ವಿಷಯಗಳ ಬಗ್ಗೆ ಸಮಗ್ರ ವರದಿ ಆಧರಿಸಿ ಸಂಬಂಧಿಸಿದ ಅಕ್ರಮಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಸ್ಥಳೀಯ ಕಂದಾಯ ನಿರೀಕ್ಷಕರಿಗೆ ಅಕ್ರಮ ಗಣಿ ತನಿಖೆ ತಂಡದ ಮುಖ್ಯಸ್ಥ ಸಹಾಯಕ ಆಯುಕ್ತ ಟಿ.ಯೋಗೇಶ ಸೂಚಿಸಿದ್ದರಿಂದ ಪ್ರಕರಣ ದಾಖಲಿಸಲಾಗಿದೆ.
ಯಾರ್ಯಾರ ವಿರುದ್ಧ ಪ್ರಕರಣ?: ಮಸ್ಕಿ ಠಾಣೆಯಲ್ಲಿ ಸಯ್ಯದ್ ನಜೀರ್ ಬಹದ್ದೂರ್ ಮುದಗಲ್, ಚಿನ್ನಪ್ಪ ಈರಸಂಗಪ್ಪ ಮುದಗಲ್, ಚನ್ನವೀರಪ್ಪಗೌಡ ವೀರನಗೌಡ ಆದಾಪುರ, ಸೈಯ್ಯದ್ ನಜೀರ್ ಅಹ್ದದ್ ಮುದಗಲ್, ಸಿದ್ದರಾಮಪ್ಪ ಬಸಲಿಂಗಪ್ಪ ಸಂತೆಕೆಲ್ಲೂರು.
ಮುದಗಲ್ ಠಾಣೆಯಲ್ಲಿ ಚಿನ್ನಪ್ಪ, ಚನ್ನವೀರಪ್ಪಗೌಡ ವೀರಪ್ಪ, ಮಹಾಂತಗೌಡ ಮಲ್ಲನಗೌಡ, ದಾವೂದ್ ಗೂಡಸಾಬ್, ರೇಖಪ್ಪ ರಾಠೋಡ, ರಾಜಶೇಖರ ಸೋಮಶೇಖರ, ಸಿದ್ದರಾಮಪ್ಪ, ವೀರಯ್ಯ ಗಂಗಯ್ಯ, ತಿಮ್ಮನಗೌಡ ಪಾಟೀಲ್, ಕೆ.ವಿ. ನಾಗಲಕ್ಷ್ಮಿ, ಮಹ್ಮದ್ ಇಕ್ಬಾಲ್ ಆಬ್ದುಲ್ ಕಲೀಲ್, ಈರಪ್ಪ ಚನ್ನವೀರಪ್ಪ, ಶರಣಗೌಡ ಲಿಂಗನಗೌಡ, ಪಾಯಲ್ ಜ್ಯೋತಿ ಗಾಂಧಿ, ಡಿ.ಎಸ್. ಹೂಲಗೇರಿ, ಕಮಲಾದೇವಿ ಬಸವರಡ್ಡಿ, ಸಣ್ಣ ದುರಗಪ್ಪ ಬಂಡಿ, ವೆಂಕಟೇಶ ಗುಡಗುಂಟಿ, ಅಶೋಕಗೌಡ ಪಾಟೀಲ್, ವೆಂಟೇಶ ವಿಠ್ಠಲ್, ದಾವುದ್ ಸಾಬ್ ಗೂಡಸಾಬ್, ಮಹ್ಮದ್ ಇಕ್ಬಾಲ್, ಸತ್ಯಪ್ಪ ದಾಸಪ್ಪ ಅವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ತನಿಖೆಯಿಂದ ಬಹಿರಂಗ: ಮುದಗಲ್, ಮಾಕಾಪುರ, ಆದಾಪುರ ಗ್ರಾಮಗಳಲ್ಲಿ ನಡೆಯುತ್ತಿರುವ ಗ್ರಾನೈಟ್ ಗಣಿಗಾರಿಕೆ ಬಳ್ಳಾರಿ ಗಣಿಗಾರಿಕೆಯನ್ನೂ ಮೀರಿಸುವಂತಿದೆ ಎಂದು ಪ್ರಗತಿಪರ ಸಂಘಟನೆಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದವು. ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಗಳು ಗಣಿಗಾರಿಕೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.
ಜಿಲ್ಲಾಧಿಕಾರಿ ನಾಗರಾಜ್ ಅವರು ಲಿಂಗಸ್ಗೂರು ಸಹಾಯಕ ಆಯುಕ್ತ ಟಿ.ಯೋಗೇಶ್ ಅವರನ್ನು ತನಿಖಾ ತಂಡದ ಅಧಿಕಾರಿಯನ್ನಾಗಿ ನೇಮಿಸಿ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು. ಸತತ ಒಂದು ತಿಂಗಳ ಪರ್ಯಂತ ತನಿಖೆ ನಡೆಸಿದ ಸಹಾಯಕ ಆಯುಕ್ತರು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರಿ ಜಮೀನಲ್ಲಿ ಗಣಿಗಾರಿಕೆ ನಡೆಸಿದ, ರಾಜ್ಯಧನ ವಂಚನೆ, ಘನ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ ಮಾಡಿದ 27 ಜನರ ವಿರುದ್ಧ ವರದಿ ಸಿದ್ಧಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಿದ್ದರು.