ಜೋಷಿ, ಶ್ಯಾಮಾಚಾರ್ಯ, ಕೋರಳ್ಳಿಗೆ 'ಜಗನ್ನಾಥ ವಿಠ್ಠಲ'
ಗುಲ್ಬರ್ಗ: ದಾಸ ಸಾಹಿತ್ಯ ಪ್ರಚಾರ ಕಾರ್ಯದಲ್ಲಿ ಕಳೆದ 13 ವರ್ಷದಿಂದ ತನ್ನನ್ನು ತೊಡಗಿಸಿಕೊಂಡಿರುವ ಇಲ್ಲಿನ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ, ಸ್ಥಳೀಯ ವಿಶ್ವ ಮಧ್ವ ಮಹಾಪರಿಷತ್ ಸಹಯೋಗದಲ್ಲಿ 13ನೇ ವಾರ್ಷಿಕೋತ್ಸವ ನಿಮಿತ್ತ ನೀಡುವ ಜಗನ್ನಾಥ ವಿಠ್ಠಲ ಸೇರಿದಂತೆ 8 ವಿವಿಧ ಪುರಸ್ಕಾರಗಳನ್ನು ಘೋಷಿಸಿದೆ.
ಸುಭಾಸಾಚಾರ್ಯ ಭೀಮಾಚಾರ್ಯ ಜೋಷಿ(ಮಾಧ್ಯಮ ಕ್ಷೇತ್ರ), ರಾಘವೇಂದ್ರರಾವ ಕೋರಳ್ಳಿ(ಸಾಮಾಜಿಕ ಸೇವೆ), ಬೆಂಗಳೂರಿನ ಎ.ಬಿ. ಶ್ಯಾಮಾಚಾರ್ಯ(ದಾಸ ಸಾಹಿತ್ಯ) ಅವರಿಗೆ ಪ್ರತಿಷ್ಠಿತ ಜಗನ್ನಾಥ ವಿಠ್ಠಲ ಪುರಸ್ಕಾರ ನೀಡಲಾಗಿದೆ. 5 ಸಾವಿರ ನಗದು ಹಣ, ಶಾಲು-ಸನ್ಮಾನ ಪತ್ರಗಳನ್ನು ಒಳಗೊಂಡಿದೆ.
ಇದಲ್ಲದೆ ಇನ್ನೂ ಹಲವು ಪುರಸ್ಕಾರಗಳನ್ನು ವಾಹಿನಿಯಿಂದ ಪ್ರಕಟಿಸಲಾಗಿದ್ದು ಅವುಗಳ ವಿವರ ಹೀಗಿದೆ.
ವೈದಿಕ ಸಾಧನೆ: ವೈದಿಕ ರಂಗದಲ್ಲಿನ ಉತ್ತಮ ಸಾಧನೆಗಾಗಿ ಶ್ರೀಧರಾಚಾರ್ಯ ನಿಂಬರ್ಗಿ ಹಾಗೂ ಗುಂಡಭಟ್ ಜೋಷಿ ನಾಗೂರ್ ಇವರು ಪುರಸ್ಕೃತರಾಗಿದ್ದಾರೆ, ತಲಾ 2 ಸಾವಿರ ನಗದನ್ನು ಈ ಪುರಸ್ಕಾರ ಒಳಗೊಂಡಿದೆ.
ಅರ್ಚಕರಿಗೆ ಪುರಸ್ಕಾರ: ಅರ್ಚನೆ ಕ್ಷೇತ್ರದಲ್ಲಿನ ವಿಶೇಷ ಸಾಧನೆಗೆ ಕೋರಂಟಿ ಹನುಮಂತ ದೇವರ ಮಂದಿರದ ಅರ್ಚಕ ರಾಜು ಕಮಲಾಪುರ ಹಾಗೂ ಬಿಂದಾಚಾರ್ಯ ಸಾವಳಗಿ ಇವರಿಗೆ ಪುರಸ್ಕಾರ ದೊರಕಿದ್ದು, ಇದು 1 ಸಾವಿರ ನಗದು, ಶಾಲು- ಸತ್ಕಾರ ಪತ್ರ ಹೊಂದಿದೆ.
ಯುವ ಕಲಾವಿದರಿಗೆ 2 ಸಾವಿರ ನಗದು, ಪುರಸ್ಕಾರ ನೀಡಲಾಗಿದ್ದು, ಅದು ಈ ಬಾರಿ ಕಲಾವಿದ ಅನಂತ ಜೋಷಿ ಮಿಸ್ತ್ರಿ ಇವರಿಗೆ ದಕ್ಕಿದೆ. ಇದಲ್ಲದೆ ಅತ್ಯುತ್ತಮ ಭಜನಾ ಮಂಡಳಿ ಪುರಸ್ಕಾರವನ್ನು ಭಾರ್ಗವಿ ಭಜನಾ ಮಂಡಳಿ ತನ್ನದಾಗಿಸಿಕೊಂಡಿದೆ.
ಭಜನಾ ಮಂಡಳಿ ಕಟ್ಟಿ ಬೆಳೆಸಿದವರಿಗೆ..: ಜಿಲ್ಲೆಯಲ್ಲಿ ಹರಿದಾಸರ ಹಾಡು, ಕೀರ್ತನೆಗಳನ್ನೆಲ್ಲ ಹಾಡುವ ಭಜನಾ ಮಂಡಲಿಗಳನ್ನು ಕಟ್ಟಿ ಬೆಳೆಸಿದ ಸಾಧನೆಗಾಗಿ ರೇಖಾ ಬೆಳಗುಂಪಿ, ವಿಜಯಲಕ್ಷ್ಮೀ ಪಾಟೀಲ್, ಮೇಘಾ ದೇಸಾಯಿ, ಶೋಭಾ ಭಂಡಾರಿ, ಜಯಶೀಲಾಬಾಯಿ ಜೋಷಿ, ಶಾರದಾಬಾಯಿ ಬುರ್ಲಿ, ರೇಖಾ ದೇಶಪಾಂಡೆ, ಅಂಜನಾ ಕುಲ್ಕರ್ಣಿ, ಶೋಭಾ ದೇಸಾಯಿ, ಸುಲಕ್ಷಣಾ ಕುಲ್ಕರ್ಣಿ, ಅನುಶ್ರೀ ದಂಡಾಪುರ, ಭಾನುಪ್ರಕಾಶ ಓಂಕಾರ, ನಿರ್ಮಲಾ ಜೋಷಿ, ರಾಧಿಕಾ ಜೋಷಿ ಹಾಗೂ ಜಯಶ್ರೀ ಪಾಗಾ ಇವರೆಲ್ಲರನ್ನು ಸಮಾರಂಭದಲ್ಲಿ ಆಹ್ವಾನಿಸಿ ವಿಶೇಷವಾಗಿ ಸತ್ಕರಿಸಲಾಗುತ್ತಿದೆ.
9ರಂದು ಪುರಸ್ಕಾರ- ಸನ್ಮಾನ ಸಮಾರಂಭ: ಸ್ಥಳೀಯ ವೆಂಕಟೇಶ್ವರ ಮಂದಿರದಲ್ಲಿ ಮಾ.9ರ ಸಂಜೆ 5 ಗಂಟೆಗೆ ಪುರಸ್ಕಾರ ಪ್ರದಾನ ಹಾಗೂ ಸತ್ಕಾರ ಸಮಾರಂಭ ನಡೆಯಲಿದೆ. ಸತ್ಯಾತ್ಮತೀರ್ಥರ ಅನುಗ್ರಹಿತ 13ನೇ ವಾರ್ಷಿಕೋತ್ಸವದಲ್ಲಿ ರಾಯಚೂರು ಕನ್ನಡ ಅಧ್ಯಾಪಕಿ ಡಾ. ಶೀಲಾದಾಸ್ ಭಾಗವಹಿಸುತ್ತಿದ್ದಾರೆ. ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ನ್ಯಾಯವಾದಿ ರಾಘವೇಂದ್ರ ನಾಡಗೌಡ, ವಿಮಮಪ ಅಧ್ಯಕ್ಷ ಅರವಿಂದ ನವಲಿ, ಪಂಡಿತ ಗೋಪಾಲಾಚಾರ್ಯ ಅಕ್ಮಂಚಿ ಭಾಗವಹಿಸುತ್ತಿದ್ದಾರೆ. ಇದೇ ದಿನ ಸಮಾರಂಭದ ನಿಮಿತ್ತ ಮ.3 ಗಂಟೆಯಿಂದಲೇ ಬ್ರಹ್ಮಪುರ ರಾಯರ ಮಠದಿಂದ ವೆಂಕಟೇಶ್ವರ ಮಂದಿರದವರೆಗೂ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಗರ ಭಜನಾ ಮಂಡಳಿಗಳವರು ಈ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆಂದು ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ಅಧ್ಯಕ್ಷ ಗೋಪಾಲಾಚಾರ್ಯ ಅಕ್ಮಂಚಿ, ಸಂಚಾಲಕ ಭೀಮಭಟ್ ಬೆಂಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.