ಆಲಿಕಲ್ಲು ಮಳೆ ಹಾನಿ ಅಧ್ಯಯನವಾಗಲಿ: ಬಿಆರ್ಪಿ
ಕ.ಪ್ರ. ವಾರ್ತೆ ಗುಲ್ಬರ್ಗ ಮಾ.10
ಹವಾಮಾನ ವೈಪರೀತ್ಯದಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದು, ಚುನಾವಣಾಧಿಕಾರಿಗಳ ವಿಶೇಷ ಅನುಮತಿ ಪಡೆದು ಈ ಭಾಗದಲ್ಲಿ ತುರ್ತು ಅಧ್ಯಯನ ತಂಡ ಕಳುಹಿಸಿ ನಷ್ಟದ ವರದಿ ಪಡೆದು ಪರಿಹಾರ ವಿತರಿಸಲು ಸರ್ಕಾರ ಮುಂದಾಗಬೇಕೆಂದು ಶಾಸಕ ಬಿ.ಆರ್. ಪಾಟೀಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ನೀತಿಸಂಹಿತೆ ಎಂಬ ನೇಪ ಹೇಳಿ ಸುಮ್ಮನೆ ಕುಳಿತುಕೊಳ್ಳುವ ಸಮಯ ಇದಲ್ಲ. ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಬಿಜಾಪುರ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಬಿದ್ದಿದರಿಂದ ಜೋಳ, ಕಡಲೆ, ಗೋದಿ, ತೋಟಗಾರಿಕೆ ದ್ರಾಕ್ಷಿ, ನಿಂಬೆ, ಪಪ್ಪಾಯಿ, ಕಲ್ಲಂಗಡಿ, ಟೊಮೆಟೋ ಅಲ್ಲದೆ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ದೊಡ್ಡ ಪ್ರಮಾಣದಲ್ಲಿ ನಷ್ಟವಾದರೂ ಸರ್ಕಾರ ಇದರ ಬಗ್ಗೆ ಚಿಂತಿಸುತ್ತಿಲ್ಲ ಎಂದು ಆರೋಪಿಸಿದರು.
ರೈತರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಕ್ಯಾಬಿನೆಟ್ ಸಭೆ ಕರೆಯಬೇಕು. ಇದೊಂದು ರಾಷ್ಟ್ರೀಯ ನಷ್ಟ ಎಂದು ಪರಿಗಣಿಸಿ, ವರದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅಲ್ಲದೆ ಪ್ರಧಾನಮಂತ್ರಿ, ಕೇಂದ್ರ ಕೃಷಿ ಸಚಿವರ ಬಳಿಗೆ ನಿಯೋಗ ತೆರಳಿ ಹಣವನ್ನು ಮಂಜೂರು ಮಾಡಿಸಿ ರೈತರಿಗೆ ವಿತರಿಸಬೇಕೆಂದು ಒತ್ತಾಯಿಸಿದರು.
12ರಂದು ಪ್ರತಿಭಟನೆ: ಮಳೆಯ ಹಾನಿ ಎಲ್ಲೆಡೆ ಆಗಿದೆ. ಆಳಂದ ತಾಲೂಕಿನಲ್ಲಿ ಸುಮಾರು 100 ಕೋಟಿಗೂ ಅಧಿಕ ಹಾನಿಯಾಗಿದೆ. ಮಳೆಯಾದ ಪ್ರದೇಶದಲ್ಲಿ ರೈತರ ಭೂಕಂದಾಯ, ಸಾಲ ಮನ್ನಾ ಮಾಡಬೇಕು, ಸಾಲ ಪಡೆಯದೆ ಕೃಷಿ ಮಾಡಿದವರಿಗೆ ಪರಿಹಾರ ವಿತರಿಸಬೇಕು. ದನ-ಕರುಗಳಿಗೆ ಮೇವು ವದಗಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಇದೇ 12ರಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ರೈತರೊಂದಿಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಚರ್ಚಿಸಿ ನಿರ್ಧಾರ: ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಬೆಂಬಲಿಸಬೇಕೆಂದು ನಾನೇನು ಹೇಳಲಾರೆ. ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಗುಲ್ಬರ್ಗ ಲೋಕಸಭೆ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ದುಡಿದವರಿಗೆ ಕೂಲಿ ಕೊಡಿ ಎಂಬ ಭಾವನೆಯಲ್ಲಿ ಅವರನ್ನು ಮರುಆಯ್ಕೆ ಮಾಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಹೀಗೆ ಹೇಳಿದ ಮಾತ್ರಕ್ಕೆ ಕಾಂಗ್ರೆಸ್‌ಗೆ ಸೇರುತ್ತೇನೆಂದಲ್ಲ ಎಂದು ಹೇಳಿದರು. ರಾಜಶೇಖರ ಯಂಕಂಚಿ ಭೂಸನೂರ, ಮಲ್ಲಿನಾಥ ಪರಣಿ, ಎಲ್.ಎಸ್.ರಾಠೋಡ್ ಇದ್ದರು.
ಸುಧಾರಣೆಯಾಗದ ಗುಲ್ಬರ್ಗ ಪಾಲಿಕೆ
ಗುಲ್ಬರ್ಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂಬ ಸಂತೋಷವಿದ್ದರೂ, ಮಹಾನಗರ ಮತ್ತು ಮಹಾನಗರ ಪಾಲಿಕೆ ಸುಧಾರಣೆಯಾಗುತ್ತಿಲ್ಲ ಎಂಬ ನೋವು ನನ್ನಲ್ಲಿ ಕಾಡುತ್ತಿದೆ. ಮಹಾನಗರ ಹಳ್ಳಿಗಿಂತಲೂ ಕಡೆಯಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಸರಿಯಾದ ಆಡಳಿತ ವ್ಯವಸ್ಥೆಯಿಲ್ಲದೆ ಕೆಲಸಗಳು ಆಮೆಗತಿಯಲ್ಲಿ ಸಾಗಿವೆ. ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.