ನಂದಗೋಕುಲದಲ್ಲಿ ಮಹಿಳಾ ದಿನಾಚರಣೆ
ಹುಣಸಗಿ:ಇತ್ತೀಚಿನ ದಿನಗಳಲ್ಲಿ ಮಹಿಳೆಯು ಉದ್ಯೋಗದ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಧನೆಯನ್ನು ತೋರುತ್ತಿದ್ದಾಳೆ. ಇಷ್ಟಕ್ಕೆ ಅದು ಸೀಮಿತವಾಗಿರದೇ ಹೆಚ್ಚಿನ ಸಾಧನೆ ಮಾಡಬೇಕಿದೆ ಎಂದು ಮೇಘಾ ದೇಶಮುಖ ಹೇಳಿದರು.
ಹುಣಸಗಿ ಪಟ್ಟಣದ ನಂದಗೋಕುಲದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳೆಗೆ ಸಾಸಿವೆ ಡಬ್ಬದಲ್ಲಿ ಹಣ ಉಳಿಸುವುದು ಗೊತ್ತು. ಮನೆಯನ್ನು ಮುನ್ನೆಡೆಸುವುದು ಗೊತ್ತು. ಮಹಿಳೆ ಸಂಸಾರಕ್ಕೆ ಮಾತ್ರ ಸೀಮಿತವಾಗಿರದೇ ವಿವಿಧ ಕ್ಷೇತ್ರಗಳಲ್ಲಿ ಭಾಗವಹಿಸುವ ಆಸಕ್ತಿ ತೋರಬೇಕು. ಅಂದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕಿ ನೀಲಾಂಬಿಕೆ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿರು. ಓಂಶಾಂತಿಯ ಬಿ.ಕೆ.ಶೋಭಕ್ಕ ಹಾಗೂ ಸಂಗಮ್ಮ ಪಾಟೀಲ್ ಉದ್ಘಾಟನೆ ಮಾಡಿದರು.
18 ರಂದು ಸ್ಥಾಯಿ ಸಮಿತಿಗಳ ಚುನಾವಣೆ
ಗುಲ್ಪರ್ಗ: ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಹಿಂದುಳಿದ ವರ್ಗದ (ಮಹಿಳೆ) ಮತ್ತು ಉಪಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದರೊಂದಿಗೆ ಸ್ಥಾಯಿ ಸಮಿತಿಗಳಿಗಾಗಿ ಚುನಾವಣೆಯನ್ನು ಮಾ.18 ರಂದು ಗುಲ್ಬರ್ಗ ಜಿಪಂ ಹಳೆ ಸಭಾಂಗಣದಲ್ಲಿ ಜರುಗಿಸಲಾಗುವುದು ಎಂದು ಗುಲ್ಬರ್ಗ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲನ್ ಬಿಸ್ವಾಸ್ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆಯ ಮುಖಾಂತರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಚುನಾವಣೆ) (ತಿದ್ದುಪಡಿ) ನಿಯಮ 2010ರನ್ವಯ ನಿಯಮ-71ಕ್ಕೆ ತಿದ್ದುಪಡಿ ತಂದು ಮಹಾಪೌರರ, ಉಪಮಹಾಪೌರರ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಅಧ್ಯಕ್ಷಾಧಿಕಾರಿಯಾಗಿ ನೇಮಕಗೊಂಡ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲನ್ ಬಿಸ್ವಾಸ್ ಚುನಾವಣೆ ಆದೇಶ ಹೊರಡಿಸಿದ್ದಾರೆ.
ಈ ಚುನಾವಣೆಗಾಗಿ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನು ನಾಮಪತ್ರಗಳನ್ನು ಸ್ವೀಕರಿಸಲು ಅಧಿಕೃತ ಅಧಿಕಾರಿಯೆಂದು ನಿಯುಕ್ತಿಗೊಳಿಸಲಾಗಿದೆ. ಎಲ್ಲ ಚುನಾಯಿತ ಸದಸ್ಯರು ತಮ್ಮ ನಾಮಪತ್ರಗಳನ್ನು ಚುನಾವಣೆ ನಡೆಯುವ ದಿನಾಂಕದಂದು ಮಧ್ಯಾಹ್ನ 1.30 ರೊಳಗಾಗಿ ಆಯುಕ್ತರಿಗೆ ಸಲ್ಲಿಸಲು ತಿಳಿಸಿದ್ದಾರೆ.