ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬೆಳೆಗಳ ಸಮೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ

Srinivasa Murthy VN
Updated On : 11 Mar 2014, 1:08 am

ಚಿಂಚೋಳಿ: ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಜೋಳ, ಗೋಧಿ, ಕಡಲೆ, ಕುಸುಬೆ, ಉಳ್ಳಾಗಡ್ಡಿ ಬಾಳೆ ಇನ್ನಿತರ ಬೆಳೆಗಳ ಸಮೀಕ್ಷೆ ನಡೆಸಿ ರೈತರಿಗೆ ಕೂಡಲೇ ಬೆಳೆ ಪರಿಹಾರ ನೀಡುವಂತೆ ಕರ್ನಾಟಕ ಪ್ರಾಂತ ರೈತಸಂಘ ತಾಲೂಕ ಸಮಿತಿ ಮುಖಂಡರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಮತ್ತು ಗುಡುಗು ಮಿಂಚಿನ ಆಲಿಕಲ್ಲಿನ ಮಳೆಯಾಗಿ ರೈತರು ಬೆಳೆದಿರುವ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿವೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಜೋಳ ಕಟಾವು ಮಾಡುವಷ್ಟರಲ್ಲಿಯೇ ಮಳೆಯಿಂದಾಗಿ ನಷ್ಟವಾಗಿದೆ. ಕುಸುಬೆ, ಗೋಧಿ, ಉಳ್ಳಾಗಡ್ಡಿ ಹಾಳಾಗಿವೆ. ದನಕರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವು ಮಣ್ಣಿನ ಪಾಲಾಗಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಚುನಾಯಿತ ಜನಪತ್ರಿನಿಧಿಗಳು ಚುನಾವಣೆಯ ಗುಂಗಿನಲ್ಲಿದ್ದು ರೈತರು ಪಡುವ ಸಂಕಷ್ಟವನ್ನು ಯಾರು ನೋಡುತ್ತಿಲ್ಲ. ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಪರಿಹಾರವನ್ನು ನೀಡಬೇಕೆಂದು ಶರಣಬಸಪ್ಪ ಮಮಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದರು. ತಾ. ಸಮಿತಿ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಎಂಪಳ್ಳಿ ಶಿರೆಸ್ತೆದಾರ ರವೀಂದ್ರ ದಾಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಹಣಮಂತರೆಡ್ಡಿ ಕೊಳ್ಳುರ, ಸಿದ್ದಾರ್ಥ ಠಾಕೂರ, ನಾಗಣ್ಣ ಮಾಮಿನಿ, ಪ್ರದೀಪ ತಿರಲ್ಲಾಪುರ, ಸಿದ್ದು ಹಲಚೇರಾ, ಶ್ರೀಧರ ಕನಕಪುರ, ಜಗನ್ನಾಥ ಪಾಟೀಲ್, ಜಾಫರಖಾನ್ ಇದ್ದರು.

ಮುತ್ತುಬಾಯಿ ರಾಜ್ಯಮಟ್ಟಕ್ಕೆ ಆಯ್ಕೆ
ಆಳಂದ: ಗುಲ್ಬರ್ಗ ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಕಮಲಾಪುರ ಡಯಟ್ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಇನ್‌ಸ್ಪೈರ್ ಅವಾರ್ಡ್ ಮತ್ತು ವಸ್ತು ಪ್ರದರ್ಶನದಲ್ಲಿ ತಾಲೂಕಿನ ತಡಕಲ್ ಎಂಎಆರ್‌ಜಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಮುತ್ತುಬಾಯಿ ಶಿವಪುತ್ರಪೂಜಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಎಂದು ಶಾಲೆಯ ಮುಖ್ಯ ಶಿಕ್ಷಕ ಸಂತೋಷಕುಮಾರ ಕುಲಕರ್ಣಿ ತಿಳಿಸಿದ್ದಾರೆ. ಸಾಧನೆಗೆ ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಕಾರ್ಯದರ್ಶಿ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಎಸ್.ಎಚ್. ಗೋಧೆ, ಮುಖ್ಯ ಶಿಕ್ಷಕ ಸಂತೋಷಕುಮಾರ ಕುಲಕರ್ಣಿ, ಮಾರ್ಗದರ್ಶಿ ಶಿಕ್ಷಕ ಸೂರ್ಯಕಾಂತ ಫುಲಾರ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement