ಶುದ್ಧ ಕುಡಿವ ನೀರು ಅಮೃತಕ್ಕೆ ಸಮಾನ: ಎಸ್.ಕರನಾಳೆ
ಚಿತ್ತಾಪುರ: ನೀರು ಜೀವನಕ್ಕೆ ತುಂಬಾ ಅವಶ್ಯಕ. ಜೀವ ರಕ್ಷಕ. ಅಶುದ್ಧ ನೀರು ಕುಡಿಯುವುದು ಅನಾರೋಗ್ಯಕ್ಕೆ ಆಹ್ವಾನವಿಟ್ಟಂತೆ, ಕಲುಷಿತ ನೀರು ಸೇವನೆ ಮಾಡದೆ ಶುದ್ಧವಾದ ನೀರನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ವೈದ್ಯಾಧಿಕಾರಿ ಡಾ. ಮನೋಹರ್ ಎಸ್.ಕರನಾಳೆ ಹೇಳಿದರು.
ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಬೆಂಗಳೂರು, ಪಂಚಾಯ್ತಿ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಮತ್ತು ಮೈರಾಡ್ ಸಿಡಾರ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕುಡಿಯುವ ನೀರು ಮತ್ತು ಗುಣಮಟ್ಟ ಅರಿವು ತರಬೇತಿ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು. ಸೌಂದರ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯು ನಾವು ಜೀವ ರಕ್ಷಕ ಕುಡಿಯುವ ನೀರಿಗೆ ನೀಡುತ್ತಿಲ್ಲ. ಇದು ತುಂಬಾ ಶೋಚನೀಯ ಸಂಗತಿ ಎಂದರು. ಸಂಸ್ಥೆಯ ಅಧಿಕಾರಿ ಮೌನೇಶ್ ಗೋಬರಡಗಿ ಮಾತನಾಡಿ, ಗ್ರಾಮಕ್ಕೆ ನಿರ್ಮಲ ನೀರನ್ನು ಸರಬರಾಜು ಮಾಡುವ ಸದ್ದುದೇಶ ಮತ್ತು ಗ್ರಾಮದ ನೈರ್ಮಲೀಕರಣ ದೃಷ್ಟಿಯಿಂದ ವಿಡಬ್ಲೂಎಸ್‌ಸಿ ಸದಸ್ಯರಿಗೆ ಈ 2 ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಗ್ರಾಮೀಣ ಕುಡಿವ ನೀರು ಕಾರ್ಯಕ್ರಮದಡಿ ಸಾಮರ್ಥ್ಯಭಿವೃದ್ಧಿ ಚಟುಚಟಿಕೆ ತರಬೇತಿ ಇದಾಗಿದೆ. ಗ್ರಾಮೀಣ ಮಟ್ಟದಲ್ಲಿ ಕುಡಿಯುವ ನೀರಿನ ಬಗ್ಗೆ ಅಷ್ಟೊಂದು ಮುತುವರ್ಜಿ ಇಲ್ಲದರಿಂದ ನೀರಿನಿಂದ ಬರುವ ರೋಗಗಳು ಬರುತ್ತಿವೆ ಎಂದರು. ಪಿಡಿಒ ರಮೇಶ ಶುಲ್ಪಿ ಹಾಗೂ ಮುಖ್ಯಗುರು ಗಂಗಮ್ಮ ನಾಲವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.