'ಕಾಂಗ್ರೆಸ್ಸಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ'
ಚಿತ್ತಾಪುರ: ಕೇಂದ್ರದಲ್ಲಿ 10 ವರ್ಷಗಳಿಂದ ಅಧಿಕಾರ ನಡೆಸಿದ ಕಾಂಗ್ರೆಸ್ ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದು ರಾಷ್ಟ್ರದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಗೆ ಇಎಸೈಐ ಅಸ್ಪತ್ರೆ, 371(ಜೆ) ಕಲಂ ಜಾರಿ, ಕೇಂದ್ರಿಯ ವಿಶ್ವವಿದ್ಯಾಲಯ, ಮತ್ತಿತರವುಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಮುಖಂಡರಾದ ನಾಗರಡ್ಡಿ ಪಾಟೀಲ್ ಕರದಾಳ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಸುಲ್ತಾನಪುರ, ಜಿಲ್ಲಾ ಕಾರ್ಯದರ್ಶಿ ವೀರಣ್ಣಾಗೌಡ ಪರಸರಡ್ಡಿ, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಸೋಮಶೇಖರ ಪಾಟೀಲ್, ಶೀಲಾ ಕಾಶಿ ಮಾತನಾಡಿದರು.
ಬ್ಲಾಕ್ ಅಧ್ಯಕ್ಷ ಭೀಮಣ್ಣಾ ಸಾಲಿ, ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಜಿಪಂ ಅಧ್ಯಕ್ಷ ರಮೇಶ ಮರಗೋಳ, ಎಪಿಎಂಸಿ ಅಧ್ಯಕ್ಷ ಶಿವಯೋಗಿ ಸಾಹು, ಕೆಪಿಸಿಸಿ ಸದಸ್ಯ ನಾಗರಡ್ಡಿ ಪಾಟೀಲ್ ಕರದಾಳ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಸುಲ್ತಾನಪುರ, ಜಿಲ್ಲಾ ಕಾರ್ಯದರ್ಶಿ ವೀರಣ್ಣಾ ಗೌಡ ಪರಸರಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ನಾಳೆ ಭಾರತ ನಿರ್ಮಾಣ ಪಾದಯಾತ್ರೆ
ಜೇವರ್ಗಿ: ಕಾಂಗ್ರೆಸ್ ಪಕ್ಷದ ವತಿಯಿಂದ ತಾಲೂಕಿನ ಕೊಂಡಗೂಳಿ ಗ್ರಾಮದಿಂದ- ಯಡ್ರಾಮಿ ಪಟ್ಟಣದವರೆಗೆ ಭಾರತ ನಿರ್ಮಾಣ ಪಾದಯಾತ್ರೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೃತಗೌಡ ಪಾಟೀಲ್ ವಡಗೇರಾ, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ನೇರಡಗಿ ತಿಳಿಸಿದ್ದಾರೆ.
ಮಾ.18 ರಂದು ಬೆಳಗ್ಗೆ 8ಕ್ಕೆ ತಾಲೂಕಿನ ಕೊನೆಯ ಹಳ್ಳಿ ಕೊಂಡಗೂಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಶಾಸಕ ಡಾ. ಅಜಯಸಿಂಗ್, ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ ಭಾರತ ನಿರ್ಮಾಣ ಪಾದಯಾತ್ರೆ ಆರಂಭಗೊಳ್ಳಲಿದ್ದು, ತಾಲೂಕಿನ ಕಣಮೇಶ್ವರ, ಮಾಗಣಗೇರಾ, ಖೈನೂರ್, ಹಂಚಿನಾಳ, ಯತ್ನಾಳ, ಕಡಕೋಳ ಮಾರ್ಗವಾಗಿ ಯಡ್ರಾಮಿ ಪಟ್ಟಣಕ್ಕೆ ತಲುಪಲಿದೆ.
ಪಾದಯಾತ್ರೆಯಲ್ಲಿ ತಾಲೂಕಿನ ಜಿಪಂ, ತಾಪಂ, ಹಾಗೂ ಗ್ರಾಪಂ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಂಜೆ ಯಡ್ರಾಮಿ ಪಟ್ಟಣದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಎನ್. ಧರ್ಮಸಿಂಗ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.