ಜೆಸ್ಕಾಂನಿಂದ ವಿದ್ಯುಚ್ಛಕ್ತಿ ಕಾಯ್ದೆಗೆ ಎಳ್ಳುನೀರು
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.16
ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ತನ್ನಡಿಯಲ್ಲಿ ಬರುವ ಬೀದಿ ದೀಪ, ನೀರಾವರಿ ಪಂಪ್ಸೆಟ್, ಭಾಗ್ಯ ಕುಟೀರ ಜ್ಯೋತಿ ಸ್ಥಾವರಗಳಿಗೆ ಮೀಟರ್ ಅಳವಡಿಸದೆ ವಿದ್ಯುಚ್ಛಕ್ತಿ ಪೂರೈಸುತ್ತಿದೆ. ಇದರಿಂದಾಗಿ ವಿದ್ಯುಚ್ಛಕ್ತಿ ಕಾಯ್ದೆ 2003ರ ಕಲಂ 55 ರಲ್ಲಿನ ಕಡ್ಡಾಯ ಮೀಟರ್ ಅಳವಡಿಕೆ ವಿಷಯವಾಗಿ ಜೆಸ್ಕಾಂ ಅಷ್ಟಾಗಿ ತಲೆ ಕೆಡೆಸಿಕೊಂಡಿಲ್ಲ ಎಂಬ ಸಂಗತಿ ಕಳೆದ 5 ವರ್ಷಗಳಲ್ಲಿ ಹಲವು ಹಂತಗಳಲ್ಲಿ ಸ್ಪಷ್ಟವಾಗಿದೆ.
ವಿದ್ಯುಚ್ಛಕ್ತಿ ಕಾಯ್ದೆ- 2003ರ ಪ್ರಕಾರ ಮೀಟರ್ ಇಲ್ಲದ ಯಾವ ಸ್ಥಾವರಕ್ಕೂ ವಿದ್ಯುಚ್ಛಕ್ತಿ ಪೂರೈಕೆ ಮಾಡಲೇಬಾರದು.
ಆದರೆ ಜೆಸ್ಕಾಂ ತನ್ನ ವ್ಯಾಪ್ತಿಯ 6 ಜಿಲ್ಲೆಗಳಲ್ಲಿನ (ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ) ಬೀದಿದೀಪ, ಭಾಗ್ಯಜ್ಯೋತಿ, ಕುಟೀರಜ್ಯೋತಿ, ಐಪಿ ಸೆಟ್ ಸ್ಥಾವರಗಳಿಗೆ ಮೀಟರ್ ಇಲ್ಲದೆಯೇ ವಿದ್ಯುಚ್ಚಕ್ತಿ ಪೂರೈಸುತ್ತ ವಿದ್ಯುಚ್ಛಕ್ತಿ ಕಾಯ್ದೆ 2003ರ ಕಲಂ 55 ನಿರಂತರ ಉಲ್ಲಂಘನೆ ಮಾಡುತ್ತಿದೆ.
ಜೆಸ್ಕಾಂನ ಈ ವಿದ್ಯುತ್ ದಾಸೋಹ ಸಾಮಾನ್ಯ ಗ್ರಾಹಕರ ಪಾಲಿಗೆ ಮಾರಕವಾಗಿದೆ. ದರ ಏರಿಕೆ ಸೇರಿದಂತೆ ಹಲವು ಅನಾನುಕೂಲಗಳನ್ನು ಸಹಿಸಿಕೊಳ್ಳುವ ಅನಿವಾರ್ಯತೆ ಸಾಮಾನ್ಯ ಗ್ರಾಹಕರನ್ನು ಕಾಡಲಾರಂಭಿಸಿದೆ.
ಸಾಧನೆ ಶೂನ್ಯ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) 2005 ರಿಂದ ಜೆಸ್ಕಾಂ ವ್ಯಾಪ್ತಿಯಲ್ಲಿನ ಮೀಟರಿಂಗ್ ವಿಚಾರದಲ್ಲಿ ನಿರಾಸಕ್ತಿಗೆ ತನ್ನ ಆದೇಶಗಳು, ಸೂಚನೆಗಳು, ಸುತ್ತೋಲೆಗಳ ಮೂಲಕ ಕುಟುಕುತ್ತಲೇ ಬಂದರೂ ಇಂದಿಗೂ ಕಂಪನಿ ಆ ವಿಚಾರದಲ್ಲಿ ಎಳ್ಳಷ್ಟು ಸಾಧನೆ ಮಾಡಿಲ್ಲ.
ಆಯೋಗ ನೂರಕ್ಕೆ ನೂರರಷ್ಟು ಮೀಟರಿಂಗ್ಗೆ ಕಟ್ಟುನಿಟ್ಟಾಗಿ ಸೂಚಿಸುತ್ತಲೇ ಬಂದರೂ ಜೆಸ್ಕಾಂ ಆಯೋಗದ ಈ ಆದೇಶ ಪಾಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಷ್ಟೇ ಅಲ್ಲ, ಏನಾದರೂ ಕುಂಟುನೆಪ ಹೇಳುತ್ತ ದಿನದೂಡುತ್ತ ಸಾಗಿದೆ.
ವಿರೋಧ ಯಾಕೆ: ನೀರಾವರಿ ಪಂಪ್ ಸೆಟ್ಟಿಗೆ ಮೀಟರ್ ಹಾಕಲು ಹೋದರೆ ರೈತರು ವಿರೋಧಿಸುತ್ತಾರೆಂದು ಕಂಪನಿ ಹೇಳುತ್ತಿದೆ. ಆದರೆ 2008 ರಿಂದ ಕಂಪನಿ ಇಂತಹ ಪ್ರಯತ್ನವನ್ನೇ ಮಾಡಿಲ್ಲ ಎಂದಾದ ಮೇಲೆ ರೈತರಿಂದ ವಿರೋಧ ಎಲ್ಲಿ ಬರಬೇಕು. ಅದರಲ್ಲೂ 2008 ರಿಂದ ರೈತರು ರಿಯಾಯ್ತಿ ವಿದ್ಯುಚ್ಚಕ್ತಿ ಪಡೆಯುತ್ತಿರುವುದರಿಂದ ಮೀಟರ್ ಅಳವಡಿಕೆಗೆ ಅವರು ವಿರೋಧವಾದರೂ ಯಾಕೆ ಮಾಡಬೇಕು ಹೇಳಿ..?
ಕಾಯ್ದೆ ಉಲ್ಲಂಘನೆ: ಮೀಟರ್ ಅಳವಡಿಕೆಗೆ ಸಾಕಷ್ಟು ಆರ್ಥಿಕ ಸಂಪನ್ಮೂಲ ಬೇಕು, ಅದಕ್ಕಾಗಿ ಹಣ ಹೂಡಬೇಕು ಎಂದೂ ಹೇಳುತ್ತ ಕಾಲಹರಣ ಮಾಡುತ್ತಿದೆ ಜೆಸ್ಕಾಂ. ದುರಂತವೆಂದರೆ ಇಂತಹ ಕುಂಟುನೆಪ ಹೇಳುತ್ತಲೇ ಇಂದಿಗೂ ಬೀದಿ ದೀಪ, ಐಪಿ ಸೆಟ್, ಭಾಗ್ಯ ಕುಟೀರ ಜ್ಯೋತಿ ಸ್ಥಾವರಗಳಿಗೆ ವಿದ್ಯುತ್ ಪೂರೈಸುತ್ತಿದೆ. ಮೂಲಗಳ ಪ್ರಕಾರ ಜೆಸ್ಕಾಂ ಈ ಸ್ಥಾವರಗಳಿಗೆ ಪೂರೈಸುವ ವಿದ್ಯುಚ್ಛಕ್ತಿ ಕಂಪನಿ ಪೂರೈಸುವ ಒಟ್ಟು ವಿದ್ಯುಚ್ಛಕ್ತಿಯ ಶೇ.53 ರಷ್ಟಿದೆ. ಶೇ.53 ರಷ್ಟು ವಿದ್ಯುಚ್ಛಕ್ತಿ ಮೀಟರ್ ಇಲ್ಲದಂತಹ ಸ್ಥಾವರಗಳತ್ತಲೇ ಪೂರೈಕೆಯಾಗುತ್ತಿದೆ ಎಂದ ಮೇಲೆ ಇದು ಕಾಯ್ದೆ ಉಲ್ಲಂಘನೆಯಲ್ಲದೆ ಇನ್ನೇನು..?
2005 ರಲ್ಲೇ ಕೆಇಆರ್ಸಿ ಸಂಪೂರ್ಣ ಮೀಟರೀಕರಣಕ್ಕೆ ಆದೇಶಿಸಿದ್ದರೂ 8 ವರ್ಷಗಳಿಂದ ಕಂಪನಿ ಸುಳ್ಳುಗೊಳ್ಳು ಕಾರಣಗಳನ್ನು ನೀಡುತ್ತ ವರ್ಷಗಳನ್ನು ದೂಡುತ್ತಿರುವುದು ಅಚ್ಚರಿಯ ಸಂಗತಿಯಲ್ಲದೆ ಮತ್ತೇನು. ಕಂಪನಿ ವಾರ್ಷಿಕ ಆಯೋಗದ ಮುಂದೆ ಸಲ್ಲಿಸುವ ದರ ಹೆಚ್ಚಳದ ಪ್ರಸ್ತಾವನೆಯ ಸಂದರ್ಭದಲ್ಲಿ ಆಯೋಗದವರು ಮೀಟರಿಂಗ್ ವಿಚಾರದಲ್ಲಿ ಸೂಕ್ತ ಹಾಗೂ ಕಟ್ಟುನಿಟ್ಟು ಆದೇಶಗಳನ್ನು ಕಂಪನಿಗೆ ನೀಡುತ್ತಲೇ ಬಂದಿದ್ದರೂ ಕಂಪನಿ ಇಂತಹ ಆದೇಶಗಳಿಗೂ ಜಾಣ ಕಿವುಡಾಗಿರುವುದು ದುರಂತ.
ತಪ್ಪು ಮುಚ್ಚಿಕೊಳ್ಳಲು ಈ ನಿರಾಸಕ್ತಿಯೆ: ಆಯೋಗದ ಖಡಕ್ ಆದೇಶಗಳಿಗೂ ಕ್ಯಾರೆ ಎನ್ನದಂತೆ ಜೆಸ್ಕಾಂ ಯಾಕೆ ವಿದ್ಯುಚ್ಛಕ್ತಿ ಕಾನೂನನ್ನೇ ಉಲ್ಲಂಘಿಸುತ್ತಿದೆ ಗೊತ್ತೆ, ತನ್ನಡಿಯಲ್ಲಿರುವ ಪ್ರಸರಣ ಹಾಗೂ ವಿತರಣೆಯಲ್ಲಿನ ಭಾರಿ ಪ್ರಮಾಣದ ನಷ್ಟದ ಸಂಗತಿ ಅದೆಲ್ಲಿ ಬೆಳಕಿಗೆ ಬರುವುದೋ ಎಂದು ಇಂತಹ ಲೋಪಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಬೀದಿ ದೀಪ, ಐಪಿ ಸೆಟ್, ಬಿಜೆ- ಕೆಜೆ ಸ್ಥಾವರಗಳ ಕುಂಟುನೆಪ ಒಡ್ಡಲು ಇರಲಿ ಎಂದು ಮೀಟರ್ ಅಳವಡಿಕೆಯಂತಹ ಉತ್ತಮ ಕೆಲಸಕ್ಕೆ ಬೆನ್ನು ತೋರುತ್ತಿರಬಹುದೆ ಎಂಬ ಶಂಕೆಗಳು ಮೂಡಿವೆ. ಶಹಾಬಾದ್, ಯಾದಗಿರಿ, ಬೀದರ್, ಬಸವಕಲ್ಯಾಣ, ರಾಯಚೂರು, ಸಿಂಧನೂರು, ಬಳ್ಳಾರಿಯಂತಹ ಪ್ರದೇಶಗಳಲ್ಲಿ ದಶಕಗಳಿಂದ ವಿದ್ಯುಚ್ಛಕ್ತಿ ವಿತರಣೆ- ಪ್ರಸರಣ (ಟ್ರಾನ್ಸಮಿಶನ್- ಡಿಸ್ಟ್ರಿಬ್ಯೂಷನ್)ದಲ್ಲಿ ಶೇ.25 ಕ್ಕೂ ಅಧಿಕ ಪ್ರಮಾಣದ ನಷ್ಟ ಇರುವುದು ಗುಟ್ಟೇನಲ್ಲ.
2013 ರ ಸೆಪ್ಟೆಂಬರ್ನಲ್ಲಿ ಬೀದರ್ನಲ್ಲಿ ವಿದ್ಯುಚ್ಛಕ್ತಿ ವಿತರಣೆ ನಷ್ಟದ ಪ್ರಮಾಣ ಶೇ.51.06 ನಷ್ಟು ದಾಖಲಾಗಿದ್ದು ಜೆಸ್ಕಾಂ ವ್ಯಾಪ್ತಿಯಲ್ಲಿನ ಯಡವಟ್ಟುಗಳಿಗೆ ಕನ್ನಡಿ. ಇಂತಹ ಅಧ್ವಾನಗಳಿಗೆ ಕಾರಣರಾಗಿರುವವರ ವಿರುದ್ಧ ಕಂಪನಿ ಅನುಸರಿಸುತ್ತಿರುವ ಮೃದು ಧೋರಣೆಯೂ ಸಾಮಾನ್ಯ ಗ್ರಾಹಕರಿಗೆ ಮುಳುವಾಗುತ್ತಿದೆ.
ಕರ್ನಾಟಕ ಸರ್ಕಾರ 2008ರ ತನ್ನ ಸುತ್ತೋಲೆಯಲ್ಲಿ ಮೀಟರ್ ಹೊಂದಿದ ಐಪಿ ಸೆಟ್ಗೆ ಮಾತ್ರ ರಿಯಾಯ್ತಿ ವಿದ್ಯುಚ್ಛಕ್ತಿ ನೀಡುವುದಾಗಿ ಹೇಳಿದ್ದರೂ ಜೆಸ್ಕಾಂ ತನ್ನ ವ್ಯಾಪ್ತಿಯಲ್ಲಿ ಸರ್ಕಾರದ ಈ ಸುತ್ತೋಲೆಯನ್ನೂ ಉಲ್ಲಂಘಿಸುತ್ತಿರುವುದು ದುರಂತ.
ಏಕೆಂದರೆ ಸಾವಿರಾರು ಐಪಿ ಸೆಟ್ಗಳು ಮೀಟರ್ ಇಲ್ಲದೆಯೇ ರಿಯಾಯ್ತಿ ವಿದ್ಯುಚ್ಛಕ್ತಿ ಪಡೆಯುತ್ತಿವೆ. ವಿದ್ಯುಚ್ಛಕ್ತಿ ಕಾಯ್ದೆ- 2003ರ ಜೊತೆಗೆ ಸರ್ಕಾರದ ಗಂಭೀರ ಸುತ್ತೋಲೆಗಳಿಗೂ ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಎಳ್ಳುನೀರು ಬಿಟ್ಟಿರುವುದರಿಂದಲೇ ಈ ಕಂಪನಿ ವ್ಯಾಪ್ತಿಯ ಸಾಮಾನ್ಯ ವಿದ್ಯುಚ್ಛಕ್ತಿ ಗ್ರಾಹಕರು ವಾರ್ಷಿಕ ದರ ಹೆಚ್ಚಳದ ಶಾಕ್ನಿಂದ ನರಳುವಂತಾಗಿದೆ.
ಜಾಣ ಕುರುಡು ಧೋರಣೆ ಖಂಡನೀಯ
ತನ್ನಡಿಯಲ್ಲಿನ ಮೀಟರ್ ಇಲ್ಲದ ಸ್ಥಾವರಗಳಿಗೂ ವಿದ್ಯುಚ್ಛಕ್ತಿ ನೀಡುತ್ತಿರುವ ಜೆಸ್ಕಾಂ ಧೋರಣೆ ಖಂಡನಾರ್ಹ. ಜೊತೆಗೆ ವಿತರಣೆ ನಷ್ಟ ತಗ್ಗಿಸಲೂ ಕಂಪನಿಗೆ ಸಾಧ್ಯವಾಗಿಲ್ಲ. ಇವೆಲ್ಲ ಸಂಗತಿಗಳಿಂದಾಗಿಯೇ ಸಾಮಾನ್ಯ ಗ್ರಾಹಕರು ವಾರ್ಷಿಕ ವಿದ್ಯುತ್ ದರ ಹೆಚ್ಚಳದ ಬಾರ ಹೊರುವಂತಾಗಿದೆ. ಅದ್ಯಾಕೆ ಜೆಸ್ಕಾಂ ಸಾಮಾನ್ಯ ಗ್ರಾಹಕರಿಗೆ ಹೊರೆ ಹಾಕಬೇಕು. ಪ್ರಸರಣ ನಷ್ಟ ತಗ್ಗಿಸಬೇಕು.
ಐಪಿಸೆಟ್, ಬೀದಿದೀಪ, ಭಾಗ್ಯ, ಕುಟೀರ ಜ್ಯೋತಿ ಸ್ಥಾವರಗಳಿಗೆಲ್ಲದಕ್ಕೂ ಮೀಟರ್ ಅಳವಡಿಸಿ ವಿದ್ಯುಚ್ಛಕ್ತಿ ಬಳಕೆ ಮೇಲೆ ನಿಗಾ ಇಡಲು ಯಾಕೆ ನಿರಾಸಕ್ತಿ ತನ್ನ ನಿಷ್ಟ್ರೀಯತೆಯಿಂದ ಪಾರಾಗಲು ಈ ರೀತಿ ಜೆಸ್ಕಾಂ ವಾಮಮಾರ್ಗದಲ್ಲಿ ಸಾಗುತ್ತಿರುವುದು ಸಾಮಾನ್ಯ ವಿದ್ಯುತ್ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಈ ವಿಚಾರಗಳನ್ನೆಲ್ಲ ಕೆಇಆರ್ಸಿ ಮುಂದೆ ಲಿಖಿತವಾಗಿ ಸಲ್ಲಿಸುವೆ. ವಿದ್ಯುತ್ ದರ ಹೆಚ್ಚಳದ ಕಂಪನಿ ಪ್ರಸ್ತಾವನೆಗೆ ಕೆಇಆರ್ಸಿ ನಡೆಸುವ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಈ ಸಂಗತಿ ಚರ್ಚಿಸಿ ಜೆಸ್ಕಾಂ ಅಧ್ವಾನಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗುತ್ತದೆ.
ದೀಪಕ ಗಾಲಾ
ಅಧ್ಯಕ್ಷರು, ಹೈ-ಕ ಪರಿಸರ ಜಾಗೃತಿ ಸಂರಕ್ಷಣೆ ಸಮಿತಿ
ಗುಲ್ಬರ್ಗ